ಬೆಂಗಳೂರು : ಕಂದಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿಗಳನ್ನು ಅವರು ನೇಮಕಗೊಂಡ ಮೂಲ ಹುದ್ದೆಯಲ್ಲಿಯೇ ಕರ್ತವ್ಯಕ್ಕೆ ನಿಯೋಜಿಸುವಂತೆ ಸರ್ಕಾರದಿಂದ ಈಗಾಗಲೇ ಹಲವಾರು ಬಾರಿ ನಿರ್ದೇಶನ/ಸೂಚನೆಗಳನ್ನು ನೀಡಲಾಗಿದ್ದರೂ ಸಹ ಗ್ರಾಮ ಆಡಳಿತ ಅಧಿಕಾರಿಗಳು ಮೂಲ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸದೇ ನಿಯೋಜನೆ/ಅನ್ಯ ಕರ್ತವ್ಯದ ಆಧಾರದ ಮೇಲೆ ಪ್ರಾದೇಶಿಕ ಆಯುಕ್ತರ/ಜಿಲ್ಲಾಧಿಕಾರಿಗಳ/ ಉಪವಿಭಾಗಾಧಿಕಾರಿ/ತಹಶೀಲ್ದಾರ್ ಕಚೇರಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ.
ಆಡಳಿತಾತ್ಮಕ ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ ಕಂದಾಯ ಇಲಾಖೆಯ ಕಾರ್ಯ ಸ್ವರೂಪವನ್ನು ಸರಳೀಕರಣಗೊಳಿಸಿ ಡಿಜಿಟಲೀಕರಣ ಮಾಡುವ ಸಂಬಂಧ ಹಲವು ಜನಪರ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಬಗರ್ ಹುಕುಂ/Land Beat App/ದರಖಾಸ್ತು ಪೋಡಿಯ 1 to 5 ಪ್ರಕರಣಗಳು/Adhar Seeding/ಕಂದಾಯ ಇಲಾಖೆಯ ಕಡತಗಳ ಗಣಕೀಕರಣ Maria ಇನ್ನಿತರ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಗ್ರಾಮ ಆಡಳಿತ ಅಧಿಕಾರಿಗಳ ಪಾತ್ರ ಮಹತ್ವದ್ದಾಗಿದ್ದು, ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ಕೊರತೆಯಿಂದಾಗಿ ಹಾಲಿ ಗ್ರಾಮ ಆಡಳಿತ ಅಧಿಕಾರಿ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳ ಮೇಲೆ ಹೆಚ್ಚಿನ ಕಾರ್ಯದೊತ್ತಡ ಉಂಟಾಗುತ್ತಿರುತ್ತದೆ.
ಆದುದರಿಂದ ಪ್ರಾದೇಶಿಕ ಆಯುಕ್ತರ/ಜಿಲ್ಲಾಧಿಕಾರಿಗಳ/ಉಪವಿಭಾಗಾಧಿಕಾರಿ/ತಹಶೀಲ್ದಾರ್ ಕಚೇರಿಗಳಲ್ಲಿ ನಿಯೋಜನೆ/ಅನ್ಯ ಕರ್ತವ್ಯದ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಗ್ರಾಮ ಆಡಳಿತ ಅಧಿಕಾರಿಗಳನ್ನು ಕೂಡಲೇ ಅವರ ಮೂಲ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಲು ಸೂಚಿಸಿ ಬಿಡುಗಡೆ ಮಾಡುವಂತೆ ಸೂಚಿಸಿದೆ.
ಈ ಬಗ್ಗೆ ಕೈಗೊಂಡಿರುವ ಕ್ರಮದ ಕುರಿತು ಜನವರಿ 27 ರಂದು ಕಂದಾಯ ಸಚಿವರ ಅಧ್ಯಕ್ಷತೆಯಲ್ಲಿ ನಡೆಯುವ ಎಲ್ಲಾ ಜಿಲ್ಲಾಧಿಕಾರಿಗಳ ಸಭೆಯಲ್ಲಿ ಚರ್ಚಿಸಲಾಗುವುದು. ಈ ಸೂಚನೆಯನ್ನು ಉಲ್ಲಂಘಿಸಿದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ಅಖಿಲ ಭಾರತ ಸೇವೆಗಳು (ಶಿಸ್ತು ಮತ್ತು ಮೇಲ್ಮನವಿ) ನಿಯಮಗಳು, 1969 ಹಾಗೂ ಕರ್ನಾಟಕ ನಾಗರಿಕ ಸೇವೆ (ವರ್ಗೀಕರಣ, ಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು, 1957 ಮತ್ತು ಕರ್ನಾಟಕ ನಾಗರಿಕ ಸೇವಾ (ನಡತೆ) ನಿಯಮಗಳು 1966 ಗಳಡಿಯಲ್ಲಿ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಸುತ್ತೋಲೆಯಲ್ಲಿ ಆದೇಶಿಸಲಾಗಿದೆ.
ಇದನ್ನೂ ಓದಿ: ಗ್ರಾಮ ಆಡಳಿತ ಅಧಿಕಾರಿ ಫಲಿತಾಂಶ: ಜಿಲ್ಲಾವಾರು ಪಟ್ಟಿ ಹೀಗೆ ಚೆಕ್ ಮಾಡಿಕೊಳ್ಳಿ - VAO DISTRICTWISE EXAM