ಜೆರುಸಲೇಂ: ಗಾಜಾದಲ್ಲಿ ಹಮಾಸ್ ಬಳಿ ಬಂಧಿಯಾಗಿರುವ ಎಲ್ಲ ಒತ್ತೆಯಾಳುಗಳನ್ನು ಬಿಡಿಸಿಕೊಳ್ಳಲು ಮತ್ತು ಉದ್ದೇಶಿತ ಗುರಿಗಳನ್ನು ಸಾಧಿಸಲು ತಮ್ಮ ಸರ್ಕಾರ ಬದ್ಧವಾಗಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ. ಇಸ್ರೇಲಿ ರಕ್ಷಣಾ ಪಡೆಗಳ (ಐಡಿಎಫ್) ಪುರುಷ ಮತ್ತು ಮಹಿಳಾ ಹೋರಾಟಗಾರರು, ನಿಯಮಿತ ಮತ್ತು ಮೀಸಲು ಯೋಧರು, ಸೇನೆ ಮತ್ತು ಪೊಲೀಸ್, ಶಿನ್ ಬೆಟ್ ಮತ್ತು ಮೊಸ್ಸಾದ್‌ನಲ್ಲಿನ ಪುರುಷ ಮತ್ತು ಮಹಿಳಾ ಹೋರಾಟಗಾರರ ಶೌರ್ಯಕ್ಕೆ ಪ್ರಧಾನಿ ನೆತನ್ಯಾಹು ಕೃತಜ್ಞತೆ ವ್ಯಕ್ತಪಡಿಸಿದರು.
"ನಾವು ಅಂದುಕೊಂಡ ಎಲ್ಲಾ ಗುರಿಗಳನ್ನು ಪೂರ್ಣಗೊಳಿಸಿದ ನಂತರ ಯುದ್ಧವನ್ನು ಕೊನೆಗೊಳಿಸುತ್ತೇವೆ. ಹಮಾಸ್ನ ದುಷ್ಟ ಆಡಳಿತವನ್ನು ಕಿತ್ತೊಗೆಯುವುದು, ಅಪಹರಣಗೊಂಡು ಜೀವಂತವಿರುವ ಮತ್ತು ಮೃತರಾದ ನಮ್ಮ ಎಲ್ಲ ನಾಗರಿಕರನ್ನು ಮನೆಗೆ ಮರಳಿ ಕರೆತರುವುದು, ಗಾಜಾದಿಂದ ಇಸ್ರೇಲ್ ಮೇಲೆ ಭವಿಷ್ಯದಲ್ಲಿ ಮತ್ತೊಮ್ಮೆ ದಾಳಿ ನಡೆಯದಂತೆ ಖಚಿತಪಡಿಸಿಕೊಳ್ಳುವುದು ಹಾಗೂ ದಕ್ಷಿಣ ಮತ್ತು ಉತ್ತರದಲ್ಲಿರುವ ನಮ್ಮ ನಿವಾಸಿಗಳು ಸುರಕ್ಷಿತವಾಗಿ ಅವರವರ ಮನೆಗಳಿಗೆ ಮರಳುವಂತೆ ಮಾಡುವುದು ನಮ್ಮ ಗುರಿಗಳಾಗಿವೆ." ಎಂದು ನೆತನ್ಯಾಹು ಅಕ್ಟೋಬರ್ 7ರಂದು ಹಮಾಸ್ ನಡೆಸಿದ ಭಯಾನಕ ದಾಳಿಯ ಮೊದಲ ವರ್ಷದ ವಿಶೇಷ ಶೋಕಸಭೆಯಲ್ಲಿ ಹೇಳಿದರು. ಕಳೆದ ವರ್ಷ ಇದೇ ದಿನದಂದು ಹಮಾಸ್ ನಡೆಸಿದ ದಾಳಿಯಲ್ಲಿ 1200ಕ್ಕೂ ಹೆಚ್ಚು ಮುಗ್ಧ ಜೀವಗಳು ಬಲಿಯಾಗಿದ್ದವು.
ಸಭೆಯ ಆರಂಭದಲ್ಲಿ, 2023ರ ಅಕ್ಟೋಬರ್ ಮತ್ತು ನಂತರ ಹತ್ಯೆಯಾದವರ ನೆನಪಿಗಾಗಿ ಪ್ರಧಾನಿ ಮೇಣದಬತ್ತಿಯನ್ನು ಬೆಳಗಿಸಿದರು. ಸರ್ಕಾರದ ಸದಸ್ಯರು ಒಂದು ಕ್ಷಣ ಮೌನ ಆಚರಿಸಿದರು.
"ಒಂದು ವರ್ಷದ ಹಿಂದೆ, ಇಂದು ಬೆಳಗ್ಗೆ 06:29ಕ್ಕೆ, ಹಮಾಸ್ ಭಯೋತ್ಪಾದಕರು ಇಸ್ರೇಲ್ ದೇಶದ ವಿರುದ್ಧ, ಇಸ್ರೇಲ್ ನಾಗರಿಕರ ವಿರುದ್ಧ ಅನಿರೀಕ್ಷಿತ ದಾಳಿಯನ್ನು ಪ್ರಾರಂಭಿಸಿದರು. ಈ ಹತ್ಯಾಕಾಂಡದ ಸ್ವಲ್ಪ ಸಮಯದ ನಂತರ, ಟೆಲ್ ಅವೀವ್ ನಲ್ಲಿ ನಡೆದ ರ್ಯಾಲಿಯಲ್ಲಿ ನಾನು ಹೇಳಿದ್ದೆ: ನಾವು ಯುದ್ಧ ಆರಂಭಿಸಿದ್ದೇವೆ. ಇದೊಂದು ಕಾರ್ಯಾಚರಣೆಯಲ್ಲ. ಒಂದಿಷ್ಟು ಸುತ್ತುಗಳ ಕಾರ್ಯಾಚರಣೆ ಅಲ್ಲ ಎಂದು ಹೇಳಿದ್ದೆ. ನಮ್ಮ ಶತ್ರು ಎಂದಿಗೂ ನೋಡದಷ್ಟು ದೊಡ್ಡ ಶಕ್ತಿಯನ್ನು ಬಳಸಿ ನಾವು ಹೋರಾಡಲಿದ್ದೇವೆ ಮತ್ತು ಶತ್ರು ದೊಡ್ಡ ಮಟ್ಟದ ಬೆಲೆ ತೆರುವಂತೆ ಮಾಡಲಿದ್ದೇವೆ. ನಾವು ಆರಂಭಿಸಿರುವ ಯುದ್ಧವನ್ನು ಗೆಲ್ಲಲಿದ್ದೇವೆ ಎಂದು ಹೇಳಿದ್ದೆ." ಎಂದು ನೆತನ್ಯಾಹು ತಮ್ಮ ಭಾಷಣದ ಆರಂಭದಲ್ಲಿ ಹೇಳಿದರು.
ಆ ಕರಾಳ ದಿನ (ಅಕ್ಟೋಬರ್ 7, 2023)ದ ನಂತರ ಇಸ್ರೇಲ್ ತನ್ನ ಅಸ್ತಿತ್ವದ ಯುದ್ಧವನ್ನು ಆರಂಭಿಸಿದೆ. ಇದನ್ನು ಪುನರುತ್ಥಾನದ ಯುದ್ಧ ಎಂದು ಅಧಿಕೃತವಾಗಿ ಕರೆಯಲು ಬಯಸುತ್ತೇನೆ ಎಂದು ಅವರು ಹೇಳಿದರು.
"ಆ ಕರಾಳ ದಿನದ ನಂತರ ನಾವು ಏಳು ರಂಗಗಳಲ್ಲಿ ಹೋರಾಟ ನಡೆಸುತ್ತಿದ್ದೇವೆ. ನಮ್ಮ ಭವಿಷ್ಯವನ್ನು ಭದ್ರಪಡಿಸಲು ಮತ್ತು ನಮ್ಮ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಇರಾನ್ನ ದುಷ್ಟ ಕೂಟದ ವಿರುದ್ಧ ನಾವು ದಾಳಿ ನಡೆಸುತ್ತಿದ್ದೇವೆ. ಅಕ್ಟೋಬರ್ 7ರ ಹತ್ಯಾಕಾಂಡವು ಹೊಲೊಕಾಸ್ಟ್ ನಂತರ ಯಹೂದಿ ಜನರ ಮೇಲೆ ನಡೆದ ಅತ್ಯಂತ ಭಯಾನಕ ದಾಳಿಯಾಗಿದೆ. ಆದರೆ ಹೊಲೊಕಾಸ್ಟ್ನಲ್ಲಿ ಏನಾಗಿತ್ತು ಅದಕ್ಕೆ ವ್ಯತಿರಿಕ್ತವಾಗಿ ಈ ಬಾರಿ ನಾವು ನಮ್ಮ ಶತ್ರುಗಳ ವಿರುದ್ಧ ಭೀಕರ ಯುದ್ಧವನ್ನು ನಡೆಸಿದ್ದೇವೆ" ಎಂದು ನೆತನ್ಯಾಹು ಹೇಳಿದರು.
ಇದಕ್ಕೂ ಮುನ್ನ ಇಸ್ರೇಲ್ ಪ್ರಧಾನಿ ಮತ್ತು ಜೆರುಸಲೇಂ ಮೇಯರ್ ಮೋಶೆ ಲಿಯಾನ್ ಅವರು ಅಕ್ಟೋಬರ್ 7ರಂದು ಬಲಿಯಾದವರ ನೆನಪಿಗಾಗಿ 'ಕಬ್ಬಿಣದ ಕತ್ತಿಗಳು' (Iron Swords) ಸ್ಮಾರಕದಲ್ಲಿ ಮೇಣದಬತ್ತಿಗಳನ್ನು ಬೆಳಗಿಸಿದರು.
ಇದನ್ನೂ ಓದಿ: ಕರಾಚಿಯಲ್ಲಿ ಆತ್ಮಾಹುತಿ ದಾಳಿ: ಇಬ್ಬರು ಚೀನಿಯರು ಸೇರಿ ಮೂವರು ಸಾವು - Karachi Blast