ದೇರ್ ಅಲ್ ಬಲಾಹ್(ಗಾಜಾ ಪಟ್ಟಿ): ಇಸ್ರೇಲ್ ಮೇಲೆ ಹಮಾಸ್ ನಡೆಸಿದ್ದ ದಾಳಿಗೆ ಇಂದು (ಅಕ್ಟೋಬರ್ 7) ವರ್ಷವಾಗಿದೆ. ಈ ಹಿನ್ನೆಲೆಯಲ್ಲಿ ಗಾಜಾ ಮತ್ತು ಲೆಬನಾನ್ ಮೇಲೆ ಇಸ್ರೇಲ್ ತೀವ್ರ ದಾಳಿ ನಡೆಸಿದೆ. ಹಮಾಸ್ ಮತ್ತು ಹಿಜ್ಬುಲ್ಲಾ ಬಂಡುಕೋರರನ್ನು ಗುರಿಯಾಗಿಸಿಕೊಂಡು ಇಸ್ರೇಲ್ ನಡೆಸಿದ ದಾಳಿಯಲ್ಲಿ ಹಲವರು ಮೃತಪಟ್ಟಿದ್ದಾರೆ. ಇದಕ್ಕೆ ಪ್ರತಿಯಾಗಿ ಹಿಜ್ಬುಲ್ಲಾ ಸಹ ರಾಕೆಟ್ ದಾಳಿ ಮಾಡಿದೆ.
ಭಾನುವಾರ ತಡರಾತ್ರಿ ಬೈರುತ್ ಉಪನಗರಗಳಲ್ಲಿ ಮತ್ತೆ ವೈಮಾನಿಕ ದಾಳಿ ನಡೆಸಲಾಗಿದೆ. ಉತ್ತರ ಗಾಜಾ ಮತ್ತು ದಕ್ಷಿಣ ಲೆಬನಾನ್‌ನ ಮೇಲೆ ಇಸ್ರೇಲ್ ಬಾಂಬ್ ದಾಳಿ ತೀವ್ರಗೊಳಿಸಿದೆ. ಮಸೀದಿಯ ಮೇಲೆ ನಡೆದ ದಾಳಿಯಲ್ಲಿ ಕನಿಷ್ಠ 19 ಜನರು ಸಾವನ್ನಪ್ಪಿದ್ದಾರೆ ಎಂದು ಪ್ಯಾಲೆಸ್ತೀನ್ ಅಧಿಕಾರಿಗಳು ತಿಳಿಸಿದ್ದಾರೆ.
ಬೈರುತ್‌ನ ಆಗ್ನೇಯದಲ್ಲಿರುವ ಕಮತಿಯೆಹ್ ಪಟ್ಟಣದಲ್ಲಿ ಭಾನುವಾರದಂದು ಪ್ರತ್ಯೇಕ ಇಸ್ರೇಲಿ ದಾಳಿಯಲ್ಲಿ ಮೂವರು ಮಕ್ಕಳು ಸೇರಿದಂತೆ ಆರು ಜನರು ಸಾವನ್ನಪ್ಪಿದ್ದಾರೆ ಎಂದು ಲೆಬನಾನ್‌ನ ಆರೋಗ್ಯ ಸಚಿವಾಲಯ ತಿಳಿಸಿದೆ. ಲೆಬನಾನ್‌ನ ಸರ್ಕಾರಿ ರಾಷ್ಟ್ರೀಯ ಸುದ್ದಿ ಸಂಸ್ಥೆ ಪ್ರಕಾರ, ಭಾನುವಾರ ರಾತ್ರಿ 30ಕ್ಕೂ ಹೆಚ್ಚು ಸ್ಟ್ರೈಕ್‌ಗಳು ವರದಿಯಾಗಿವೆ. ಇದೇ ವೇಳೆ, ಸುಮಾರು 130 ಸ್ಫೋಟಕಗಳು ಲೆಬನಾನ್‌ನಿಂದ ಇಸ್ರೇಲ್ ಪ್ರದೇಶಕ್ಕೆ ತಲುಪಿವೆ ಎಂದು ಇಸ್ರೇಲ್‌ನ ಮಿಲಿಟರಿ ಹೇಳಿದೆ.
ಹಮಾಸ್‌ನ ಅಕ್ಟೋಬರ್ 7, 2023ರ ದಾಳಿಗೆ ಒಂದು ವರ್ಷವಾದ ಬೆನ್ನಲ್ಲೇ ಇಸ್ರೇಲ್ ಲೆಬನಾನ್‌ನಲ್ಲಿ ಹಿಜ್ಬುಲ್ಲಾ ವಿರುದ್ಧ ಸಮರ ಸಾರಿದೆ. ಗಾಜಾದಲ್ಲಿ ಯುದ್ಧ ಪ್ರಾರಂಭವಾದಾಗಿನಿಂದ ಇಸ್ರೇಲ್ ನಡೆಸಿದ ಬಹುದೊಡ್ಡ ದಾಳಿಗಳಲ್ಲಿ ಇದು ಒಂದಾಗಿದೆ.
ಇದೇ ವೇಳೆ ಉತ್ತರದ ನಗರವಾದ ಹೈಫಾ ಮೇಲೆ ಹಿಜ್ಬುಲ್ಲಾ ದಾಳಿ ನಡೆಸಿರುವುದಾಗಿ ದೃಢಪಡಿಸಿರುವ ಇಸ್ರೇಲ್ ಸೇನೆ, ಈ ವೇಳೆ ಬಿದ್ದ ಸ್ಫೋಟಕಗಳು ರಾಕೆಟ್‌ಗಳಿಂದ ಬಂದಿವೆಯೇ ಅಥವಾ ಇಂಟರ್‌ಸೆಪ್ಟರ್‌ಗಳಿಂದಲೋ ಎಂಬುದು ಸ್ಪಷ್ಟವಾಗಿಲ್ಲ ಎಂದಿದೆ. ಈ ಬಗ್ಗೆ, ಹತ್ತಿರದ ನೌಕಾನೆಲೆಗೆ ಹೊಡೆಯಲು ಪ್ರಯತ್ನಿಸಲಾಗಿತ್ತು ಎಂದು ಹಿಜ್ಬುಲ್ಲಾ ಹೇಳಿಕೊಂಡಿದೆ. 10 ಜನರಿಗೆ ಚಿಕಿತ್ಸೆ ನೀಡಲಾಗಿದ್ದು, ಅವರಲ್ಲಿ ಹೆಚ್ಚಿನವರು ಸ್ಫೋಟಕಗಳ ಚೂರುಗಳಿಂದ ಗಾಯಗೊಂಡಿದ್ದಾರೆ ಎಂದು ಮ್ಯಾಗೆನ್ ಡೇವಿಡ್ ಅಡೋಮ್ ಆಂಬ್ಯುಲೆನ್ಸ್ ಸೇವೆಯು ತಿಳಿಸಿದೆ.