ಅಬುಜಾ (ನೈಜೀರಿಯಾ):ನೈಜೀರಿಯಾಕ್ಕೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಲ್ಲಿನ ಸರ್ಕಾರ ದೇಶದ ಎರಡನೇ ಅತ್ಯುನ್ನತ ನಾಗರಿಕ ಗೌರವವಾದ ಗ್ರ್ಯಾಂಡ್ ಕಮಾಂಡರ್ ಆಫ್ ದಿ ಆರ್ಡರ್ ಆಫ್ ದಿ ನೈಜರ್ (GCON) ಪುರಸ್ಕಾರವನ್ನು ನೀಡಿದೆ.
ಈ ಗೌರವಕ್ಕೆ ಪಾತ್ರರಾದ ಎರಡನೇ ವಿದೇಶಿ ನಾಯಕ ಎಂಬ ಅಭಿದಾನಕ್ಕೆ ಪ್ರಧಾನಿ ಮೋದಿ ಅವರು ಪಾತ್ರರಾಗಿದ್ದಾರೆ. ಇದಕ್ಕೂ ಮೊದಲು ಇಂಗ್ಲೆಂಡ್ನ ರಾಣಿ ಎಲಿಜಬೆತ್ ಅವರು 1969 ರಲ್ಲಿ ಜಿಸಿಒಎನ್ ಗೌರವ ಪಡೆದುಕೊಂಡಿದ್ದರು. ಪ್ರಧಾನಿ ಮೋದಿ ಅವರಿಗೆ ದೇಶವೊಂದು ನೀಡುತ್ತಿರುವ 17ನೇ ನಾಗರಿಕ ಪ್ರಶಸ್ತಿ ಇದಾಗಿದೆ.
ಮೂರು ರಾಷ್ಟ್ರಗಳ ಪ್ರವಾಸ ಕೈಗೊಂಡಿರುವ ಪ್ರಧಾನಿ ಮೋದಿ ಅವರು ಭಾನುವಾರ ನೈಜೀರಿಯಾಕ್ಕೆ ಭೇಟಿ ನೀಡಿದರು. ಅದ್ಧೂರಿ ಸ್ವಾಗತ ಕೋರಿದ ಅಲ್ಲಿನ ಸರ್ಕಾರ ರಾಜಧಾನಿ ಅಬುಜಾ 'ನಗರದ ಕೀ' ಯನ್ನು ನೀಡಿತು. ಈ ಕೀಲಿಯು ನೈಜೀರಿಯಾದ ಜನರು ಪ್ರಧಾನಿಯ ಮೇಲೆ ಇಟ್ಟಿರುವ ನಂಬಿಕೆ ಮತ್ತು ಗೌರವವನ್ನು ಸಂಕೇತಿಸುತ್ತದೆ. ಎರಡೂ ದೇಶಗಳ ನಡುವಿನ ಬಾಂಧವ್ಯವನ್ನು ಬಲಪಡಿಸಲು ಉಭಯ ರಾಷ್ಟ್ರಗಳ ನಾಯಕರು ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್ 17 ರಿಂದ ನವೆಂಬರ್ 21ರ ವರೆಗೆ ನೈಜೀರಿಯಾ, ಬ್ರೆಜಿಲ್ ಮತ್ತು ಗಯಾನಾ ರಾಷ್ಟ್ರಗಳ ಪ್ರವಾಸದಲ್ಲಿದ್ದಾರೆ. ನೈಜೀರಿಯಾಕ್ಕೆ ಭಾರತದ ಪ್ರಧಾನಿಯೊಬ್ಬರು 17 ವರ್ಷಗಳ ಬಳಿಕ ನೀಡಿದ ಭೇಟಿ ಇದಾಗಿದೆ. ಆ ದೇಶಕ್ಕೆ ಮೋದಿ ಅವರ ಮೊದಲ ಪ್ರವಾಸವಾಗಿದೆ.
ನೈಜೀರಿಯಾ ಅಧ್ಯಕ್ಷ ಬೋಲಾ ಅಹ್ಮದ್ ಟಿನುಬು ಅವರ ಆಹ್ವಾನದ ಮೇರೆಗೆ ಅಲ್ಲಿಗೆ ತೆರಳಿದ್ದಾರೆ. ದ್ವಿಪಕ್ಷೀಯ ಮಾತುಕತೆಯ ಬಳಿಕ ಸೋಮವಾರ ಬ್ರೆಜಿಲ್ಗೆ ತೆರಳಲಿದ್ದಾರೆ. ರಿಯೊ ಡಿ ಜನೈರೊದಲ್ಲಿ ನವೆಂಬರ್ 18-19 ರಂದು ನಡೆಯುವ ಜಿ20 ಶೃಂಗದಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಮತ್ತು ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರೊಂದಿಗೆ ಪಾಲ್ಗೊಳ್ಳಲಿದ್ದಾರೆ. ಬಳಿಕ ನವೆಂಬರ್ 19 ರಿಂದ 21ರ ವರೆಗೆ ಗಯಾನ ಪ್ರವಾಸ ಮಾಡಲಿದ್ದಾರೆ.
ಡೊಮಿನಿಕಾ ಗೌರವ:ಮೂರು ದಿನಗಳ ಹಿಂದಷ್ಟೇ ಡೊಮಿನಿಕಾ ದೇಶವು ತನ್ನ ಅತ್ಯುನ್ನತ ನಾಗರಿಕ ಗೌರವ 'ಡಾಮಿನಿಕಾ ಅವಾರ್ಡ್ ಆಫ್ ಹಾನರ್' ಅನ್ನು ಪ್ರಧಾನಿ ಮೋದಿ ಅವರಿಗೆ ಘೋಷಿಸಿದೆ. ಕೋವಿಡ್ ಸಾಂಕ್ರಾಮಿಕದ ವೇಳೆ ನೀಡಿದ ನೆರವು, ಉಭಯ ದೇಶಗಳ ಬಾಂಧವ್ಯವನ್ನು ಬಲಪಡಿಸುವ ನಿಟ್ಟಿನಲ್ಲಿ ತೋರಿದ ಬದ್ಧತೆಯನ್ನು ಗುರುತಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಅಧ್ಯಕ್ಷೆ ಸಿಲ್ವೆನಿ ಬರ್ಟನ್ ಅವರು ಮೋದಿ ಅವರಿಗೆ ಗಯಾನಾದಲ್ಲಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಅಲ್ಲಿನ ಪ್ರಧಾನ ಕಚೇರಿ ತಿಳಿಸಿದೆ.
ಇದನ್ನೂ ಓದಿ:ನೈಜೀರಿಯಾಗೆ ಬಂದಿಳಿದ ಪ್ರಧಾನಿ ಮೋದಿ; ರಾಜಧಾನಿ ಅಬುಜಾದ 'ಕೀಲಿ ಕೈ' ಕೊಟ್ಟು ವಿಶೇಷ ಗೌರವ, ಭಾರತೀಯ ಸಮುದಾಯದಿಂದ ಅದ್ಧೂರಿ ಸ್ವಾಗತ