ಕಳೆದ ರಾತ್ರಿ ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ ಪ್ರಸಾರ ಕಂಡಿದೆ. ಹನುಮಂತು ವಿಜೇತರಾಗಿ ಟ್ರೋಫಿ ಮುಡಿಗೇರಿಸಿಕೊಂಡಿದ್ದಾರೆ. ವರ್ಣರಂಜಿತ ಕಾರ್ಯಕ್ರಮ ಒಂದು ಭಾವನಾತ್ಮಕ ಕ್ಷಣಕ್ಕೂ ಸಾಕ್ಷಿಯಾಗಿತ್ತು. ಹೌದು, ಇತ್ತೀಚೆಗಷ್ಟೇ ನಿರೂಪಕ ಸುದೀಪ್ ಅವರ ತಾಯಿ ವಿಧಿವಶರಾಗಿರೋದು ನಿಮಗೆ ತಿಳಿದಿರುವ ವಿಚಾರವೇ. ಅವರ ಸ್ಮರಣೆ ಈ ವೇದಿಕೆಯಲ್ಲಿ ನಡೆಯಿತು.
ಸರೋಜಾ ಅವರ ಸ್ಮರಣೆ : 2024ರ ಅಕ್ಟೋಬರ್ 20ರಂದು ಸುದೀಪ್ ಅವರ ತಾಯಿ ಸರೋಜಾ (75) ಕೊನೆಯುಸಿರೆಳೆದರು. ಕೆಲವೇ ದಿನಗಳಲ್ಲಿ ಬಿಗ್ ಬಾಸ್ ವೇದಿಕೆಯಲ್ಲಿ ಶ್ರದ್ಧಾಂಜಲಿ ಅರ್ಪಿಸಲಾಗಿತ್ತು. ಕಳೆದ ರಾತ್ರಿ ಪ್ರಸಾರವಾದ ಗ್ರ್ಯಾಂಡ್ ಫಿನಾಲೆ ವೇದಿಕೆಯಲ್ಲೂ ಸರೋಜಾ ಅವರ ಸ್ಮರಣೆ ನಡೆಯಿತು.
🥺❤️ @KicchaSudeep#BBK11 #KicchaSudeep pic.twitter.com/FHet5G6G4z
— Kiccha Sudeep Trends™ (@TheSudeepTrends) January 26, 2025
ಭಾವುಕ ಕ್ಷಣ : ಬಿಗ್ ಬಾಸ್ ಸೀಸನ್ 11 ತಾವು ನಿರೂಪಿಸುತ್ತಿರುವ ಕೊನೆಯ ಸೀಸನ್ ಎಂದು ಸುದೀಪ್ ಈಗಾಗಲೇ ಘೋಷಿಸಿದ್ದಾರೆ. ಈ ಹಿನ್ನೆಲೆ, ಕಾರ್ಯಕ್ರಮ ವೀಕ್ಷಿಸಲು ಬಿಗ್ ಬಾಸ್ ಸೆಟ್ಗೆ ಸುದೀಪ್ ಅವರ ತಂದೆ ಸಂಜೀವ್ ಮತ್ತು ಮಗಳು ಸಾನ್ವಿ ಆಗಮಿಸಿದ್ದರು. ಸರೋಜಾ ಅವರ ನೆನಪಲ್ಲಿ ವಿಶೇಷ ಹಾಡೊಂದನ್ನು ಅರ್ಪಿಸಲಾಯ್ತ. ಆ ಸಂದರ್ಭ ಸುದೀಪ್, ಸಂಜೀವ್, ಸಾನ್ವಿ ಬಹಳ ಭಾವುಕರಾಗಿ ಕಣ್ಣೀರಿಟ್ಟರು. ವೇದಿಕೆ ಬಳಿ ಇದ್ದ ಇತರರೂ ಸೇರಿದಂತೆ ಟಿವಿ ಮೂಲಕ ಈ ದೃಶ್ಯ ಕಣ್ತುಂಬಿಕೊಂಡವರೂ ಭಾವುಕರಾದರು. ಆದಷ್ಟೂ ಪ್ರಯತ್ನಿಸಿದರೂ ಸುದೀಪ್ ಕಣ್ಣೀರು ಕಣ್ಣಂಚನ್ನು ದಾಟೇಬಿಟ್ಟಿತು.
ಅಮ್ಮನ ದನಿ ಕೇಳಿ ಭಾವುಕ : ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ಅವರು ಸುದೀಪ್ ಅವರಿಗಾಗಿ ಹಾಡೊಂದನ್ನು ಬರೆದಿದ್ರು. ಗ್ರ್ಯಾಂಡ್ ಫಿನಾಲೆಗೆ ಆಗಮಿಸಿದ ಅವರು ಪ್ರೇಕ್ಷಕರಂತೆ ಕುಳಿತು ಈ ಕಾರ್ಯಕ್ರಮ ವೀಕ್ಷಿಸಿ ಎಂದು ಕಿಚ್ಚನ ಬಳಿ ಮನವಿ ಮಾಡಿಕೊಂಡ್ರು. ಹಾಡಿನ ನಡುವೆ ಬಂದ ಅಮ್ಮನ ದನಿ ಕೇಳಿ ಸುದೀಪ್ ಬಹಳ ಭಾವುಕರಾದ್ರು.
ಮಗಳಿಗೆ ಪ್ರೀತಿಯ ಮಳೆಗೈದ ಕಿಚ್ಚ : ಯೋಗರಾಜ್ ಭಟ್ ಬರೆದ ಸಾಹಿತ್ಯಕ್ಕೆ ಸುದೀಪ್ ಪುತ್ರಿ ಸಾನ್ವಿ ದನಿ ನೀಡಿದ್ದರೆ, ವಾಸುಕಿ ಅವರ ಮ್ಯೂಸಿಕ್ ಈ ಹಾಡಿಗಿದೆ. ಹಾಡಿನ ಪ್ರತೀ ಸಾಲುಗಳು ನನಗಿಡಿಸಿತು. ಎಂದ ಸುದೀಪ್ ಹಾಡು ಹಾಡಿದ ಮಗಳಿಗೆ ವೇದಿಕೆಯಿಂದಲೇ ಪ್ರೀತಿಯ ಮಳೆಗೈದರು.
ಇದನ್ನೂ ಓದಿ: ಬಿಗ್ ಬಾಸ್: ಕಿಚ್ಚನಿಲ್ಲದೇ ಕಾರ್ಯಕ್ರಮ ಸಾಧ್ಯವೇ? ಮುಂದಿನ ನಿರೂಪಕ ಯಾರಾಗಬಹುದು?
ನನಗೆ ಸಿಕ್ಕ ದೊಡ್ಡ ಆಸ್ಕರ್ : ಈ ರೀತಿ ಸಾಹಿತ್ಯ ರಚಿಸಲು ನಿಮ್ಮಿಂದ (ಯೋಗರಾಜ್ ಭಟ್) ಮಾತ್ರ ಸಾಧ್ಯ. ಬಹಳ ಧನ್ಯವಾದಗಳು. ಈ ಹಾಡು ನನಗೆ ಸಿಕ್ಕ ದೊಡ್ಡ ಆಸ್ಕರ್. ತಂಡದವರು ಮರೆಯದೇ ಈ ಹಾಡನ್ನು ಪೆನ್ಡ್ರೈವ್ಗೆ ಹಾಕಿಕೊಡಿ ಎಂದು ತಿಳಿಸಿದ್ರು.
ಇದನ್ನೂ ಓದಿ: 5.23 ಕೋಟಿಗೂ ಹೆಚ್ಚು ಮತ ಪಡೆದ ಬಿಗ್ಬಾಸ್ ವಿನ್ನರ್ ಹನುಮಂತುಗೆ ಸಿಕ್ಕ ಹಣವೆಷ್ಟು?
ಬಾಲ ಕಲಾವಿದನಿಗೆ ವಿಶೇಷ ಉಡುಗೊರೆ : ಇನ್ನು ಈ ಹಾಡಿನಲ್ಲಿ ಸುದೀಪ್ ಆಗಿ ವೇದಿಕೆಗೆ ಬಂದ ಯುವನ್ ಎಂಬ ಬಾಲ ಕಲಾವಿದನಿಗೆ ಮುತ್ತಿಟ್ಟು ತಮ್ಮ ಪ್ರೀತಿ ವ್ಯಕ್ತಪಡಿಸಿದರು. ಜೊತೆಗೆ ತಮ್ಮ ಕೈಯಲ್ಲಿದ್ದ ಬ್ರೇಸ್ಲೈಟ್ ಅನ್ನು ಉಡುಗೊರೆಯಾಗಿ ನೀಡೋ ಮೂಲಕ ಮನದುಂಬಿ ಧನ್ಯವಾದ ಅರ್ಪಿಸಿದರು.