ಬೆಂಗಳೂರು/ಧಾರವಾಡ: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ) ಪ್ರಕರಣ ಸಂಬಂಧ ಲೋಕಾಯುಕ್ತ ಪೊಲೀಸರು ತನಿಖಾ ಪ್ರಗತಿ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಹೈಕೋರ್ಟ್‌ಗೆ ಸಲ್ಲಿಸಿದರು.
ಪ್ರಕರಣದ ತನಿಖೆಯನ್ನು ಕೇಂದ್ರ ತನಿಖಾ ದಳ(ಸಿಬಿಐ)ಗೆ ವಹಿಸಬೇಕು ಕೋರಿ ದೂರುದಾರ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠಕ್ಕೆ ಲೋಕಾಯುಕ್ತ ಪರ ವಕೀಲರು ವರದಿಯನ್ನು ಸಲ್ಲಿಸಿದರು.
ಅಲ್ಲದೆ, ಪ್ರಕರಣಕ್ಕೆ ಸಂಬಂಧಿಸಿದಂತೆ ವರದಿ ಮತ್ತು ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸೇರಿಸಿ ವರದಿಯನ್ನು ಸಲ್ಲಿಸಲಾಗಿದೆ ಎಂದು ವಕೀಲರು ಪೀಠಕ್ಕೆ ಮನವಿ ಮಾಡಿದರು. ಆದರೆ, ವರದಿಯಲ್ಲಿನ ಅಂಶಗಳನ್ನು ಬಹಿರಂಗಗೊಳಿಸಿಲ್ಲ.
ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ನಡೆಸಿದ್ದ ವಿಚಾರಣೆ ವೇಳೆ, ಲೋಕಾಯುಕ್ತ ಪೊಲೀಸರು ತನಿಖಾ ವರದಿಯನ್ನು ಪೀಠಕ್ಕೆ ಸಲ್ಲಿಸಬೇಕು ಎಂದು ಸೂಚನೆ ನೀಡಲಾಗಿತ್ತು. ಅದರಂತೆ ವರದಿ ಸಲ್ಲಿಕೆ ಮಾಡಲಾಗಿದೆ.
ಹೈಕೋರ್ಟ್ ಇಲ್ಲಿವರೆಗೆ ಆದಂತಹ ವರದಿ ಸಲ್ಲಿಸಲು ಲೋಕಾಯುಕ್ತಕ್ಕೆ ಆದೇಶಿಸಿತ್ತು. ಅದರಂತೆ ಮೈಸೂರು ಲೋಕಾಯುಕ್ತ ಎಸ್‌ಪಿ ಉದೇಶ ಹಾಗೂ ಸಿಬ್ಬಂದಿಗಳು ಆಗಮಿಸಿ ತನಿಖಾ ವರದಿ ಸಲ್ಲಿಸಿದರು. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಪ್ರಮುಖ ದ್ವಾರದಲ್ಲಿ ಹೈ ಸೆಕ್ಯೂರಿಟಿ ಒದಗಿಸಲಾಗಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಸ್ನೇಹಮಯಿ ಕೃಷ್ಣ ಪ್ರತಿಕ್ರಿಯೆ : ವಿಚಾರಣೆಗೆ ಆರಂಭಕ್ಕೂ ಮುನ್ನ ಕೋರ್ಟ್ಗೆ ಆಗಮಿಸಿದ ಅರ್ಜಿದಾರ ಸ್ನೇಹಮಯಿ ಕೃಷ್ಣ ಮಾಧ್ಯಮದವರೊಂದಿಗೆ ಮಾತನಾಡಿ, "ಸಿಎಂ ಸಿದ್ದರಾಮಯ್ಯ ಸೇರಿ ಪ್ರಭಾವಿ ರಾಜಕಾರಣಿಗಳು, ಅಧಿಕಾರಿಗಳಿಗೆ ಶಿಕ್ಷೆ ಖಚಿತ. ಮುಡಾದಲ್ಲಿ ಸಾವಿರಾರು ಕೋಟಿ ರೂಪಾಯಿ ಭ್ರಷ್ಟಾಚಾರ ಆಗಿದೆ. ನಾನು ಕೇವಲ ಸಿದ್ದರಾಮಯ್ಯ ವಿರುದ್ಧ ಹೋರಾಟ ಮಾಡುತ್ತಿಲ್ಲ. ಸಿದ್ದರಾಮಯ್ಯ ಉದಾಹರಣೆ ಇಟ್ಕೊಂಡು ಎಲ್ಲವೂ ತನಿಖೆ ಆಗಬೇಕು. ತನಿಖೆ ಆದರೆ ಸಿದ್ದರಾಮಯ್ಯ, ಪ್ರಭಾವಿ ರಾಜಕಾರಣಿಗಳು ಜೈಲಿಗೆ ಹೋಗುವುದು ಖಚಿತ. ಇವತ್ತು ಹೈಕೋರ್ಟ್ನಲ್ಲಿ ವಿಚಾರಣೆ ಇದೆ. ಶೇಕಡಾ 99 ರಷ್ಟು ಆದೇಶ ಹೊರಬರಬಹುದು" ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ: ಮುಡಾ ಹಗರಣ: ಸೋಮವಾರ ಧಾರವಾಡ ಹೈಕೋರ್ಟ್ ಪೀಠಕ್ಕೆ ಲೋಕಾಯುಕ್ತ ತನಿಖಾ ವರದಿ ಸಲ್ಲಿಕೆ