ಕರ್ನಾಟಕ

karnataka

ETV Bharat / international

ಜೋರ್ಡಾನ್ ಬಾರ್ಡೆಲ್ಲಾ: 28ನೇ ವಯಸ್ಸಿನಲ್ಲಿಯೇ ಫ್ರಾನ್ಸ್​ ಪ್ರಧಾನಿ ಗದ್ದುಗೆಗೆ ಹತ್ತಿರವಾದ ಬಲಪಂಥೀಯ ನಾಯಕ - France Elections

ತೀವ್ರ ಬಲಪಂಥೀಯ ನಾಯಕನಾಗಿರುವ ಜೋರ್ಡಾನ್ ಬಾರ್ಡೆಲ್ಲಾ ಅತ್ಯಲ್ಪ ಅವಧಿಯಲ್ಲಿಯೇ ಸಂಭಾವ್ಯ ಪ್ರಧಾನಿ ಅಭ್ಯರ್ಥಿಯಾಗಿ ಗುರುತಿಸಿಕೊಂಡಿದ್ದಾರೆ.

By ETV Bharat Karnataka Team

Published : Jul 8, 2024, 7:55 PM IST

ಫ್ರಾನ್ಸ್​ ಚುನಾವಣೆ (ಸಾಂದರ್ಭಿಕ ಚಿತ್ರ)
ಫ್ರಾನ್ಸ್​ ಚುನಾವಣೆ (ಸಾಂದರ್ಭಿಕ ಚಿತ್ರ) (IANS)

28 ವರ್ಷದ ಜೋರ್ಡಾನ್ ಬಾರ್ಡೆಲ್ಲಾ ಫ್ರಾನ್ಸ್​ನ ನೂತನ ಪ್ರಧಾನಿಯಾಗುವ ರೇಸ್​ನಲ್ಲಿ ಮುಂಚೂಣಿಯಲ್ಲಿದ್ದಾರೆ. ಬಲಪಂಥೀಯ ಪಕ್ಷವಾದ ನ್ಯಾಷನಲ್ ರ್ಯಾಲಿಯು ಫ್ರಾನ್ಸ್​ನ ಅತಿದೊಡ್ಡ ರಾಜಕೀಯ ಶಕ್ತಿಯಾಗಲು ಅವರ ಶ್ರಮ ಅಪಾರವಾಗಿದೆ. ಕಾಲೇಜು ಶಿಕ್ಷಣವನ್ನು ಅರ್ಧದಲ್ಲೇ ಬಿಟ್ಟ ಬಾರ್ಡೆಲ್ಲಾ ಸಂಭಾವ್ಯ ಪ್ರಧಾನ ಮಂತ್ರಿಯಾಗಿ ಗುರುತಿಸಿಕೊಂಡಿದ್ದು, ಅನೇಕರಿಗೆ ಆಶ್ಚರ್ಯವನ್ನುಂಟು ಮಾಡಿದೆ.

ಬಾರ್ಡೆಲ್ಲಾ ಅವರ ಆರಂಭಿಕ ಜೀವನ ಮತ್ತು ಶಿಕ್ಷಣ: ಬಾರ್ಡೆಲ್ಲಾ 1995 ರಲ್ಲಿ ಉತ್ತರ ಪ್ಯಾರಿಸ್​ನ ಉಪನಗರ ಸೀನ್ - ಸೇಂಟ್ - ಡೆನಿಸ್​ನಲ್ಲಿ ಜನಿಸಿದರು. ಇವರ ತಂದೆ ಅಲ್ಜೀರಿಯನ್ ಮೂಲ ಹೊಂದಿರುವ ಇಟಾಲಿಯನ್ ಆಗಿದ್ದಾರೆ. ಬಾರ್ಡೆಲ್ಲಾ ಅವರನ್ನು ಅವರ ತಾಯಿಯೇ ಸಾಕಿ ಬೆಳೆಸಿದರು. ಬಾರ್ಡೆಲ್ಲಾ ಲೈಸಿ ಸೇಂಟ್-ಜೀನ್-ಬ್ಯಾಪ್ಟಿಸ್ಟ್-ಡಿ-ಲಾ-ಸಾಲೆ ಎಂಬ ಖಾಸಗಿ ಶಾಲೆಗೆ ಸೇರಿದರು. ಶಾಲಾ ಶಿಕ್ಷಣದ ವೆಚ್ಚವನ್ನು ತಂದೆಯೇ ಭರಿಸುತ್ತಿದ್ದರು. ಆದರೆ ಬಾರ್ಡೆಲ್ಲಾ ವಿಶ್ವವಿದ್ಯಾಲಯ ಪದವಿ ಪಡೆದಿಲ್ಲ.

ಪ್ಯಾರಿಸ್-ಸೊರ್ಬೊನ್ ವಿಶ್ವವಿದ್ಯಾಲಯದಲ್ಲಿ ಭೂಗೋಳಶಾಸ್ತ್ರ ಕಲಿಯುತ್ತಿರುವಾಗ ಅವರು ರಾಜಕೀಯ ಸೇರಲು ಕಾಲೇಜಿನಿಂದ ಹೊರಬಿದ್ದರು. ಬಾರ್ಡೆಲ್ಲಾ ತಾನು ಬಾಲ್ಯ ಕಳೆದ ಉಪನಗರವನ್ನು ಆಕ್ರಮಣಕಾರಿ ಎಂದು ಚಿತ್ರಿಸಲು ಪ್ರಯತ್ನಿಸಿದ್ದಾರೆ. ಜಿಲ್ಲೆಯ ಹೆಚ್ಚಿನ ಸಂಖ್ಯೆಯ ವಲಸಿಗರು ಮತ್ತು ನಿರಾಶ್ರಿತರನ್ನು ಟೀಕಿಸುತ್ತ ರಾಜಕೀಯ ಗಣ್ಯರೊಂದಿಗೆ ತಮ್ಮನ್ನು ಹೋಲಿಸಿಕೊಂಡಿದ್ದಾರೆ.

ರಾಜಕೀಯ ಪ್ರವೇಶ: ಬರಹಗಾರ ಪಿಯರೆ-ಸ್ಟೀಫನ್ ಫೋರ್ಟ್ ಅವರ ವಿವರಣೆಯ ಪ್ರಕಾರ, ಬಾರ್ಡೆಲ್ಲಾ 2012 ರಲ್ಲಿ 16 ನೇ ವಯಸ್ಸಿನಲ್ಲಿ ಆರ್​ಎನ್ ಪಕ್ಷಕ್ಕೆ ಸೇರಿದರು. 2014 ರಲ್ಲಿ, ಅವರನ್ನು ಸೀನ್-ಸೇಂಟ್-ಡೆನಿಸ್ ಪ್ರದೇಶದ ಪಕ್ಷದ ಪ್ರತಿನಿಧಿಯಾಗಿ ನೇಮಿಸಲಾಯಿತು. ಪಕ್ಷದ ಸಹವರ್ತಿ ಮತ್ತು ಮಾಜಿ ಸಹೋದ್ಯೋಗಿ, ಸ್ಥಳೀಯ ಕೌನ್ಸಿಲರ್ ಮ್ಯಾಕ್ಸೆನ್ಸ್ ಬುಟ್ಟೆ ಅವರು ತಾನು ಇಸ್ಲಾಂಗೆ ಮತಾಂತರಗೊಂಡಿದ್ದೇನೆ ಎಂದು ಸಾರ್ವಜನಿಕವಾಗಿ ಘೋಷಿಸಿದ ನಂತರ, ಬುಟ್ಟೆ ಅವರನ್ನು ಬಾರ್ಡೆಲ್ಲಾ ಪಕ್ಷದಿಂದ ಅಮಾನತುಗೊಳಿಸಿದ್ದರು. ಈ ಕ್ರಮದಿಂದ ಅವರಿಗೆ ರಾಜಕೀಯವಾಗಿ ಜನಪ್ರಿಯತೆ ಸಿಗುವಂತಾಯಿತು.

17 ನೇ ವಯಸ್ಸಿಗೆ ಪಕ್ಷ ಸೇರಿದ ನಂತರ ಅವರು 21 ನೇ ವಯಸ್ಸಿನಲ್ಲಿ ಪಕ್ಷದ ವಕ್ತಾರರಾಗಿ ಮತ್ತು ಉಪಾಧ್ಯಕ್ಷರಾಗಿ ನೇಮಕವಾಗುವ ಮೊದಲು ಅದರ ಯುವ ಘಟಕದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು ಮತ್ತು 2019 ರಲ್ಲಿ ಇತಿಹಾಸದಲ್ಲಿ ಯುರೋಪಿಯನ್ ಸಂಸತ್ತಿನ ಎರಡನೇ ಕಿರಿಯ ಸದಸ್ಯರಾದರು.

2022 ರಲ್ಲಿ ಲೆ ಪೆನ್ ಅವರು ಆರ್​ಎನ್ ಪಕ್ಷದ ಅಧ್ಯಕ್ಷರಾದ ನಂತರ ಬಾರ್ಡೆಲ್ಲಾ ಅವರ ರಾಜಕೀಯ ಭವಿಷ್ಯ ಉಜ್ವಲವಾಗಲಾರಂಭಿಸಿತು. ಲೆ ಪೆನ್ ಅವರು 2027 ರಲ್ಲಿ ಮುಂದಿನ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲ್ಲಲು ಕಾರ್ಯತಂತ್ರ ರೂಪಿಸಲಾರಂಭಿದ್ದರು.

ಬಾರ್ಡೆಲ್ಲಾ ಅವರೊಂದಿಗೆ ನಾಲ್ಕು ವರ್ಷಗಳ ಕಾಲ ಕೆಲಸ ಮಾಡಿದ ಮಾಧ್ಯಮ ತರಬೇತುದಾರ ಪಾಸ್ಕಲ್ ಹ್ಯೂಮೆ ಅವರ ಪ್ರಕಾರ, ಶ್ರೀಮತಿ ಲೆ ಪೆನ್ ಅವರು ಯುವಕ ಬಾರ್ಡೆಲ್ಲಾ ಅವರ ಕಷ್ಟದ ಜೀವನದ ಕಥೆಯು ತಮ್ಮ ಪಕ್ಷಕ್ಕೆ ಯಾವ ರೀತಿಯಲ್ಲಿ ಪ್ರಯೋಜನಕಾರಿಯಾಗಬಹುದು ಎಂಬುದನ್ನು ಗುರುತಿಸಿದರು. ಅಲ್ಲದೆ ಬಾರ್ಡೆಲ್ಲಾ ಅವರನ್ನು ತನ್ನ "ಸಿಂಹದ ಮರಿ" ಎಂದು ಅವರು ಸಂಬೋಧಿಸಿದರು.

ಸಾರ್ವಜನಿಕವಾಗಿ ಗುರುತಿಸಿಕೊಳ್ಳುವುದು ಆದ್ಯತೆ: ವಲಸಿಗ ವಿರೋಧಿ ಸಿದ್ಧಾಂತ ಹೊಂದಿರುವ ಆರ್​ಎನ್ ಪಕ್ಷವನ್ನು ಲೆ ಪೆನ್ ಅವರನ್ನು ಹೊರತುಪಡಿಸಿ ಮುನ್ನಡೆಸಿದ ಮತ್ತೊಬ್ಬ ವ್ಯಕ್ತಿ ಬಾರ್ಡೆಲ್ಲಾ. ಮರೀನ್ ಲೆ ಪೆನ್ 2011 ರಲ್ಲಿ ಪಕ್ಷದ ನಾಯಕರಾಗಿ ತಮ್ಮ ತಂದೆಯ ಉತ್ತರಾಧಿಕಾರಿಯಾದರು. ಆದರೆ, ಪಕ್ಷವನ್ನು ಅದರ ಅತ್ಯಂತ ತೀವ್ರಗಾಮಿ, ಬಲಪಂಥೀಯ ಮನೋಭಾವನೆಯನ್ನು ತೊಡೆದು ಹಾಕುವ ಪ್ರಯತ್ನದಲ್ಲಿ 2015 ರಲ್ಲಿ ಲೆ ಪೆನ್ ಅವರನ್ನು ಪಕ್ಷದಿಂದ ಹೊರ ಹಾಕಲಾಯಿತು. ಆದರೆ, ಅವರ ಬದಲಿಗೆ ಆ ಸ್ಥಾನಕ್ಕೇರಿದ ಬಾರ್ಡೆಲ್ಲಾ ಅವರು ದೊಡ್ಡ ಮಟ್ಟದ ಜನಪ್ರಿಯತೆ ಗಳಿಸಿದರು.

ಟಿವಿ ಮಾಧ್ಯಮಗಳನ್ನು ಸೂಕ್ತವಾಗಿ ಬಳಸಿಕೊಂಡ ಬಾರ್ಡೆಲ್ಲಾ ತನ್ನ ಜನಪ್ರಿಯತೆಯನ್ನು ಹೆಚ್ಚಿಸಿಕೊಂಡರು ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿಯೂ ಯಶಸ್ವಿಯಾಗಿ ಗುರುತಿಸಿಕೊಂಡರು. ಟಿಕ್​ಟಾಕ್​ನಲ್ಲಿ 1.7 ಮಿಲಿಯನ್ ಫಾಲೋವರ್ಸ್​ ಮತ್ತು ಇನ್​ಸ್ಟಾಗ್ರಾಮ್​ನಲ್ಲಿ 7,50,000 ಫಾಲೋವರ್ಸ್ ಹೊಂದಿರುವ ಬಾರ್ಡೆಲ್ಲಾ ಸಾಮಾಜಿಕ ಮಾಧ್ಯಮಗಳಲ್ಲಿ ಅತ್ಯಂತ ಸಕ್ರಿಯರಾಗಿದ್ದಾರೆ.

ಇದನ್ನೂ ಓದಿ : ಫ್ರಾನ್ಸ್‌ ಚುನಾವಣೆ: ಎಡಪಂಥೀಯರ ಮುನ್ನಡೆ; ಯಾವುದೇ ಪಕ್ಷಕ್ಕಿಲ್ಲ ಬಹುಮತ - France Election

ABOUT THE AUTHOR

...view details