ಮೈಸೂರು: ದೇಶದಾದ್ಯಂತ 76ನೇ ವರ್ಷದ ಗಣರಾಜ್ಯೋತ್ಸವವನ್ನು ಸಂಭ್ರಮ ಸಡಗರದಿಂದ ಆಚರಣೆ ಮಾಡಲಾಗಿದೆ. ಆದರೆ ಮೈಸೂರು ಜಿಲ್ಲೆಯ ಸರಗೂರು ತಾಲೂಕಿನ ಹೆಗ್ಗನೂರು ಗ್ರಾಮ ಪಂಚಾಯಿತಿಯಲ್ಲಿ ಗಣತಂತ್ರ ದಿನಾಚರಣೆಯನ್ನೇ ಕೈ ಬಿಟ್ಟಿದ್ದಾರೆ. ಸಂವಿಧಾನ ಜಾರಿಗೆ ಬಂದ ದಿನವನ್ನು ಆಚರಿಸದೆ ಅಧಿಕಾರಿಗಳು ಸಂವಿಧಾನಕ್ಕೆ ಅಪಮಾನ ಮಾಡಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಿಷ್ಟಾಚಾರದಂತೆ ಸರ್ಕಾರಿ ಕಚೇರಿಗಳಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿ ಗಣರಾಜ್ಯೋತ್ಸವವನ್ನು ಆಚರಣೆ ಮಾಡಬೇಕು. ಆದರೆ ಸರಗೂರು ತಾಲೂಕಿನ ಹೆಗ್ಗನೂರು ಗ್ರಾಮ ಪಂಚಾಯಿತಿಯಲ್ಲಿ ತ್ರಿವರ್ಣ ಧ್ವಜವನ್ನು ಸಿದ್ಧಪಡಿಸಿ ಗಣರಾಜ್ಯೋತ್ಸವ ಆಚರಿಸಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಮಧ್ಯಾಹ್ನ 2 ಗಂಟೆ ದಾಟಿದ್ರೂ ಧ್ವಜಾರೋಹಣ ಆಗಿರಲಿಲ್ಲ. ಇದರಿಂದಾಗಿ ಸಿಟ್ಟಿಗೆದ್ದ ಗ್ರಾಮಸ್ಥರು, ಮಕ್ಕಳನ್ನು ಧ್ವಜಸ್ಥಂಭದ ಬಳಿ ನಿಲ್ಲಿಸಿ ಪಿಡಿಒ ವಿರುದ್ಧ ಧಿಕ್ಕಾರ ಕೂಗಿದ್ದಾರೆ. ತ್ರಿವರ್ಣ ಧ್ವಜ ಹಾರಿಸದೇ ಸಂವಿಧಾನಕ್ಕೆ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಅವಮಾನ ಮಾಡಲಾಗಿದೆ. ಈ ಸಂಬಂಧ ಕಠಿಣ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
ಗ್ರಾಮ ಪಂಚಾಯಿತಿ ಪಿಡಿಒಗೆ ಸ್ಥಳೀಯರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಸ್ಥಳೀಯರು ಪಿಡಿಒಗೆ ಪ್ರಶ್ನಿಸಿದಾಗ "ಎರಡು ಗ್ರಾಮ ಪಂಚಾಯಿತಿಗೆ ನಾನೊಬ್ಬನೇ ಉಸ್ತುವಾರಿ ಆದ್ದರಿಂದ ಬೇರೆ ಗ್ರಾಮ ಪಂಚಾಯ್ತಿಯಲ್ಲಿ ಆಚರಿಸಿ ಬಂದಿರುವುದಾಗಿ" ತಿಳಿಸಿದ್ದಾರೆ.
ಇದನ್ನೂ ಓದಿ: ಗಣರಾಜ್ಯೋತ್ಸವದಂದು ಎಂಎಸ್‌ಪಿಗಾಗಿ ಮೈಸೂರಿನಲ್ಲಿ ರೈತರಿಂದ ಟ್ರ್ಯಾಕ್ಟರ್ ರ‍್ಯಾಲಿ