ಮೈಸೂರು: ಐತಿಹಾಸಿಕ ಸುತ್ತೂರು ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಮಹಾ ದಾಸೋಹಕ್ಕೆ ಸುತ್ತೂರು ಶ್ರೀಗಳು ಶನಿವಾರ ಚಾಲನೆ ನೀಡಿದರು. ಬೃಹತ್ ಅಡುಗೆ ಮನೆಯಲ್ಲಿ ಅಡುಗೆ ಒಲೆಗಳಿಗೆ ಪೂಜೆ ಸಲ್ಲಿಸಿ, ದೊಡ್ಡ ದೊಡ್ಡ ಪಾತ್ರೆಗಳಿಗೆ ಅಡುಗೆ ಪದಾರ್ಥ ಹಾಕುವ ಮೂಲಕ ಚಾಲನೆ ನೀಡಲಾಯಿತು. ವಿಶೇಷವೆಂದ್ರೆ ದೊಡ್ಡ ದೊಡ್ಡ ಅಡುಗೆ ಒಲೆಗಳಿಗೆ ಹಚ್ಚುವ ಬೆಂಕಿ ಒಂದು ವಾರಗಳ ಕಾಲ ಆರದೇ ಇರುವುದು ತ್ರಿಕಾಲ ಮಹಾ ದಾಸೋಹದ ವಿಶೇಷ.
ಸುತ್ತೂರು ಜಾತ್ರೆ ಮಹಾ ದಾಸೋಹಕ್ಕೆ 1 ಸಾವಿರ ಕ್ವಿಂಟಾಲ್ ಅಕ್ಕಿ, 250 ಕ್ವಿಂಟಾಲ್ ಬೇಳೆ, 200 ಕ್ವಿಂಟಾಲ್ ಸಕ್ಕರೆ, 1,500 ಸಾವಿರ ಟಿನ್ ಅಡುಗೆ ಎಣ್ಣೆ, 10 ಸಾವಿರ ಕೆಜಿ ತುಪ್ಪ, ಸಾವಿರಾರು ಕ್ವಿಂಟಾಲ್ ತರಕಾರಿ ಸೇರಿದಂತೆ ಅಡುಗೆ ಸಾಮಗ್ರಿ ದಾಸ್ತಾನು ಮಾಡಿಕೊಳ್ಳಲಾಗಿದೆ. ಇದರಿಂದಾಗಿ ಪ್ರತಿನಿತ್ಯ ಬಗೆಬಗೆಯ ಸಿಹಿ ಸೇರಿದಂತೆ ಲಕ್ಷಾಂತರ ಮಂದಿಗೆ ತ್ರಿಕಾಲ ದಾಸೋಹ ವ್ಯವಸ್ಥೆಗೆ ಚಾಲನೆ ನೀಡಲಾಯಿತು.
ಸುತ್ತೂರು ಜಗದ್ಗುರು ಶ್ರೀ ಶಿವರಾತ್ರಿ ದೇಶಿ ಕೇಂದ್ರ ಮಹಾಸ್ವಾಮಿಗಳು, ಮಠದ ಕಾರ್ಯದರ್ಶಿಗಳಾದ ಮಂಜುನಾಥ ಸ್ವಾಮಿ, ಉದಯಕುಮಾರ್, ಶಿವಕುಮಾರ್, ಮಹಾ ದಾಸೋಹ ವ್ಯವಸ್ಥಾಪಕರಾದ ಸುಬ್ಬಪ್ಪ, ಸೇರಿದಂತೆ ಹಲವು ಮಠಾಧೀಶರು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.
ಇದನ್ನೂ ಓದಿ: ಖೋ ಖೋ ವಿಶ್ವಕಪ್ ಚಾಂಪಿಯನ್ ಮೈಸೂರಿನ ಚೈತ್ರಾಗೆ ಹುಟ್ಟೂರಲ್ಲಿ ಭವ್ಯ ಸ್ವಾಗತ
ದಕ್ಷಿಣ ಕರ್ನಾಟಕದ ಹೆಸರಾಂತ ಸುತ್ತೂರು ಜಾತ್ರೆ ಇಂದಿನಿಂದ ಜ.31ರವರೆಗೆ ನಡೆಯಲಿದೆ. ವೈವಿಧ್ಯತೆಗಳಿಂದ ಕೂಡಿರುವ ಸುತ್ತೂರು ಜಾತ್ರೆ ಗ್ರಾಮೀಣ ಸೊಗಡಿನ ಅದ್ಧೂರಿ ಹಾಗೂ ಸಂಭ್ರಮದ ಜಾತ್ರೆಯಾಗಿದೆ.
ಆರು ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸವದಲ್ಲಿ ಕೇವಲ ಧಾರ್ಮಿಕ ಅಚರಣೆ ಅಷ್ಟೇ ಅಲ್ಲದೇ, ಆರೋಗ್ಯ ಮೇಳ, ಕೃಷಿ ಮೇಳ, ಉತ್ಪಾದಕ ಮತ್ತು ಗ್ರಾಹಕ ಮೇಳ, ಕ್ರೀಡಾ ಮೇಳ, ಸಾಂಸ್ಕ್ಕತಿಕ ಮೇಳ, ಶೈಕ್ಷಣಿಕ ಮೇಳ, ಸಾಹಿತ್ಯ ಮತ್ತು ಪುಸ್ತಕ ಮೇಳ, ಸರ್ವಧರ್ಮ ಸಮ್ಮಿಲನ, ಸಾಮೂಹಿಕ ವಿವಾಹ, ವಿವಿಧ ವಸ್ತು ಪ್ರದರ್ಶನಗಳು, ದನಗಳ ಜಾತ್ರೆ, ಜಾನಪದ ಜಾತ್ರೆ, ಕುಸ್ತಿ ಪಂದ್ಯಾವಳಿ, ನಗೆ ಉತ್ಸವ, ನಾಟಕ, ನೃತ್ಯ, ವಚನಗಾಯನ, ಸುಗಮ ಸಂಗೀತದಂತಹ ಎಲ್ಲ ರೀತಿಯ ಕಾರ್ಯಕ್ರಮಗಳು ನಡೆಯುತ್ತವೆ.