ಸ್ಟಾಕ್ಹೋಂ: ಈ ವರ್ಷದ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿಗೆ ಜಾನ್ ಜೆ.ಹಾಪ್‌ಫೀಲ್ಡ್ ಮತ್ತು ಜೆಫ್ರಿ ಇ. ಹಿಂಟನ್ ಅವರು ಭಾಜನರಾಗಿದ್ದಾರೆ. ಆರ್ಟಿಫಿಶಿಯಲ್ ನ್ಯೂರಲ್ ನೆಟ್‌ವರ್ಕ್ ಮತ್ತು ಮೆಷಿನ್ ಲರ್ನಿಂಗ್ ಆವಿಷ್ಕಾರಕ್ಕಾಗಿ ಇಬ್ಬರಿಗೆ ಪ್ರಶಸ್ತಿ ನೀಡಲಾಗಿದೆ ಎಂದು ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್ ಮಂಗಳವಾರ ಪ್ರಕಟಿಸಿದೆ.
ಭೌತಾಶ್ತ್ರದ ಸಾಧನಗಳನ್ನು ಬಳಸಿಕೊಂಡು ಕೃತಕ ನ್ಯೂರಲ್ ನೆಟ್ವರ್ಕ್ನಲ್ಲಿ ಮೆಷಿನ್ ಲರ್ನಿಂಗ್ ಸಕ್ರಿಯಗೊಳಿಸುವಲ್ಲಿ ಈ ಇಬ್ಬರು ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ ಎಂದು ನೊಬೆಲ್ ಆಯ್ಕೆ ಸಮಿತಿ ತಿಳಿಸಿದೆ.
BREAKING NEWS
— The Nobel Prize (@NobelPrize) October 8, 2024
The Royal Swedish Academy of Sciences has decided to award the 2024 #NobelPrize in Physics to John J. Hopfield and Geoffrey E. Hinton “for foundational discoveries and inventions that enable machine learning with artificial neural networks.” pic.twitter.com/94LT8opG79
ಹಾಪ್‌ಫೀಲ್ಡ್ ಪ್ರಿನ್ಸ್‌ಟನ್ ವಿಶ್ವವಿದ್ಯಾನಿಲಯದಲ್ಲಿ ತನ್ನ ಸಂಶೋಧನೆಯನ್ನು ಮಾಡಿದರೆ, ಹಿಂಟನ್ ಟೊರೊಂಟೊ ವಿಶ್ವವಿದ್ಯಾಲಯದಲ್ಲಿ ತನ್ನ ಸಂಶೋಧನೆಯನ್ನು ಮಾಡಿದ್ದರು. ನೊಬೆಲ್ ಪ್ರಶಸ್ತಿಯು 11 ಮಿಲಿಯನ್ ಸ್ವೀಡಿಷ್ ಕ್ರೌನ್ (8.19 ಕೋಟಿ ರೂಪಾಯಿ) ನಗದು ಬಹುಮಾನ ಹೊಂದಿದೆ. 1901ರಿಂದ ಇಲ್ಲಿಯವರೆಗೆ ಭೌತಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿಯನ್ನು 117 ಬಾರಿ ಘೋಷಿಸಿ 224 ಸಾಧಕರಿಗೆ ನೀಡಲಾಗಿದೆ.
ಏನಿದು ನ್ಯೂರಲ್ ನೆಟ್‌ವರ್ಕ್?: ನಮ್ಮ ಮೆದುಳು ಕೆಲಸ ಮಾಡುವ ರೀತಿಯನ್ನು ಅನುಕರಿಸಿ, ಯಂತ್ರಗಳು ಕಲಿಯುವಂತೆ ಮಾಡುವ ವಿಧಾನಕ್ಕೆ ಆರ್ಟಿಫಿಶಿಯಲ್ ನ್ಯೂರಲ್ ನೆಟ್‌ವರ್ಕ್ ಎಂದು ಕರೆಯಲಾಗುತ್ತದೆ. ಕೃತಕ ಬುದ್ಧಿಮತ್ತೆ ಹೆಚ್ಚು ದಕ್ಷವಾಗಿ ಕಾರ್ಯನಿರ್ವಹಿಸಲು ಕೃತಕ ನ್ಯೂರಲ್ ನೆಟ್‌ವರ್ಕ್ ಸಹಕಾರಿಯಾಗಿರುತ್ತದೆ.
ಕಳೆದ ವರ್ಷ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಮೂವರಿಗೆ ನೀಡಲಾಗಿತ್ತು. ಅಮೆರಿಕದ ಪೆರ್ರಿ ಅಗೋಸ್ಟಿನಿ, ಜರ್ಮನಿಯ ಫೆರೆಂಕ್ ಕ್ರೌಸ್ ಮತ್ತು ಸ್ವೀಡನ್‌ನ ಅನ್ನೆ ಎಲ್ ಹುಲಿಯರ್ ಅವರು ಪ್ರಶಸ್ತಿಯನ್ನು ಪಡೆದಿದ್ದರು. ಪರಮಾಣುಗಳಲ್ಲಿನ ಎಲೆಕ್ಟ್ರಾನ್ ಡೈನಾಮಿಕ್ಸ್ ಅಧ್ಯಯನಕ್ಕಾಗಿ ಮತ್ತು ಬೆಳಕಿನ ಕಿರಣಗಳ ಆಟೊಸೆಕೆಂಡ್ ಪಲ್ಸ್ ಉತ್ಪಾದಿಸುವ ಸಂಶೋಧನೆಗಳಿಗಾಗಿ ಅವರಿಗೆ ನೊಬೆಲ್ ಪ್ರಶಸ್ತಿಯನ್ನು ನೀಡಲಾಗಿತ್ತು.
ಸ್ವೀಡನ್‌ನ ಶ್ರೇಷ್ಠ ಎಂಜಿನಿಯರ್, ರಸಾಯನಶಾಸ್ತ್ರಜ್ಞ ಮತ್ತು ಉದ್ಯಮಿ ಆಲ್ಫ್ರೆಡ್ ನೊಬೆಲ್ ಅವರ ಆಶಯದಂತೆ, ಪ್ರತr ವರ್ಷ ಡಿಸೆಂಬರ್ 10ರಂದು ನೊಬೆಲ್ ಪ್ರಶಸ್ತಿಯನ್ನು ನೀಡಲಾಗುತ್ತದೆ. ನೊಬೆಲ್ ಸಮಿತಿಯು ವಿವಿಧ ಕ್ಷೇತ್ರಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದವರನ್ನು ಈ ಪ್ರಶಸ್ತಿಗಳಿಗೆ ಆಯ್ಕೆ ಮಾಡುತ್ತದೆ.
ಅಕ್ಟೋಬರ್ 7ರಂದು ಡಾ.ಆಂಬ್ರೋಸ್ ಮತ್ತು ಗ್ಯಾರಿ ರಾವ್ಕುನ್ ಅವರಿಗೆ ವೈದ್ಯಕೀಯದಲ್ಲಿ ನೊಬೆಲ್ ಪ್ರಶಸ್ತಿಯನ್ನು ನೀಡಲಾಯಿತು. ಮೈಕ್ರೋಆರ್‌ಎನ್‌ಎ ಕುರಿತು ನಡೆಸಿದ ಸಂಶೋಧನೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ. ಇಂದು (ಅಕ್ಟೋಬರ್ 8ರಂದು) ಭೌತಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ಪ್ರಕಟಿಸಲಾಗಿದೆ. ಅಕ್ಟೋಬರ್ 14ರವರೆಗೆ ಪ್ರತಿದಿನ, ಪ್ರತಿ ಕ್ಷೇತ್ರದಲ್ಲಿ ವಿಶೇಷ ಸಂಶೋಧನೆ ಮಾಡಿದ ಸಾಧಕರಿಗೆ ಪ್ರಶಸ್ತಿ ನೀಡಲಾಗುತ್ತದೆ.
ಇದನ್ನೂ ಓದಿ: ಅಮೆರಿಕದ ವಿಕ್ಟರ್ ಆಂಬ್ರೋಸ್, ಗ್ಯಾರಿ ರುವ್ಕುನ್ರಿಗೆ ವೈದ್ಯಕೀಯ ನೊಬೆಲ್ ಪ್ರಶಸ್ತಿ - Nobel Prize For Medicine