ಸುಳ್ಯ (ದಕ್ಷಿಣ ಕನ್ನಡ): ಕೇರಳ ಮತ್ತು ದಕ್ಷಿಣ ಕನ್ನಡ ಗಡಿ ಭಾಗದ ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ಎರ್ಕಲ್ಪಾಡಿಯಲ್ಲಿ ಎಂಬಲ್ಲಿ ಗಂಡಾನೆಯೊಂದರ ಮೃತದೇಹ ಪತ್ತೆಯಾಗಿದೆ. ಆನೆಗಳ ಕಾದಾಟದಲ್ಲಿ ಕಾಡಾನೆ ಮೃತಪಟ್ಟಿರುವ ಬಗ್ಗೆ ಅರಣ್ಯಾಧಿಕಾರಿ ಪ್ರವೀಣ್ ಕುಮಾರ್ ಶೆಟ್ಟಿ ಅವರು ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.
ಕಾದಾಟದಲ್ಲಿ ಆನೆ ಸಾವು : ಸುಳ್ಯದ ಮಂಡೆಕೋಲು ಮೀಸಲು ಅರಣ್ಯ ಪ್ರದೇಶದಲ್ಲಿ ಕಾಡಾನೆ ಮೃತದೇಹವನ್ನು ಸ್ಥಳೀಯರು ನೋಡಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಕಾದಾಟದಲ್ಲಿ ಮೃತ ಕಾಡಾನೆ ಹಾಗೂ ಬೇರೆ ಗಂಡು ಕಾಡಾನೆಗಳ ನಡುವೆ ಕಾದಾಟ ನಡೆದು, ತೀವ್ರ ರಕ್ತಸ್ರಾವಗೊಂಡು ಆನೆ ಮೃತಪಟ್ಟಿದೆ ಎಂದು ಸುಳ್ಯ ಎಸಿಎಫ್ ಪ್ರವೀಣ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.
ಆನೆಯ ದೇಹದಲ್ಲಿ ತಿವಿದು, ಗಾಯಗೊಂಡು ರಕ್ತಸ್ರಾವವಾಗಿರುವ ಗುರುತುಗಳು ಕಂಡುಬಂದಿವೆ. ಅರಣ್ಯ ಭಾಗದ ಬೇರೆ ಕಡೆಯಲ್ಲಿ ಕಾದಾಟ ನಡೆದಿದ್ದು, ಆನೆ ಇಲ್ಲಿ ಬಂದು ಮೃತಪಟ್ಟಿದೆ. ಘಟನೆಯು ರಾತ್ರಿ ನಡೆದಿರುವ ಹಿನ್ನೆಲೆಯಲ್ಲಿ ಮೃತ ಕಾಡಾನೆಯ ಮರಣೋತ್ತರ ಪರೀಕ್ಷೆ, ಇನ್ನಿತರ ಕಾರ್ಯಗಳನ್ನು ಇದೀಗ ನಡೆಸಲಾಗುತ್ತಿದೆ. ಸುಳ್ಯ ಪಶುವೈದ್ಯಾಧಿಕಾರಿಗಳ ತಂಡದಿಂದ ಮಹಜರು ಕ್ರಿಯೆಗಳು ಆರಂಭವಾಗಿದ್ದು, ನಂತರದಲ್ಲಿ ಇಲಾಖೆಯ ಪದ್ಧತಿಯಂತೆ ಮೃತ ಕಾಡಾನೆಯ ಅಂತ್ಯಸಂಸ್ಕಾರ ಮಾಡಲಾಗುವುದು ಎಂದು ಎಸಿಎಫ್ ಪ್ರವೀಣ್ ಕುಮಾರ್ ಶೆಟ್ಟಿ ಹೇಳಿದ್ದಾರೆ.
ಘಟನಾ ಸ್ಥಳಕ್ಕೆ ಸುಳ್ಯ ಎಸಿಎಫ್ ಪ್ರವೀಣ್ ಕುಮಾರ್ ಶೆಟ್ಟಿ, ವಲಯ ಅರಣ್ಯಾಧಿಕಾರಿ ಮಂಜುನಾಥ್ ಎನ್. ಸೇರಿದಂತೆ ಅರಣ್ಯ ಇಲಾಖೆ ಅಧಿಕಾರಿಗಳು, ಪಶು ವೈದ್ಯರ ತಂಡ, ಅರಣ್ಯ ಇಲಾಖೆಯ ಸಿಬ್ಬಂದಿ ಭೇಟಿ ನೀಡಿದ್ದಾರೆ.
ಇದನ್ನೂ ಓದಿ: ಬಂಡೀಪುರದಲ್ಲಿ ಲಾರಿ ಮೇಲೆ ಕಾಡಾನೆ ದಾಳಿ : ಬೈಕ್ ಬಿಟ್ಟು ಓಡಿದ ಸವಾರರು
ಇದನ್ನೂ ಓದಿ: ಕೊಡುಗು: ನಡುರಸ್ತೆಯಲ್ಲಿ ರಾಜಾರೋಷವಾಗಿ ಕಾಡಾನೆ ಸಂಚಾರ