ಗಾಜಾ:ಗಾಜಾ ಪಟ್ಟಿಯ ದಕ್ಷಿಣ ನಗರ ರಫಾ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಮೇಲೆ ಇಸ್ರೇಲ್ ಸೇನೆ ಸೋಮವಾರ ನಡೆಸಿದ ಭಾರಿ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 100ಕ್ಕೇರಿದೆ ಎಂದು ಪ್ಯಾಲೆಸ್ಟೈನ್ ಸುದ್ದಿ ಸಂಸ್ಥೆ ವಾಫಾ ತಿಳಿಸಿದೆ. ಸೋಮವಾರ ಮುಂಜಾನೆ ರಫಾ ಪ್ರದೇಶದ ಮೇಲೆ ಇಸ್ರೇಲ್ ಸೇನೆ ಸುಮಾರು 40 ವೈಮಾನಿಕ ದಾಳಿಗಳನ್ನು ನಡೆಸಿದೆ ಎಂದು ಅದು ಹೇಳಿದೆ.
ದಕ್ಷಿಣ ಗಾಜಾದಲ್ಲಿನ ಭಯೋತ್ಪಾದಕ ನೆಲೆಗಳ ಮೇಲೆ ಸೋಮವಾರ ಸರಣಿ ದಾಳಿಗಳನ್ನು ನಡೆಸಿದ್ದೇವೆ ಎಂದು ಇಸ್ರೇಲ್ ಸೇನೆ ಹೇಳಿಕೆಯಲ್ಲಿ ತಿಳಿಸಿದೆ. ಆದರೆ, ಸೇನೆ ಇತರ ವಿವರಗಳನ್ನು ನೀಡಿಲ್ಲ.
ಇಬ್ಬರು ಒತ್ತೆಯಾಳುಗಳನ್ನು ರಕ್ಷಿಸಿಕೊಂಡ ಇಸ್ರೇಲ್: ಅಕ್ಟೋಬರ್ 7 ರಂದು ಹಮಾಸ್ ಅಪಹರಿಸಿದ್ದ ಇಬ್ಬರು ಒತ್ತೆಯಾಳುಗಳನ್ನು ಇಸ್ರೇಲ್ ಮಿಲಿಟರಿ ಸೋಮವಾರ ಗಾಜಾದ ದಕ್ಷಿಣ ರಫಾ ಪ್ರದೇಶದಿಂದ ರಕ್ಷಿಸಿದೆ. ಇಸ್ರೇಲ್ ಸೇನೆಯ ಪ್ರಕಾರ, ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್), ಇಸ್ರೇಲ್ನ ದೇಶೀಯ ಶಿನ್ ಬೆಟ್ ಭದ್ರತಾ ಪಡೆ ಮತ್ತು ರಫಾದಲ್ಲಿನ ವಿಶೇಷ ಪೊಲೀಸ್ ಘಟಕ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಫರ್ನಾಂಡೊ ಸೈಮನ್ ಮರ್ಮನ್ (60) ಮತ್ತು ಲೂಯಿಸ್ ಹಾರ್ (70) ಎಂಬ ಇಬ್ಬರು ವ್ಯಕ್ತಿಗಳನ್ನು ವಸತಿ ಕಟ್ಟಡವೊಂದರಿಂದ ರಕ್ಷಣೆ ಮಾಡಲಾಗಿದೆ.