ಕ್ಯಾಲಿಫೋರ್ನಿಯಾ, ಅಮೆರಿಕ:ಲಾಸ್ ಏಂಜಲೀಸ್ನ ಉತ್ತರದ ಕಡಿದಾದ ಪರ್ವತಗಳಲ್ಲಿ ಮತ್ತೆ ಕಾಳ್ಗಿಚ್ಚು ವ್ಯಾಪಿಸಿಕೊಂಡಿದೆ. ಇದು ತೀವ್ರಗತಿಯಲ್ಲಿ ಹರಡುತ್ತಿದ್ದು, ಈ ಪ್ರದೇಶದ 50 ಸಾವಿರಕ್ಕೂ ಅಧಿಕ ಜನರನ್ನು ಸ್ಥಳಾಂತರ ಮಾಡಲು ಸರ್ಕಾರ ಆದೇಶ ನೀಡಲಾಗಿದೆ.
ಬುಧವಾರ ಬೆಳಗ್ಗೆ ತಡವಾಗಿ ಬೆಂಕಿ ಕಾಣಿಸಿಕೊಂಡಿದೆ. ಇದು ಒಂದೇ ದಿನದೊಳಗೆ ಸುಮಾರು 41 ಚದರ ಕಿಲೋಮೀಟರ್ ವ್ಯಾಪಿಸಿಕೊಂಡು ಮರಗಳು, ಅರಣ್ಯು ಪ್ರದೇಶವನ್ನು ಸುಟ್ಟುಹಾಕಿದೆ. ಇನ್ನಷ್ಟು ವ್ಯಾಪಿಸುತ್ತಿರುವ ಕಾರಣ ಈ ಪ್ರದೇಶದಲ್ಲಿ ಜನರ ಸ್ಥಳಾಂತರ ಪ್ರಕ್ರಿಯೆ ಆರಂಭಿಸಲು ಸೂಚಿಸಲಾಗಿದೆ.
ಶೇ 14 ರಷ್ಟು ನಿಯಂತ್ರಣಕ್ಕೆ ತರಲಾಗಿದೆ;ಈ ಬಗ್ಗೆ ಮಾಹಿತಿ ನೀಡಿರುವ ಲಾಸ್ ಏಂಜಲೀಸ್ ಕೌಂಟಿ ಅಗ್ನಿಶಾಮಕ ದಳದ ಮುಖ್ಯಸ್ಥ ಆಂಥೋನಿ ಮರ್ರೋನ್, ಈ ಪ್ರದೇಶವು ತೀವ್ರ ಪ್ರಮಾಣದ ಕಾಡ್ಗಿಚ್ಚಿನ ಅಪಾಯಕ್ಕೀಡಾಗಿದೆ. ಬೆಂಕಿ ನಂದಿಸಲು ಅಗ್ನಿಶಾಮಕ ದಳಗಳು ಸತತವಾಗಿ ಕಾರ್ಯಾಚರಣೆ ನಡೆಸುತ್ತಿವೆ. ಸದ್ಯಕ್ಕೆ ಶೇಕಡಾ 14 ರಷ್ಟು ಅಗ್ನಿಯನ್ನು ನಿಯಂತ್ರಣಕ್ಕೆ ತರಲಾಗಿದೆ. ಕಾಳ್ಗಿಚ್ಚು, ಕಳೆದ 15 ದಿನಗಳಿಗಿಂತ ಭಿನ್ನವಾಗಿದೆ ಎಂದು ಹೇಳಿದ್ದಾರೆ.
ಲಾಸ್ ಏಂಜಲೀಸ್ ಮತ್ತು ವೆಂಚುರಾ ಕೌಂಟಿ ಪ್ರದೇಶಗಳಲ್ಲಿ ಶುಕ್ರವಾರದವರೆಗೂ ರೆಡ್ ಅಲರ್ಟ್ ಘೋಷಿಸಲಾಗಿದೆ. ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ಹೊತ್ತಿಕೊಳ್ಳುವ ಹಾಟ್ ಸ್ಪಾಟ್‌ಗಳಲ್ಲಿ ತೀವ್ರ ಎಚ್ಚರಿಕೆ ವಹಿಸಿದ್ದಾರೆ. ಬೆಂಕಿಯಿಂದಾಗಿ 31 ಸಾವಿರಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲು ಆದೇಶಿಸಲಾಗಿದೆ. ಇನ್ನೂ 23 ಸಾವಿರ ಜನರ ಸ್ಥಳಾಂತರದ ಎಚ್ಚರಿಕೆ ನೀಡಲಾಗಿದೆ. ಸದ್ಯ ಅರಣ್ಯದಲ್ಲಿ ಮಾತ್ರ ಬೆಂಕಿಯ ರೌದ್ರಾವತಾರ ಮುಂದುವರಿದಿದೆ. ಮನೆಗಳು ಅಥವಾ ಪ್ರಾಣ ಹಾನಿ ಸಂಭವಿಸಿದ ವರದಿಗಳಿಲ್ಲ ಎಂದು ಅವರು ಹೇಳಿದ್ದಾರೆ.