ಢಾಕಾ(ಬಾಂಗ್ಲಾದೇಶ):ದೇಶದ್ರೋಹ, ಭಯೋತ್ಪಾದನೆಗೆ ಕುಮ್ಮಕ್ಕು ನೀಡಿದ ಆರೋಪಗಳಡಿ ಬಾಂಗ್ಲಾದೇಶದಲ್ಲಿ ಬಂಧಿತರಾಗಿರುವ ಹಿಂದೂ ನಾಯಕ ಚಿನ್ಮಯಿ ಕೃಷ್ಣ ದಾಸ್ ಅವರ ಜಾಮೀನು ಅರ್ಜಿ ಮತ್ತೊಮ್ಮೆ ತಿರಸ್ಕೃತವಾಗಿದೆ. ಅಲ್ಲಿನ ನ್ಯಾಯಾಲಯವು 2025ರ ಜನವರಿ 2ಕ್ಕೆ ವಿಚಾರಣೆ ಮುಂದೂಡಿದೆ.
ಕೃಷ್ಣ ದಾಸ್ ಅವರ ಜಾಮೀನು ಅರ್ಜಿ ವಿಚಾರಣೆ ಇಂದು ಬಾಂಗ್ಲಾದೇಶ ನ್ಯಾಯಾಲಯದಲ್ಲಿ ನಡೆಯಿತು. ಆದರೆ, ದಾಸ್ ಅವರ ಪರವಾಗಿ ಯಾವ ವಕೀಲರೂ ಹಾಜರಾಗಲಿಲ್ಲ. ಹೀಗಾಗಿ, ನ್ಯಾಯಪೀಠವು ವಿಚಾರಣೆಯನ್ನು ಮುಂದೂಡಿತು.
ಬಾಂಗ್ಲಾದೇಶ ಸಮ್ಮಿಳಿತ ಸನಾತನಿ ಜಾಗರಣ್ ಜೋತೆಯ ವಕ್ತಾರರಾದ ಚಿನ್ಮಯಿ ಕೃಷ್ಣ ದಾಸ್ ಅವರನ್ನು ದೇಶದ್ರೋಹದ ಆರೋಪದ ಮೇಲೆ ನವೆಂಬರ್ 25ರಂದು ಢಾಕಾದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು. ನವೆಂಬರ್ 26ರಂದು ಚಟ್ಟೋಗ್ರಾಮ್ ನ್ಯಾಯಾಲಯ ಅವರಿಗೆ ಜಾಮೀನು ನಿರಾಕರಿಸಿತ್ತು.
ದಾಳಿ ಭೀತಿ, ವಾದ ಮಂಡನೆಗೆ ವಕೀಲರ ನಕಾರ:ಕೃಷ್ಣ ದಾಸ್ ಅವರ ಸಹವರ್ತಿ ಸಾವತಂತ್ರ ಗೌರಾಂಗ ದಾಸ್ ಮಾತನಾಡಿ, "ಒತ್ತಡ, ಬೆದರಿಕೆಗೆ ಹೆದರಿ ಯಾವ ವಕೀಲರೂ ಹಿಂದೂ ನಾಯಕನ ಪರವಾಗಿ ವಾದ ಮಾಡಲು ಮುಂದೆ ಬರುತ್ತಿಲ್ಲ. ಈಗಾಗಲೇ ದಾಸ್ ಅವರ ವಕೀಲನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಈ ಭಯ ವಕೀಲರಲ್ಲಿದೆ" ಎಂದು ಹೇಳಿದರು.