ನ್ಯೂಯಾರ್ಕ್:ಅಧ್ಯಕ್ಷೀಯ ಚುನಾವಣೆಯ ಹೊಸ್ತಿಲಿನಲ್ಲಿರುವ ಅಮೆರಿಕಕ್ಕೆ ಭೇಟಿ ನೀಡುತ್ತಿರುವ ಪ್ರಧಾನಿ ನರೇಂದ್ರ ಮೋದಿ, ಅಲ್ಲಿನ ಭಾರತೀಯ ಅಮೆರಿಕನ್ ಸಮುದಾಯವನ್ನು ಭೇಟಿಯಾಗಲಿದ್ದಾರೆ. ಸೆಪ್ಟೆಂಬರ್ 22ರಂದು ಮೋದಿ ಲಾಂಗ್ ಐಲ್ಯಾಂಡ್‌ನ ನಸ್ಸೌ ಕೊಲಿಜಿಯಂನಲ್ಲಿ ಸಮುದಾಯವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಕಾರ್ಯಕ್ರಮದಲ್ಲಿ 16 ಸಾವಿರಕ್ಕೂ ಹೆಚ್ಚು ಸಂಖ್ಯೆಯಲ್ಲಿ ಭಾರತೀಯ ಅಮೆರಿಕನ್ನರು ಪಾಲ್ಗೊಳ್ಳುವ ಸಾಧ್ಯತೆ ಇದೆ.
ಇದೇ ಮೊದಲಲ್ಲ!: ಪ್ರಧಾನಿ ಮೋದಿ ಅಮೆರಿಕದಲ್ಲಿರುವ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡುತ್ತಿರುವುದು ಇದೇ ಮೊದಲಲ್ಲ. 2014ರಲ್ಲಿ ಮೊದಲ ಬಾರಿಗೆ ಭಾರತದ ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಅವರು ನ್ಯೂಯಾರ್ಕ್‌ನ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್‌ನಲ್ಲಿ ಭಾರತೀಯ ಅಮೆರಿಕನ್ನರನ್ನು ಉದ್ದೇಶಿಸಿ ಮಾತನಾಡಿದರು. ಅದರ ನಂತರ, 2019ರಲ್ಲಿ, ಅವರು ಅಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಹೂಸ್ಟನ್‌ನ ಎನ್ಆರ್ಜಿ ಕ್ರೀಡಾಂಗಣದಲ್ಲಿ 'ಹೌಡಿ ಮೋದಿ' (Howdy Modi) ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಮತ್ತೊಮ್ಮೆ ಪ್ರಧಾನಿ ಸ್ಥಾನದಲ್ಲಿ!:ಸೆಪ್ಟೆಂಬರ್ 2021ರಲ್ಲಿ, ಮೋದಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ವಾರ್ಷಿಕ ಉನ್ನತಮಟ್ಟದ ಸಭೆಯಲ್ಲಿ ಭಾಗವಹಿಸಿ ಉದ್ದೇಶಿಸಿ ಮಾತನಾಡಿದ್ದರು. ಕಳೆದ ವರ್ಷ, ಜೂನ್ 21ರಂದು ಯುಎನ್ ಪ್ರಧಾನ ಕಚೇರಿಯಲ್ಲಿ ಯೋಗ ದಿನ ಆಚರಣೆ ನಡೆದಿತ್ತು. ಈ ವರ್ಷದ ಜೂನ್‌ನಲ್ಲಿ ಮೂರನೇ ಬಾರಿಗೆ ಭಾರತದ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಮೋದಿ, ಈಗ ಮತ್ತೊಮ್ಮೆ ಪ್ರಧಾನಿಯಾಗಿ ಅಮೆರಿಕಕ್ಕೆ ಭೇಟಿ ನೀಡುತ್ತಿದ್ದಾರೆ. ಮುಂದಿನ ತಿಂಗಳು 26ರಿಂದ 30ರವರೆಗೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆ ನಡೆಯಲಿದೆ. 26ರಂದು ಪ್ರಧಾನಿ ಮೋದಿ ಭಾಷಣ ಮಾಡಲಿದ್ದಾರೆ. ರಾಷ್ಟ್ರಗಳ ಮುಖ್ಯಸ್ಥರ ಭಾಷಣದ ಪಟ್ಟಿಯನ್ನು ವಿಶ್ವಸಂಸ್ಥೆ ಬಿಡುಗಡೆ ಮಾಡಿದೆ.
ಉತ್ತಮ ವರ್ತಮಾನ ಮತ್ತು ಭವಿಷ್ಯದ ರಕ್ಷಣೆಯ ವಿಷಯದಲ್ಲಿ ವಿಶ್ವ ನಾಯಕರನ್ನು ಒಮ್ಮತಕ್ಕೆ ತರುವ ಉದ್ದೇಶದಿಂದ ವಿಶ್ವಸಂಸ್ಥೆ ಈ ಸಮ್ಮೇಳನವನ್ನು ಆಯೋಜಿಸುತ್ತಿದೆ. ಅದಕ್ಕೂ ಮುನ್ನ ವಿದೇಶದಲ್ಲಿರುವ ಭಾರತೀಯರೊಂದಿಗೆ ಮೋದಿ ಸಭೆ ನಡೆಸಲಿದ್ದಾರೆ. ಅಮೆರಿಕ ಅಧ್ಯಕ್ಷೀಯ ಚುನಾವಣೆ ನವೆಂಬರ್ 5ರಂದು ನಡೆಯಲಿದೆ. ಅಧ್ಯಕ್ಷೀಯ ಗಾದಿಗೆ ಮಾಜಿ ಅಧ್ಯಕ್ಷ ಡೋನಾಲ್ಡ್ ಟ್ರಂಪ್ಗೆ ಪ್ರತಿಸ್ಪರ್ಧಿಯಾಗಿ ಭಾರತೀಯ ಮೂಲದ ಕಮಲಾ ಹ್ಯಾರಿಸ್ ಕಣದಲ್ಲಿದ್ದಾರೆ. ಚುನಾವಣೆಯ ಸಂದರ್ಭದಲ್ಲಿಯೇ ಪ್ರಧಾನಿ ಮೋದಿ ಅಮೆರಿಕ ಪ್ರವಾಸದ ವೇಳೆ ಭಾರತೀಯ ಮೂಲದವರನ್ನು ಭೇಟಿ ಮಾಡುತ್ತಿರುವುದು ಮಹತ್ವ ಪಡೆದುಕೊಂಡಿದೆ.
ಓದಿ:ಶ್ರೀಲಂಕಾ ಅಧ್ಯಕ್ಷೀಯ ಚುನಾವಣೆ: 1 ಹುದ್ದೆಗೆ 39 ಅಭ್ಯರ್ಥಿಗಳಿಂದ ನಾಮಪತ್ರ! - Sri Lankan Presidential Election