ಪೇಶಾವರ(ಪಾಕಿಸ್ತಾನ):ವಾಯವ್ಯ ಪಾಕಿಸ್ತಾನದ ಪೊಲೀಸ್ ಠಾಣೆಯ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ. ಈ ದಾಳಿಗೆ ಸುಮಾರು ಮಂದಿ 10 ಪೊಲೀಸರು ಬಲಿಯಾಗಿದ್ದು, ಸುಮಾರು ಆರು ಮಂದಿ ಗಾಯಗೊಂಡಿದ್ದಾರೆ. ಉಗ್ರರು ರಾಕೆಟ್, ಬಂದೂಕುಗಳು ಮತ್ತು ಗ್ರೆನೇಡ್‌ಗಳೊಂದಿಗೆ ಶಸ್ತ್ರಸಜ್ಜಿತವಾಗಿದ್ದರು ಎಂದು ತಿಳಿದುಬಂದಿದೆ.
ಅಫ್ಘಾನಿಸ್ತಾನದ ಗಡಿಯಲ್ಲಿರುವ ಖೈಬರ್ ಪಖ್ತುಂಕ್ವಾ ಪ್ರಾಂತ್ಯದ ಡೇರಾ ಇಸ್ಮಾಯಿಲ್ ಖಾನ್ ಜಿಲ್ಲೆಯಲ್ಲಿ ಈ ವರ್ಷ ಭೀಕರ ದಾಳಿಯಲ್ಲಿ ಆರು ಜನ ಅಧಿಕಾರಿಗಳು ಗಾಯಗೊಂಡಿದ್ದಾರೆ. ಯಾವುದೇ ಗುಂಪು ಈ ದಾಳಿಯ ಹೊಣೆ ಹೊತ್ತುಕೊಂಡಿಲ್ಲ. ದಾಳಿಕೋರರನ್ನು ಪತ್ತೆಹಚ್ಚಲು ಮತ್ತು ಬಂಧಿಸಲು ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸುತ್ತಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಅನೀಸ್-ಉಲ್-ಹಸನ್ ಹೇಳಿದ್ದಾರೆ.
ಡಿಸೆಂಬರ್‌ನಲ್ಲಿ ಡೇರಾ ಇಸ್ಮಾಯಿಲ್ ಖಾನ್ ಜಿಲ್ಲೆಯ ಪೊಲೀಸ್ ಠಾಣೆಯ ಹೊರಗೆ ಆತ್ಮಹತ್ಯಾ ಬಾಂಬ್ ದಾಳಿ ನಡೆದಿತ್ತು. ಈ ದಾಳಿ ನಡೆದು ಎರಡು ತಿಂಗಳ ಕಳೆಯುವಷ್ಟರಲ್ಲಿ ಮತ್ತೊಂದು ಹಿಂಸಾಚಾರ ನಡೆದಿದೆ. ಡಿಸೆಂಬರ್‌ನಲ್ಲಿ ನಡೆದ ಆತ್ಮಹತ್ಯಾ ದಾಳಿಯಲ್ಲಿ ಕನಿಷ್ಠ 23 ಸೈನಿಕರು ಸಾವನ್ನಪ್ಪಿ, 32 ಮಂದಿ ಗಾಯಗೊಂಡಿದ್ದರು.
ಇನ್ನು ಈ ದಾಳಿಯ ಹೊಣೆಯನ್ನು ತೆಹ್ರೀಕ್-ಎ-ಜಿಹಾದ್ ಪಾಕಿಸ್ತಾನ ಉಗ್ರ ಸಂಘಟನೆ ಹೊತ್ತುಕೊಂಡಿತ್ತು. ಇದು ಪಾಕಿಸ್ತಾನಿ ತಾಲಿಬಾನ್‌ನ ಉಪಶಾಖೆ ಎಂದು ನಂಬಲಾಗಿದೆ. ಡೇರಾ ಇಸ್ಮಾಯಿಲ್ ಖಾನ್‌ನಲ್ಲಿ ಡಿಸೆಂಬರ್ 5ರ ದಾಳಿಯ ನಂತರ ಮಿಲಿಟರಿ ಮತ್ತು ಸ್ಥಳೀಯ ಪೊಲೀಸ್ ಅಧಿಕಾರಿಗಳ ಪ್ರಕಾರ, ರಕ್ಷಣಾ ಪಡೆಗಳು ಅನೇಕ ಕಾರ್ಯಾಚರಣೆಗಳಲ್ಲಿ 27 ದಂಗೆಕೋರರನ್ನು ಹೊಡೆದಾಕಿವೆ. ಸೋಮವಾರದ ಹಿಂಸಾಚಾರವು ಈ ವಾರ ನಡೆಯಲಿರುವ ಸಂಸತ್ತಿನ ಚುನಾವಣೆಗೆ ಮುಂಚಿತವಾಗಿ ಸಂಭವಿಸಿದೆ.