ತುಮಕೂರು: ತುಮಕೂರು ಬಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಗಣರಾಜ್ಯೋತ್ಸವ ಆಚರಣೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಗೃಹ ಸಚಿವರು, "ತುಮಕೂರಲ್ಲಿ ವಿಜೃಂಭಣೆಯಿಂದ ಗಣರಾಜ್ಯೋತ್ಸವ ಆಚರಣೆ ಮಾಡಿದ್ದೇವೆ. ಜಿಲ್ಲಾಡಳಿತ ಸೇರಿದಂತೆ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ತುಮಕೂರು ರಾಜ್ಯದಲ್ಲಿ ಪ್ರತಿಷ್ಠಿತವಾದ ಜಿಲ್ಲೆ. ವಿಸ್ತೀರ್ಣದಲ್ಲಿ ತುಮಕೂರು ಮೂರನೇ ಸ್ಥಾನ ಪಡೆದುಕೊಂಡಿದೆ. 11 ವಿಧಾನಸಭಾ ಕ್ಷೇತ್ರಗಳು ತುಮಕೂರಿಗೆ ಬರುತ್ತದೆ. ಬೆಂಗಳೂರಿಗೆ ಹತ್ತಿರವಿರುವ ವೇಗವಾಗಿ ಬೆಳೆಯುವ ಪಟ್ಟಣ ತುಮಕೂರು" ಎಂದರು.
"ಮುಂದಿನ 10 ವರ್ಷದಲ್ಲಿ ಬೆಂಗಳೂರು ತುಮಕೂರಿಗೆ ಯಾವುದೇ ವ್ಯತ್ಯಾಸವಿರುದಿಲ್ಲ. ತುಮಕೂರು ಸಹ ಬೆಂಗಳೂರಿಗೆ ಹೊಂದುಕೊಂಡಂತೆ ಬೆಳವಣೆಗೆ ಆಗುತ್ತದೆ. ಆ ನಿಟ್ಟಿನಲ್ಲಿ ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ. ಈಗಾಗಲೇ ನಾನು ಮನವಿ ಮಾಡಿದ್ದೇನೆ. ವಿಮಾನ ನಿಲ್ದಾಣವನ್ನು ತುಮಕೂರಿನ ಆಸುಪಾಸಿನಲ್ಲಿ ಮಂಜೂರು ಮಾಡಲು ಕೇಳಿದ್ದೇನೆ" ಎಂದು ತಿಳಿಸಿದರು.
"ವಿಮಾನ ನಿಲ್ದಾಣಕ್ಕಾಗಿ ಎರಡು ಭಾಗದಲ್ಲಿ ಜಾಗ ಗುರುತಿಸಿದ್ದಾರೆ. ವಸಂತನರಸಾಪುರ ಹೊಂದಿಕೊಂಡಂತೆ ಸುಮಾರು 3 ಸಾವಿರ ಎಕರೆ ಭೂಮಿ ಮತ್ತು ಸೀಬಿ ದೇವಸ್ಥಾನ ಮಧುಗಿರಿ ಹಾಗೂ ಕೊರಟಗೆರೆವರೆಗೆ 4 ಸಾವಿರ ಎಕರೆ ಭೂಮಿ ನಕ್ಷೆ ಮಾಡಲಾಗಿದೆ. ಈ ಪ್ರಸ್ತಾವನೆ ಸರ್ಕಾರಕ್ಕೆ ಹೋಗಿದೆ. ನಾವು ಪಕ್ಷಾತೀತವಾಗಿ ಒತ್ತಾಯ ಮಾಡುತ್ತೇವೆ" ಎಂದು ಹೇಳಿದರು.
ಅಮಾನಿಕೆರೆಯಲ್ಲಿ ಗ್ಲಾಸ್ ಬ್ರಿಡ್ಜ್ ಮಾಡಿ ಹೈಲೆಂಡ್ಗಳಿಗೆ ಕನೆಕ್ಟ್ ಮಾಡಲಾಗುವುದು. ಪಕ್ಷಿಗಳ ಪಾರ್ಕ್ ಮಾಡಲು ನಿರ್ಧಾರ ಮಾಡಲಾಗಿದೆ. ಟೌನ್ಹಾಲ್ ಸರ್ಕಲ್ನಲ್ಲಿ ಹೆಚ್ಎಎಲ್ನ ಮಾಡೆಲ್ ಹೆಲಿಕಾಪ್ಟರ್ ಇಡಲಾಗುವುದು" ಎಂದು ಸಚಿವರು ತಿಳಿಸಿದರು.
ಅಂಬೇಡ್ಕರ್ ಪುತ್ಥಳಿ ವಿಚಾರ: "ಈಗಾಗಲೇ ಅಂಬೇಡ್ಕರ್ ಅವರ ಪುತ್ಥಳಿ ಇಡಲು ತೀರ್ಮಾನಿಸಲಾಗಿದೆ. ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ಕಾರ ಅನುಮತಿ ಕೊಟ್ಟ ಬಳಿಕ ಸ್ಥಾಪಿಸಲಾಗುತ್ತದೆ" ಎಂದರು.
ಸರ್ಕಾರಿ ಮೆಡಿಕಲ್ ಕಾಲೇಜು ವಿಚಾರ: "ಯಾವ ಜಿಲ್ಲೆಗಳಲ್ಲಿ ಸರ್ಕಾರಿ ಕಾಲೇಜುಗಳಿಲ್ಲ ಅಲ್ಲಿ ಕೊಡಲಾಗುವುದು. ಈಗಾಗಲೇ ಈ ವಿಚಾರವಾಗಿ ಸಿಎಂ ಜೊತೆ ಚರ್ಚೆ ಮಾಡಿದ್ದೇವೆ" ಎಂದು ಮಾಹಿತಿ ನೀಡಿದರು.
"ಹಂತ ಹಂತವಾಗಿ ಕೆಲಸ ನೀಡಲು ತೀರ್ಮಾನ ಮಾಡಲಾಗಿದೆ. ಖಾಸಗಿ ಬಸ್ ನಿಲ್ದಾಣವನ್ನು 6 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತದೆ. ಗುಬ್ಬಿ ವೀರಣ್ಣ 6 ಕೋಟಿಯಲ್ಲಿ ಮರು ನಿರ್ಮಾಣವಾಗುತ್ತದೆ" ಎಂಬ ಮಾಹಿತಿ ಸಚಿವರು ನೀಡಿದರು.
ಮೈಕ್ರೋ ಫೈನಾನ್ಸ್ ಪ್ರಕರಣಕ್ಕೆ ಸಂಬಂಧಿಸಿ, "ಸಿಎಂ ನಾವು ಚರ್ಚೆ ಮಾಡಿದ್ದೇವೆ. ಮುಖ್ಯಮಂತ್ರಿಗಳು ಒಂದು ತೀರ್ಮಾನಕ್ಕೆ ಬಂದಿದ್ದಾರೆ. ಇರುವ ಕಾನೂನನ್ನು ಭದ್ರ ಮಾಡುವಂತದ್ದು. ಮತ್ತೊಂದು ರಿಕವರಿ ಮಾಡುವವರು ಸಂಜೆ ಮೇಲೆ ದಾಳಿ ಮಾಡುವುದು ಅಂತೆಲ್ಲಾ ಕೆಲ ವಿಚಾರ ಇದೆ. ಅದನ್ನು ಕಟ್ಟುನಿಟ್ಟಾಗಿ ಮಾಡಬೇಕು ಅಂತಾ ಇದೆ. ಪೊಲೀಸರಿಗೆ ಎಕ್ಟ್ರಾ ಪವರ್ ಕೊಡಲು ರೆಡಿ ಮಾಡಿದ್ದೇವೆ. ಕೇಂದ್ರ ಸರ್ಕಾರ ಈ ಕಾನೂನನ್ನು ತರಬೇಕು ಅಂತಾ ಒತ್ತಾಯ ಮಾಡುತ್ತೇವೆ. ಮುಖ್ಯಮಂತ್ರಿಗಳು ಸಹ ಪ್ರಧಾನಿಗಳಿಗೆ ಪತ್ರ ಬರೆಯುತ್ತೇನೆ" ಅಂದಿದ್ದಾರೆ.
ಇದನ್ನೂ ಓದಿ: ದಲಿತರ ಮನೆಗಳಲ್ಲಿ ಪಾದಪೂಜೆ, ಸಹ ಭೋಜನ : ಶಾಸಕ ಜಿ ಜನಾರ್ದನರೆಡ್ಡಿ