ವಾಷಿಂಗ್ಟನ್:ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪದಗ್ರಹಣ ಕಾರ್ಯಕ್ರಮಕ್ಕೆ ತೆರಳಿರುವ ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರು ಕ್ವಾಡ್ ಸಭೆಯಲ್ಲಿ ಭಾಗಿಯಾದರು. ಇದು ಟ್ರಂಪ್ ಅಧ್ಯಕ್ಷರಾದ ಬಳಿಕದ ಮೊದಲ ಸಭೆಯಾಗಿದೆ.
ಸಭೆಯಲ್ಲಿ ಭಾರತದ ಜೊತೆಗೆ ಆಸ್ಟ್ರೇಲಿಯಾ, ಜಪಾನ್ ಮತ್ತು ಅಮೆರಿಕದ ವಿದೇಶಾಂಗ ಸಚಿವರು ಭಾಗಿಯಾಗಿದ್ದರು. ಇದಾದ ಬಳಿಕ ಹೊಸದಾಗಿ ನೇಮಕಗೊಂಡ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಮೈಕ್ ವಾಲ್ಟ್ಜ್ ಅವರೊಂದಿಗೆ ಪ್ರತ್ಯೇಕ ಸಭೆ ನಡೆಸಿದರು.
ಕ್ವಾಡ್, ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಶಾಂತಿ, ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಗುರಿಯನ್ನು ಹೊಂದಿರುವ ನಾಲ್ಕು (ಭಾರತ, ಅಮೆರಿಕ, ಜಪಾನ್, ಆಸ್ಟ್ರೇಲಿಯಾ) ದೇಶಗಳ ಗುಂಪಾಗಿದೆ.
ಮಿತ್ರ ರಾಷ್ಟ್ರಗಳ ಮಾತುಕತೆ :ಟ್ರಂಪ್ ಅಧಿಕಾರ ವಹಿಸಿಕೊಂಡ ಕೆಲವೇ ಗಂಟೆಗಳಲ್ಲಿ ಕ್ವಾಡ್ನ ವಿದೇಶಾಂಗ ಸಚಿವರ ಸಭೆ ನಡೆದಿರುವುದು ಗಮನಾರ್ಹ. ಸಭೆಯ ಬಳಿಕ ಮಾತನಾಡಿದ ಅಮೆರಿಕದ ವಿದೇಶಾಂಗ ಸಚಿವ ಮಾರ್ಕೊ ರೊಬಿಯೊ, ಈ ಸಭೆಯು ಕ್ವಾಡ್ ಸದಸ್ಯ ರಾಷ್ಟ್ರಗಳ ವಿದೇಶಾಂಗ ನೀತಿಗೆ ಹೆಚ್ಚಿನ ಆದ್ಯತೆ ನೀಡುತ್ತದೆ. ಮುಕ್ತ, ಸ್ಥಿರ ಮತ್ತು ಸಮೃದ್ಧ ಇಂಡೋ- ಪೆಸಿಫಿಕ್ ರಾಷ್ಟ್ರಗಳ ನಿರ್ಮಾಣ ಮತ್ತು ಮಿತ್ರ ರಾಷ್ಟ್ರಗಳ ಜೊತೆಗೆ ಉತ್ತಮ ಬಾಂಧವ್ಯದ ಕುರಿತು ಚರ್ಚಿಸಲಾಯಿತು ಎಂದರು.
ರಾಷ್ಟ್ರಗಳ ನಡುವಿನ ದೂರದೃಷ್ಟಿ, ಕಾರ್ಯಸೂಚಿ, ಪರಸ್ಪರ ಸಹಯೋಗದ ಬಗ್ಗೆ ಮಾತುಕತೆ ನಡೆಸಲಾಯಿತು. ಕ್ವಾಡ್ ಜಾಗತಿಕ ಒಳಿತಿಗಾಗಿ ಒಂದು ಶಕ್ತಿಯಾಗಿ ಮುಂದುವರಿಯಲಿದೆ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸುತ್ತದೆ ಎಂದರು.