ಬೆಂಗಳೂರು: ಅಕ್ರಮವಾಗಿ ಹಣ ವಸೂಲಿ ಮಾಡುತ್ತಿರುವ ಆರೋಪದ ಮೇರೆಗೆ ರಾಜ್ಯದ ಆರು ಜಿಲ್ಲೆಗಳ ಆರ್‌ಟಿಒ ಚೆಕ್ಪೋಸ್ಟ್ಗಳ ಮೇಲೆ ಕಳೆದ ಎರಡು ದಿನಗಳಿಂದ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸುತ್ತಿದ್ದು ಲಕ್ಷಾಂತರ ರೂಪಾಯಿ ಹಣ ವಶಕ್ಕೆ ಪಡೆದುಕೊಂಡಿದ್ದಾರೆ.
ಚೆಕ್ಪೋಸ್ಟ್ಗಳಲ್ಲಿ ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿ ಖಾಸಗಿ ವ್ಯಕ್ತಿಗಳೊಂದಿಗೆ ಸೇರಿಕೊಂಡು ಸಾರ್ವಜನಿಕರಿಂದ ಅಕ್ರಮವಾಗಿ ಹಣ ವಸೂಲಿ ಮಾಡುತ್ತಿರುವ ಬಗ್ಗೆ ವ್ಯಾಪಕ ದೂರುಗಳು ಬಂದ ಮೇರೆಗೆ ನಿನ್ನೆ ಮತ್ತು ಇಂದು ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಕಲಬುರಗಿ, ಬೆಳಗಾವಿ ವಿವಿಧ ಚೆಕ್ಪೋಸ್ಟ್ಗಳಲ್ಲಿ ದಾಳಿ ನಡೆಸಲಾಗಿದೆ. ಈ ವೇಳೆ 3.45 ಲಕ್ಷ ನಗದು ಹಣವನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ವಿಜಯಪುರದ ಝಳಕಿ ಚೆಕ್ಪೋಸ್ಟ್ನಲ್ಲಿ 2 ಲಕ್ಷ, ಬಳ್ಳಾರಿಯ ಹಗರಿ ಚೆಕ್ಪೋಸ್ಟ್ನಲ್ಲಿ 45 ಸಾವಿರ, ಅತ್ತಿಬೆಲೆಯಲ್ಲಿ 45 ಸಾವಿರ, ಕಲಬುರಗಿಯ ಹುಮನಾಬಾದ್ನಲ್ಲಿ 42 ಸಾವಿರ, ಬೆಳಗಾವಿ ನಿಪ್ಪಾಣಿಯಲ್ಲಿ 13.5 ಸಾವಿರ ಸೇರಿದಂತೆ ಒಟ್ಟು 3.45 ಲಕ್ಷ ರೂ ಹಣ ಜಪ್ತಿ ಮಾಡಲಾಗಿದೆ.
ದಾಳಿಯ ವೇಳೆ ಸರ್ಕಾರಿ ಅಧಿಕಾರಿ ಹಾಗೂ ಸಿಬ್ಬಂದಿ ಖಾಸಗಿ ವ್ಯಕ್ತಿಗಳೊಂದಿಗೆ ಸೇರಿ ಅಕ್ರಮ ಹಣ ವಸೂಲಿಯಲ್ಲಿ ಶಾಮೀಲಾಗಿರುವುದು ಕಂಡುಬಂದಿದೆ. ಅಲ್ಲದೆ, ಹಗರಿ ಚೆಕ್ಪೋಸ್ಟ್ನಲ್ಲಿ ದಾಳಿ ವೇಳೆ ಕಿಟಕಿಯಿಂದ ನಗದು ಎಸೆದಿರುವುದು ಪತ್ತೆಯಾಗಿದೆ. ತಪಾಸಣಾ ವೇಳೆ ಹಲವು ನ್ಯೂನತೆಗಳು ಕಂಡುಬಂದಿದ್ದು, ಈ ಬಗ್ಗೆ ಹೆಚ್ಚಿನ ವಿಚಾರಣೆ ಕೈಗೊಳ್ಳಲಾಗಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಸರ್ಕಾರಿ ಅಧಿಕಾರಿಗಳ ಮನೆಗಳ ಮೇಲೆ ಲೋಕಾ ದಾಳಿ: ಯಾರ‍್ಯಾರ ಬಳಿ ಎಷ್ಟೆಷ್ಟು ಕೋಟಿ ಆಸ್ತಿ.. ಇಲ್ಲಿದೆ ವಿವರ - Lokayukta raid