ಡಮಾಸ್ಕಸ್: ಸಿರಿಯಾದ ರಾಜಧಾನಿ ಡಮಾಸ್ಕಸ್ನಲ್ಲಿ 13 ವರ್ಷಗಳ ನಂತರ ಕತಾರ್ ತನ್ನ ರಾಯಭಾರ ಕಚೇರಿಯನ್ನು ಅಧಿಕೃತವಾಗಿ ಪುನಾರಂಭಿಸಿದೆ. ವರ್ಷಗಳ ನಂತರ ಇದೇ ಮೊದಲ ಬಾರಿಗೆ ರಾಯಭಾರ ಕಚೇರಿಯ ಮೇಲೆ ಕತಾರ್ ಧ್ವಜ ಹಾರಾಡುತ್ತಿದೆ. ಡಮಾಸ್ಕಸ್ನ ಅಬು ರುಮ್ಮಾನೆ ಪ್ರದೇಶದಲ್ಲಿರುವ ರಾಯಭಾರ ಕಚೇರಿಯ ಕಾಂಪೌಂಡ್ ಅನ್ನು ಕಾರ್ಮಿಕರು ಸ್ವಚ್ಛಗೊಳಿಸುವುದು ಮತ್ತು ಅದರ ಗೋಡೆಗಳ ಮೇಲೆ ಬರೆಯಲಾದ ಗೀಚುಬರಹಗಳನ್ನು ಅಳಿಸಲಾಗುತ್ತಿರುವ ದೃಶ್ಯಗಳು ಶನಿವಾರ ಕಂಡು ಬಂದಿವೆ.
ಡಿಸೆಂಬರ್ 8 ರಂದು ಸಿರಿಯಾದ ಮಾಜಿ ಅಧ್ಯಕ್ಷ ಬಷರ್ ಅಲ್-ಅಸ್ಸಾದ್ ಅವರ ಸರ್ಕಾರದ ಪತನದ ನಂತರ ದೇಶದ ಚುಕ್ಕಾಣಿ ಹಿಡಿಯಲಿರುವ ನಾಯಕತ್ವವನ್ನು ಭೇಟಿಯಾಗಲು ಪ್ರಾದೇಶಿಕ ಮತ್ತು ಪಾಶ್ಚಿಮಾತ್ಯ ಪ್ರತಿನಿಧಿಗಳು ಸಿರಿಯಾಕ್ಕೆ ಭೇಟಿ ನೀಡಿದ ಮಧ್ಯೆ ಕತಾರ್ ರಾಯಭಾರ ಕಚೇರಿಯನ್ನು ಮತ್ತೆ ತೆರೆಯಲಾಗಿದೆ.
ಸಿರಿಯನ್ ಅಂತರ್ಯುದ್ಧ ಪ್ರಾರಂಭವಾದ ನಂತರ 2011 ರಲ್ಲಿ ಕತಾರ್ ಇಲ್ಲಿನ ತನ್ನ ರಾಜತಾಂತ್ರಿಕ ಕಚೇರಿಯನ್ನು ಮುಚ್ಚಿತ್ತು. ಸದ್ಯ ಬಷರ್ ಸರ್ಕಾರದ ಪತನದ ನಂತರ ಕಳೆದ ವಾರ ಕತಾರ್ ನಿಯೋಗವೊಂದು ಡಮಾಸ್ಕಸ್ಗೆ ಭೇಟಿ ನೀಡಿ ಕಚೇರಿಯ ಪುನಾರಂಭಕ್ಕೆ ಸಿದ್ಧತೆಗಳನ್ನು ಆರಂಭಿಸಿತ್ತು.
ನಿಯೋಗವು ಸಿರಿಯಾದ ಮಧ್ಯಂತರ ಸರ್ಕಾರದ ಪ್ರತಿನಿಧಿಗಳನ್ನು ಭೇಟಿ ಮಾಡಿ ಭದ್ರತೆ, ಶಾಂತಿ, ಅಭಿವೃದ್ಧಿ ಮತ್ತು ಸಮೃದ್ಧಿಯ ಅನ್ವೇಷಣೆಯಲ್ಲಿ ಸಿರಿಯನ್ ಜನರನ್ನು ಬೆಂಬಲಿಸುವ ಕತಾರ್ ಬದ್ಧತೆಯನ್ನು ಪುನರುಚ್ಚರಿಸಿತು ಎಂದು ಕತಾರ್ ವಿದೇಶಾಂಗ ಸಚಿವಾಲಯದ ವಕ್ತಾರ ಮಜೀದ್ ಅಲ್ ಅನ್ಸಾರಿ ತಿಳಿಸಿದ್ದಾರೆ.