ಕರ್ನಾಟಕ

karnataka

ETV Bharat / international

ಪ್ರಧಾನಿ ಮೋದಿಗೆ ಭವ್ಯ ಸ್ವಾಗತ ಕೋರಿದ ಕತಾರ್‌​: ಅಮೀರ್ ಜೊತೆ ದ್ವಿಪಕ್ಷೀಯ ಮಾತುಕತೆ

ಅಬುಧಾಬಿ ಪ್ರವಾಸದ ನಂತರ ಪ್ರಧಾನಿ ನರೇಂದ್ರ ಮೋದಿ ಕತಾರ್‌ ದೇಶಕ್ಕೆ ಭೇಟಿ ನೀಡಿದ್ದು, ಪ್ರಧಾನಿ ಶೇಖ್ ಮೊಹಮ್ಮದ್ ಬಿನ್ ಅಬ್ದುಲ್ರಹ್ಮಾನ್ ಅಲ್ ಥಾನಿ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿದರು.

By ANI

Published : Feb 15, 2024, 4:30 PM IST

pm-modi-receives-ceremonial-welcome-in-doha
ಪ್ರಧಾನಿ ಮೋದಿ ಕತಾರ್​ ಪ್ರವಾಸ

ದೋಹಾ(ಕತಾರ್‌): ಎರಡು ದಿನಗಳ ವಿದೇಶ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಬುಧವಾರ ಅಬುಧಾಬಿಗೆ ಭೇಟಿ ನೀಡಿದ ನಂತರ ಕತಾರ್‌ಗೆ ಬಂದಿಳಿದಿದ್ದಾರೆ. ರಾಜಧಾನಿ ದೋಹಾಕ್ಕೆ ಆಗಮಿಸಿದ ಅವರಿಗೆ ಅದ್ಧೂರಿ ಸ್ವಾಗತ ನೀಡಲಾಯಿತು. ಬಳಿಕ ಕತಾರ್‌ನ ಅಮೀರ್ ಶೇಖ್ ತಮೀಮ್ ಬಿನ್ ಹಮದ್ ಅಲ್ ಥಾನಿ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿದ್ದಾರೆ.

ಅಬುಧಾಬಿಯಲ್ಲಿ ಹಿಂದು ದೇವಾಲಯ ಉದ್ಘಾಟನೆ, ಪ್ರಮುಖ ನಾಯಕರೊಂದಿಗೆ ದ್ವಿಪಕ್ಷೀಯ ಸಭೆಗಳೂ ಸೇರಿ ಸರಣಿ ಕಾರ್ಯಕ್ರಮಗಳಲ್ಲಿ ಮೋದಿ ಪಾಲ್ಗೊಂಡಿದ್ದರು. ಅಲ್ಲಿಂದ ಬುಧವಾರ ರಾತ್ರಿ ಕತಾರ್ ರಾಜಧಾನಿ ದೋಹಾಗೆ ತೆರಳಿದ್ದರು.

ಪ್ರಧಾನಿ ಮೋದಿಗೆ ಭವ್ಯ ಸ್ವಾಗತ ಕೋರಿದ ಕತಾರ್‌

ಕತಾರ್ ಪ್ರಧಾನಿ ಶೇಖ್ ಮೊಹಮ್ಮದ್ ಬಿನ್ ಅಬ್ದುಲ್ರಹ್ಮಾನ್ ಅಲ್ ಥಾನಿ ಅವರನ್ನು ಮೋದಿ ಭೇಟಿಯಾದರು. ಈ ಸಂದರ್ಭದಲ್ಲಿ ಉಭಯ ನಾಯಕರು ಉಭಯ ರಾಷ್ಟ್ರಗಳ ನಡುವಿನ ಸಂಬಂಧವನ್ನು ಮತ್ತಷ್ಟು ಬಲಪಡಿಸುವ ಮಾರ್ಗಗಳ ಕುರಿತು ಚರ್ಚಿಸಿದ್ದಾರೆ. ಕತಾರ್ ಪ್ರಧಾನಿ ಆಯೋಜಿಸಿದ್ದ ಔತಣಕೂಟದಲ್ಲೂ ಮೋದಿ ಪಾಲ್ಗೊಂಡರು.

ಅಮೀರ್ ಶೇಖ್ ಅವರೊಂದಿಗೆ ನಡೆದ ಸಭೆಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಭಾಗವಹಿಸಿದ್ದರು. ಈ ಕುರಿತು ಮೋದಿ ಸಾಮಾಜಿಕ ಜಾಲತಾಣದಲ್ಲಿ 'ಎಕ್ಸ್​'ನಲ್ಲಿ ಪೋಸ್ಟ್​ ಮಾಡಿದ್ದು, ''ಕತಾರ್ ಪ್ರಧಾನಿ ಶೇಖ್ ಮೊಹಮ್ಮದ್ ಬಿನ್ ಅಬ್ದುಲ್ರಹ್ಮಾನ್ ಅಲ್ ಥಾನಿ ಅವರೊಂದಿಗೆ ಅದ್ಭುತ ಸಭೆ ನಡೆಸಿದ್ದೇವೆ. ನಮ್ಮ ಚರ್ಚೆಗಳು ಭಾರತ-ಕತಾರ್ ಸ್ನೇಹವನ್ನು ಹೆಚ್ಚಿಸುವ ಮಾರ್ಗಗಳಿಗೆ ಸಂಬಂಧಿಸಿವೆ'' ಎಂದು ತಿಳಿಸಿದ್ದಾರೆ.

ಕತಾರ್​ನಲ್ಲಿ ಪ್ರಧಾನಿ ಮೋದಿ

ಇದನ್ನೂ ಓದಿ:ಅಬುಧಾಬಿ ಹಿಂದೂ ದೇಗುಲ ಜಾಗತಿಕ ಏಕತೆ, ಕೋಮು ಸೌಹಾರ್ದತೆಯ ಪ್ರತೀಕ: ಪ್ರಧಾನಿ ಮೋದಿ

ವಿದೇಶಾಂಗ ವ್ಯವಹಾರಗಳ ಸಚಿವಾಲಯಗಳ ಮಾಹಿತಿ ಪ್ರಕಾರ, ಈ ಸಭೆಯಲ್ಲಿ ಉಭಯ ನಾಯಕರು ವ್ಯಾಪಾರ, ಹೂಡಿಕೆ, ಇಂಧನ, ಹಣಕಾಸು ಮತ್ತು ತಂತ್ರಜ್ಞಾನದಂತಹ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರ ವಿಸ್ತರಿಸುವ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು. ಪಶ್ಚಿಮ ಏಷ್ಯಾದಲ್ಲಿ ಇತ್ತೀಚಿನ ಪ್ರಾದೇಶಿಕ ಬೆಳವಣಿಗೆಗಳ ಬಗ್ಗೆ ಚರ್ಚಿಸಿ, ಶಾಂತಿ ಮತ್ತು ಸ್ಥಿರತೆ ಎತ್ತಿ ಹಿಡಿಯಬೇಕಾದ ಮಹತ್ವದ ಬಗೆಗೂ ಸಮಾಲೋಚಿಸಿದ್ದಾರೆ.

''ಪ್ರಧಾನಿ, ವಿದೇಶಾಂಗ ವ್ಯವಹಾರಗಳ ಸಚಿವ ಶೇಖ್ ಮೊಹಮ್ಮದ್ ಬಿನ್ ಅಬ್ದುಲ್ರಹ್ಮಾನ್ ಬಿನ್ ಜಾಸಿಮ್ ಅಲ್ ಥಾನಿ ಅವರು ನರೇಂದ್ರ ಮೋದಿ ಅವರನ್ನು ಬುಧವಾರ ಭೇಟಿ ಮಾಡಿದರು. ಈ ವೇಳೆಎರಡು ಸ್ನೇಹಪರ ದೇಶಗಳ ನಡುವಿನ ಸಹಕಾರ ಸಂಬಂಧಗಳು ಮತ್ತು ವಿಶೇಷವಾಗಿ ಇಂಧನ, ವಾಣಿಜ್ಯ ಮತ್ತು ಹೂಡಿಕೆ ಕ್ಷೇತ್ರಗಳಲ್ಲಿ ಸಹಕಾರವನ್ನು ಬೆಂಬಲಿಸುವ ಮತ್ತು ಅವುಗಳನ್ನು ಅಭಿವೃದ್ಧಿಪಡಿಸುವ ಮಾರ್ಗಗಳ ಬಗ್ಗೆ ಚರ್ಚಿಸಿದ್ದಾರೆ'' ಎಂದು ಎಂದು ಕತಾರ್ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ಕತಾರ್​ನಲ್ಲಿ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ

ಮತ್ತೊಂದೆಡೆ, ''ಭಾರತ-ಕತಾರ್ ಪಾಲುದಾರಿಕೆಯನ್ನು ಮತ್ತಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಅವರು ಕತಾರ್ ಪ್ರಧಾನಿ ಎಂ.ಬಿ.ಎ.ಅಲ್ ಥಾನಿ ಅವರೊಂದಿಗೆ ದೋಹಾದಲ್ಲಿ ಫಲಪ್ರದ ಸಭೆ ನಡೆಸಿದರು. ಈ ಸಭೆಯಲ್ಲಿ ವ್ಯಾಪಾರ ಮತ್ತು ಹೂಡಿಕೆ, ಇಂಧನ, ಹಣಕಾಸು ಇತರ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರವನ್ನು ವಿಸ್ತರಿಸುವ ಕುರಿತು ಚರ್ಚೆಗಳು ನಡೆದಿವೆ ಎಂದು ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ರಣದೀರ್ ಜೈಸ್ವಾಲ್ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.

ಇತ್ತೀಚೆಗೆ ಕತಾರ್‌ನಲ್ಲಿ ಬೇಹುಗಾರಿಕೆ ಆರೋಪದ ಮೇಲೆ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದ ಭಾರತೀಯ ನೌಕಾಪಡೆಯ ಎಂಟು ಮಂದಿ ಮಾಜಿ ಯೋಧರನ್ನು ಸೋಮವಾರ ಕತಾರ್‌ ಸರ್ಕಾರ ಬಿಡುಗಡೆ ಮಾಡಿತ್ತು. ಈಗಾಗಲೇ ಏಳು ಮಂದಿ ಭಾರತಕ್ಕೆ ಬಂದಿಳಿದಿದ್ದಾರೆ. ಇದರ ಬೆನ್ನಲ್ಲೇ ಮೋದಿ ಕತಾರ್‌ಗೆ ಭೇಟಿ ನೀಡಿರುವುದು ಗಮನಾರ್ಹ.

ಇದನ್ನೂ ಓದಿ:ಅಬುಧಾಬಿಯಲ್ಲಿ ಮೊದಲ ಶಿಲಾಮಯ ಹಿಂದು ದೇವಾಲಯ ಉದ್ಘಾಟಿಸಿದ ಪ್ರಧಾನಿ ಮೋದಿ

ABOUT THE AUTHOR

...view details