ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ) : ಕಳೆದ ಡಿಸೆಂಬರ್ ನಲ್ಲಿ ದರಖಾಸ್ತು ಪೋಡಿ ಅಭಿಯಾನ ಆರಂಭವಾಗಿ ರಾಜ್ಯದ್ಯಾಂತ ಇದುವರೆಗೆ ಅಂದಾಜು 5000 ಪೋಡಿಗಳ ದುರಸ್ತಿ ಆಗಿದೆ. ಅದರಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಈವರೆಗೆ 1236 ಪೋಡಿ ದುರಸ್ತಿ ಆಗಿದ್ದು ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ದೇವನಹಳ್ಳಿ ತಾಲ್ಲೂಕಿನ ವಿಶ್ವನಾಥಪುರ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆ ಸಮೀಪ ಜಿಲ್ಲಾಡಳಿತ ವತಿಯಿಂದ ಆಯೋಜಿಸಿದ್ದ ಕಂದಾಯ ಇಲಾಖೆ ಮತ್ತು ಭೂ ಮಾಪನ ಇಲಾಖೆಯಡಿ ಸರಳೀಕರಣವಾದ ದರಖಾಸ್ತು ಪೋಡಿ ಅಭಿಯಾನದ ವಿದ್ಯುಕ್ತ ಚಾಲನೆ ಮತ್ತು ಪೋಡಿ ದುರಸ್ತಿ/ ಹೊಸ ದಾಖಲೆ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪೋಡಿ ದುರಸ್ತಿ ರೈತರ ಬಹುದೊಡ್ಡ ಸಮಸ್ಯೆ ಆಗಿತ್ತು. ಸರಳೀಕರಣ ಪೋಡಿ ಅಭಿಯಾನ ಕೈಗೊಳ್ಳಲು ಒಂದು ವರ್ಷ ಪೂರ್ವ ಸಿದ್ಧತೆ ನಡೆಸಿ ಕಳೆದ ಡಿಸೆಂಬರ್ ನಲ್ಲಿ ಚಾಲನೆ ನೀಡಲಾಗಿತ್ತು. ಕಳೆದ 50-60 ವರ್ಷಗಳ ಹಿಂದೆ ಮಂಜೂರಾದ ಜಮೀನುಗಳಿಗೆ ಈಗ ಪೋಡಿ ಮಾಡಲಾಗುತ್ತಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಅಂದಾಜು 50000 ರೈತರಿಗೆ ಜಮೀನು ಮಂಜೂರು ಆಗಿದ್ದು, 18000 ರೈತರ ಬಳಿ ಪೋಡಿ ದುರಸ್ತಿಗೆ ಪೂರಕ ದಾಖಲೆಗಳಿವೆ. ಜಿಲ್ಲೆಯಲ್ಲಿ ಈಗ ನಡೆಯುತ್ತಿರುವ ಪೋಡಿ ಅಭಿಯಾನದ ವೇಗ ನೋಡಿದರೆ ಕನಿಷ್ಠ 6 ತಿಂಗಳಲ್ಲಿ 18000 ರೈತರಿಗೆ ಪ್ರತ್ಯೇಕ ಪೋಡಿ ದುರಸ್ತಿ ಮಾಡಿಸಬಹುದು. ಪೂರಕ ದಾಖಲೆಗಳು ಇಲ್ಲದಿರುವ ಜಮೀನುಗಳಿಗೆ ಮಿಸ್ಸಿಂಗ್ ಕಮಿಟಿ ಮುಂದೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು.
ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್ ಮುನಿಯಪ್ಪ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರ್ಕಾರಿ ಜಮೀನುಗಳನ್ನು ಮಂಜೂರು ಮಾಡಿ ಸಾಕಷ್ಟು ವರ್ಷಗಳು ಕಳೆದರೂ ಇದುವರೆಗೂ ಪೋಡಿ ಆಗಿರಲಿಲ್ಲ. ಈಗ ನಮ್ಮ ಸರ್ಕಾರ ಕೈಗೆತ್ತಿಕೊಂಡು ವಿಶೇಷ ಅಭಿಯಾನದ ಮೂಲಕ ದರಖಾಸ್ತು ಪೋಡಿ ದುರಸ್ತಿ ಮಾಡಲಾಗುತ್ತಿದೆ. ಇದಕ್ಕಾಗಿ ಕಂದಾಯ ಸಚಿವರಿಗೆ ಧನ್ಯವಾದಗಳು ಎಂದರು.
ಬಯಲು ಸೀಮೆ ಪ್ರದೇಶಗಳಲ್ಲಿ ಸಾಕಷ್ಟು ಜೀವಂತ ಕೆರೆಗಳಿದಾವೆ, ಈ ಕೆರೆಗಳಲ್ಲಿ ಮಣ್ಣು ಹೂಳೆತ್ತುವ ಕೆಲಸ ಆಗಬೇಕು. ಕೆರೆಗಳಲ್ಲಿ ಹೂಳೆತ್ತುವುದರಿಂದ ಬಾವಿ, ಕೊಳವೆ ಬಾವಿಗಳಲ್ಲಿ ನೀರು ಬಂದು ರೈತರ ಬದುಕು ಹಸನಾಗುತ್ತದೆ ಎಂದು ತಿಳಿಸಿದರು.
ರೈತರ ಜಮೀನುಗಳಿಗೆ, ಸ್ಮಶಾನಕ್ಕೆ ರಸ್ತೆ ಸಂಪರ್ಕ ಕಲ್ಪಿಸಿ; ರೈತರು ಕಚೇರಿಗೆ ಬರುವುದನ್ನು ತಪ್ಪಿಸಿ, ಸರ್ಕಾರ ರೈತರ ಮನೆ ಬಾಗಿಲಿಗೆ ತಲುಪಬೇಕು ಎಂಬುದು ನನ್ನ ಅಭಿಪ್ರಾಯ. ಜಿಲ್ಲಾಡಳಿತ ಬಹಳ ಉತ್ತಮ ಕೆಲಸ ಮಾಡುತ್ತಿದೆ. ಬಡವರಿಗೆ ಮನೆ, ನಿವೇಶನ ಕೊಡುವಂತಹ ಕೆಲಸ ಆಗಬೇಕು. ಸಾಕಷ್ಟು ರೈತರು ಜಮೀನುಗಳಿಗೆ ತೆರಳಲು ರಸ್ತೆ ಇಲ್ಲ, ಕನಿಷ್ಠ 10 ಗುಂಟೆ ಜಮೀನು ಇದ್ದರು ರಸ್ತೆ ಕಲ್ಪಿಸಬೇಕು. ಸ್ಮಶಾನ ಇಲ್ಲದ ಗ್ರಾಮಗಳಿಗೆ ಸ್ಮಶಾನ ಒದಗಿಸಬೇಕು. ಇವೆಲ್ಲವನ್ನೂ ಈಡೇರಿಸಿದಾಗ ಮಾತ್ರ ಪೋಡಿ ಮುಕ್ತ ಗ್ರಾಮಗಳು ಸಾಧ್ಯ. ಈ ಸಮಸ್ಯೆಗಳನ್ನು ಸಹ ಆದ್ಯತೆ ಆಗಿ ತೆಗೆದುಕೊಂಡು ಪೋಡಿ ಅಭಿಯಾನದಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಸೂಚಿಸಿದರು.
1236 ಪೋಡಿ ದುರಸ್ತಿ ಪೂರ್ಣ ; ಜಿಲ್ಲಾಧಿಕಾರಿ ಡಾ. ಎನ್ ಶಿವಶಂಕರ ಅವರು ಮಾತನಾಡಿ, ಪೋಡಿ ಮಾಡಿಸಿಕೊಳ್ಳದೇ ಹಲವು ರೈತರು ವ್ಯಾಪಾರ, ವ್ಯವಹಾರ, ಸೌಲಭ್ಯ ವಂಚಿತರಾಗುತ್ತಿದ್ದರು. ಸರ್ಕಾರವು ದರಖಾಸ್ತು ಪೋಡಿ ವಿಶೇಷ ಆಂದೋಲನ ಕೈಗೆತ್ತಿಕೊಂಡು ಹಲವು ವರ್ಷಗಳ ರೈತರ ಸಮಸ್ಯೆಯನ್ನು ಬಗೆಹರಿಸಲು ಮುಂದಾಗಿದೆ. ಹಿಂದೆ ಪೋಡಿ ಮಾಡಲಿಕ್ಕೆ ಹಲವಾರು ಸಮಸ್ಯೆ ಬರುತ್ತಿತ್ತು, ಈಗ ಅದನ್ನು ಸುಲಭ ರೀತಿಯಲ್ಲಿ ಪೋಡಿ ಮಾಡಿಸಿಕೊಳ್ಳಬಹುದಾಗಿದೆ. ಕಳೆದ ಒಂದುವರೆ ತಿಂಗಳಲ್ಲಿ ನಮ್ಮ ಜಿಲ್ಲೆಯಲ್ಲಿ 1236 ಪೋಡಿಗಳನ್ನು ಮಾಡಲಾಗಿದೆ, ಜಿಲ್ಲೆಯ 70 ಗ್ರಾಮಗಳ 90 ಸರ್ವೆ ನಂಬರ್ ಗಳಲ್ಲಿ ಸರ್ವೆ ನಡೆಸಿ ದೊಡ್ಡಬಳ್ಳಾಪುರ 304, ಹೊಸಕೋಟೆ 301, ನೆಲಮಂಗಲ 302, ದೇವನಹಳ್ಳಿ 329 ಪೋಡಿ ದುರಸ್ತಿ ಮಾಡಲಾಗಿದೆ. ಸಮರೋಪಾದಿಯಲ್ಲಿ ಕೆಲಸ ಕಾರ್ಯ ನಿರ್ವಹಿಸಿದ್ದ ಎಲ್ಲಾ ಅಧಿಕಾರಿಗಳಿಗೂ ಅಭಿನಂದನೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಕಿಯೋನಿಕ್ಸ್ ಅಧ್ಯಕ್ಷರು ಹಾಗೂ ಹೊಸಕೋಟೆ ಶಾಸಕರಾದ ಶರತ್ ಕುಮಾರ್ ಬಚ್ಚೇಗೌಡ, ವಿಧಾನ ಪರಿಷತ್ತಿನ ಸದಸ್ಯ ರವಿ, ನೆಲಮಂಗಲ ಶಾಸಕ ಶ್ರೀನಿವಾಸ, ದೊಡ್ಡಬಳ್ಳಾಪುರ ಶಾಸಕ ಧೀರಜ್ ಮುನಿರಾಜು, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ, ಭೂ ಮಾಪನ ಇಲಾಖೆಯ ಆಯುಕ್ತರಾದ ಮಂಜುನಾಥ್, ಕಂದಾಯ ಇಲಾಖೆ ಆಯುಕ್ತರಾದ ಪೆಮ್ಮಲ ಸುನೀಲ್ ಕುಮಾರ್, ಜಿ.ಪಂ ಸಿಇಒ ಡಾ.ಕೆ.ಎನ್ ಅನುರಾಧ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ: ಬೆಂಗಳೂರು ಅರಮನೆ ಜಾಗ ನಮ್ಮದೇ, ಸುಗ್ರೀವಾಜ್ಞೆ ವಿರುದ್ಧ ಕಾನೂನು ಹೋರಾಟ: ಪ್ರಮೋದಾದೇವಿ ಒಡೆಯರ್