ಶಿವಮೊಗ್ಗ: ಹಾಡಹಗಲೇ ಬೀದರ್ ಮತ್ತು ಮಂಗಳೂರಲ್ಲಿ ಬ್ಯಾಂಕ್ ದರೋಡೆ ಪ್ರಕರಣಗಳ ಬೆನ್ನಲ್ಲೇ ಶಿವಮೊಗ್ಗದಲ್ಲೂ ಎಟಿಎಂ ಕಳ್ಳತನಕ್ಕೆ ಖದೀಮರು ವಿಫಲ ಯತ್ನ ನಡೆಸಿರುವ ಘಟನೆ ಕಳೆದ ತಡರಾತ್ರಿ ನಡೆದಿದೆ. ಈ ಸಂಬಂಧ ಆರೋಪಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.
ನೆಹರು ರಸ್ತೆಯ ಕೆನರಾ ಬ್ಯಾಂಕ್ನ ಎಟಿಎಂ ಕಳ್ಳತನಕ್ಕೆ ಯತ್ನಿಸಿದ ಬಿಹಾರ ಮೂಲದ ವ್ಯಕ್ತಿಯನ್ನು ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಬಂಧಿಸುವಲ್ಲಿ ಶಿವಮೊಗ್ಗ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಕುರಿತು ಶಿವಮೊಗ್ಗ ಎಸ್ಪಿ ಮಿಥುನ್ ಕುಮಾರ್ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಬಂಧಿತನನ್ನು ಬಿಹಾರದ ಜಲೈ ಗ್ರಾಮದ ಮಹಮ್ಮದ್ ವಸೀಂ ಬಿನ್ ಹಸನ್ ಎಂದು ಗುರುತಿಸಲಾಗಿದೆ. ವಸೀಂ ಶಿವಮೊಗ್ಗದಲ್ಲಿ ನಡೆಯುತ್ತಿರುವ ಕಾಮಗಾರಿಯೊಂದರಲ್ಲಿ ಕೆಲಸ ಮಾಡುವವ ಎಂದು ಹೇಳಲಾಗುತ್ತಿದೆ.
ಭಾನುವಾರ ರಾತ್ರಿ ನೆಹರು ರಸ್ತೆಯ ಕೆನರಾ ಬ್ಯಾಂಕ್ ಮುಂಭಾಗದ ಎಟಿಎಂಗೆ ವಸೀಂ ಬಂದಿದ್ದ. ಮೊದಲು ಎಟಿಎಂ ಒಳಗೆ ಬಂದವನೇ ಒಂದು ಎಟಿಎಂ ಯಂತ್ರವನ್ನು ಒಡೆಯಲು ನೋಡಿದ್ದಾನೆ. ನಂತರ ಪಕ್ಕದಲ್ಲಿದ್ದ ಇನ್ನೊಂದು ಎಟಿಎಂ ಅನ್ನು ಒಡೆದಿದ್ದಾನೆ. ಆ ಯಂತ್ರ ಓಪನ್ ಆಗುತ್ತಲೇ ಸೈರನ್ ಕೂಗಲು ಶುರುವಾಗಿದೆ. ತಕ್ಷಣ ವಸೀಂ ಅಲ್ಲಿಂದ ಕಾಲ್ಕಿತ್ತಿದ್ದ. ಎಟಿಎಂನಲ್ಲಿ ಯಾವುದೇ ಹಣ ಕಳ್ಳತನ ಮಾಡಿಲ್ಲ.
ಸೈರನ್ ಬರುತ್ತಿದ್ದಂತೆ ಸ್ಥಳಕ್ಕೆ 112 ಪೊಲೀಸರು ಸೇರಿದಂತೆ ಕೋಟೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದರು. ಈ ಬಗ್ಗೆ ಮಾಹಿತಿ ಪಡೆದ ಎಸ್ಪಿ ಮಿಥುನ್ ಕುಮಾರ್, ಕೋಟೆ ಪೊಲೀಸ್ ಠಾಣೆ ಪಿಐ ಹರೀಶ್ ನೇತೃತ್ವದಲ್ಲಿ ತಂಡ ರಚನೆ ಮಾಡಿದ್ದರು.
ಸಿಸಿಟಿವಿ ವಿಡಿಯೋ ಆಧಾರದ ಮೇಲೆ ಆರೋಪಿಯನ್ನು ಪೊಲೀಸರು ಬಂಧನ ಮಾಡಿದ್ದಾರೆ. ಎಟಿಎಂ ಕಳ್ಳತನ ಯತ್ನದ ಮಾಹಿತಿ ಸಿಕ್ಕ ಕೂಡಲೇ ಬ್ಯಾಂಕ್ನ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲಿಸಿದ್ದರು. ಆರೋಪಿಯನ್ನು ಕೆಲವೇ ಗಂಟೆಯಲ್ಲಿ ಬಂಧಿಸಿದ ಪೊಲೀಸ್ ತಂಡಕ್ಕೆ ಎಸ್ಪಿ ಮಿಥುನ್ ಕುಮಾರ್ ಅಭಿನಂದನೆ ಸಲ್ಲಿಸಿದ್ದಾರೆ. ಕೋಟೆ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
ಇತ್ತೀಚೆಗೆ ಮಂಗಳೂರಲ್ಲಿ ಹಾಡಹಗಲೇ ಬ್ಯಾಂಕ್ ದರೋಡೆ: ಮಂಗಳೂರಿನ ಉಳ್ಳಾಲ ಪೊಲೀಸ್ ಠಾಣೆ ವ್ಯಾಪ್ತಿಯ ಕೆ. ಸಿ ರೋಡ್ನಲ್ಲಿರುವ ಕೃಷಿ ಸಹಕಾರಿ ಬ್ಯಾಂಕ್ಗೆ ಇದೇ ತಿಂಗಳ 17ರಂದು ಬೆಳಗ್ಗೆ 11.30ರ ಸುಮಾರಿಗೆ ಮುಸುಕುಧಾರಿ ತಂಡವೊಂದು ಪಿಸ್ತೂಲ್ ಹಾಗೂ ಚಾಕುಗಳೊಂದಿಗೆ ನುಗ್ಗಿ, ಸುಮಾರು 4 ಕೋಟಿ ರೂ ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ದೋಚಿ ಪರಾರಿಯಾಗಿದ್ದರು. ಈ ಪ್ರಕರಣ ಸಂಬಂಧ ನೆಲ್ಲೈ ಮೂಲದ ಮೂವರನ್ನು ಬಂಧಿಸಿ, ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.
ಬೀದರ್ನಲ್ಲಿ ಗುಂಡಿನ ದಾಳಿ: ಬೀದರ್ನ ಶಿವಾಜಿ ಸರ್ಕಲ್ ಬಳಿಯ ಹೃದಯ ಭಾಗದಲ್ಲಿರುವ ಎಸ್ಬಿಐ ಬ್ಯಾಂಕ್ ಮೇನ್ ಬ್ರ್ಯಾಂಚ್ ಮುಂದೆಯೇ ಎಟಿಎಂಗೆ ಹಾಕಲು ಸಾಗಿಸುತ್ತಿದ್ದ ಹಣವನ್ನು ಸಿನಿಮಾ ಶೈಲಿಯಲ್ಲಿ ಲೂಟಿ ಮಾಡಿ ದುಷ್ಕರ್ಮಿಗಳು ಪರಾರಿಯಾಗಿದ್ದರು. ಈ ವೇಳೆ ಎಸ್ಬಿಐ ಸೆಕ್ಯೂರಿಟಿ ಏಜೆನ್ಸಿ ಸಿಬ್ಬಂದಿ ಮೇಲೆ ಖಾರದ ಪುಡಿ ಎರಚಿ, ಗುಂಡು ಹಾರಿಸಿದ್ದರಿಂದ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದರೆ, ಇನ್ನೊಬ್ಬರು ಗಂಭೀರವಾಗಿ ಗಾಯಗೊಂಡಿದ್ದರು.
ಇದನ್ನೂ ಓದಿ: ಬೀದರ್ ದರೋಡೆ ಪ್ರಕರಣ: ಬೀದರ್, ಅಫ್ಜಲ್‌ಗಂಜ್‌ನಲ್ಲಿ ಬಳಸಲಾದ ಬೈಕ್ ಪತ್ತೆ!; ದರೋಡೆಕೋರರು ಬಿಹಾರಕ್ಕೆ ಪರಾರಿ ಶಂಕೆ
ಇದನ್ನೂ ಓದಿ: ಮಂಗಳೂರು ಬ್ಯಾಂಕ್ ದರೋಡೆ ಪ್ರಕರಣ: ತಮಿಳುನಾಡಿನ ನೆಲ್ಲೈಯಲ್ಲಿ 15 ಕೆಜಿ ಚಿನ್ನಾಭರಣ ವಶ