ಇಸ್ಲಾಮಾಬಾದ್ : ಪರಮಾಣು ಶಕ್ತಿಯನ್ನು ಹೊಂದಿರುವ ಎರಡೂ ನೆರೆಹೊರೆಯ ದೇಶಗಳ ಮಧ್ಯದ ಸಂಬಂಧಗಳನ್ನು ಉತ್ತಮಪಡಿಸಲು ಗಂಭೀರವಾಗಿ ಪ್ರಯತ್ನಿಸಬೇಕೆಂದು ಪಾಕಿಸ್ತಾನದ ಉಪ ಪ್ರಧಾನಿ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವ ಇಶಾಕ್ ದಾರ್ ಭಾರತದಲ್ಲಿ ಮೂರನೇ ಬಾರಿಗೆ ಅಧಿಕಾರಕ್ಕೆ ಬಂದಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ಕರೆ ನೀಡಿದ್ದಾರೆ.
ಇಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಭಾರತದೊಂದಿಗಿನ ಸಂಬಂಧಗಳ ಬಗ್ಗೆ ತಮ್ಮ ಹಿಂದಿನ ಹೇಳಿಕೆಗಳನ್ನು ಪುನರುಚ್ಚರಿಸಿದರು ಮತ್ತು ಪಾಕಿಸ್ತಾನವು ಯಾವಾಗಲೂ ಭಾರತದೊಂದಿಗೆ ಉತ್ತಮ ಸಂಬಂಧವನ್ನು ಹೊಂದಲು ಬಯಸುತ್ತದೆ ಎಂದು ಹೇಳಿದರು.
"ನಮ್ಮ ಪೂರ್ವಭಾಗದಲ್ಲಿರುವ ಭಾರತದೊಂದಿಗಿನ ಸಂಬಂಧವು ಐತಿಹಾಸಿಕವಾಗಿ ಕಹಿಯಾಗಿದೆ. ಆದರೆ, ಪಾಕಿಸ್ತಾನವು ನಿರಂತರವಾಗಿ ದ್ವೇಷ ಸಾಧನೆ ಮಾಡುವುದರಲ್ಲಿ ನಂಬಿಕೆ ಇಟ್ಟಿಲ್ಲ. ಪರಸ್ಪರ ಗೌರವ, ಸಾರ್ವಭೌಮ ಸಮಾನತೆ ಮತ್ತು ದೀರ್ಘಕಾಲದ ಜಮ್ಮು ಮತ್ತು ಕಾಶ್ಮೀರ ವಿವಾದದ ನ್ಯಾಯಯುತ ಮತ್ತು ಶಾಂತಿಯುತ ಪರಿಹಾರದ ಆಧಾರದ ಮೇಲೆ ನಾವು ಭಾರತದೊಂದಿಗೆ ಉತ್ತಮ - ನೆರೆಹೊರೆ ಸಂಬಂಧವನ್ನು ಬಯಸುತ್ತೇವೆ" ಎಂದು ದಾರ್ ನುಡಿದರು.
ಆದಾಗ್ಯೂ, ಭಾರತದೊಂದಿಗೆ ಉತ್ತಮ ಸಂಬಂಧವನ್ನು ಖಚಿತಪಡಿಸಿಕೊಳ್ಳಲು ಪಾಕಿಸ್ತಾನವು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವ ಜೊತೆ ಜೊತೆಗೆ ಭಾರತದಿಂದ ಎದುರಾಗುವ ಯಾವುದೇ ಮಿಲಿಟರಿ ದುಷ್ಕೃತ್ಯಕ್ಕೆ ಪರಿಣಾಮಕಾರಿಯಾಗಿ ಪ್ರತಿಕ್ರಿಯಿಸಲಾಗುವುದು ಎಂದು ಅವರು ಒತ್ತಿ ಹೇಳಿದ್ದಾರೆ.