Union Budget 2025 Expectations: ಇನ್ನು ಕೆಲವು ದಿನಗಳಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಬಜೆಟ್ ಮಂಡಿಸಲಿದ್ದಾರೆ. ಈ ಬಾರಿಯ ಬಜೆಟ್‌ನಲ್ಲಿ ಆಟೋಮೊಬೈಲ್ ವಲಯವು ಅನೇಕ ದೊಡ್ಡ ಸುಧಾರಣೆಗಳನ್ನು ನಿರೀಕ್ಷಿಸುತ್ತಿದೆ. ಹೈಬ್ರಿಡ್ - ಎಲೆಕ್ಟ್ರಿಕ್ ವಾಹನಗಳ ಮೇಲಿನ ಜಿಎಸ್‌ಟಿ ದರಗಳಲ್ಲಿನ ಕಡಿತದಿಂದ ಹಿಡಿದು ವಾಹನ ಸ್ಕ್ರ್ಯಾಪಿಂಗ್‌ಗೆ ಪ್ರೋತ್ಸಾಹದವರೆಗೆ ಹಲವು ವಿಷಯಗಳಲ್ಲಿ ಬದಲಾವಣೆಗಳು ಕಾಣಬಹುದಾಗಿದೆ. ಈ ಬಾರಿ ಬಜೆಟ್‌ನಲ್ಲಿ ಸರ್ಕಾರವು ಆಟೋಮೊಬೈಲ್ ವಲಯಕ್ಕೆ ಯಾವ ಯೋಜನೆಗಳನ್ನು ಘೋಷಿಸಬಹುದು ಎಂದು ತಿಳಿಯೋಣ ಬನ್ನಿ.
ಪಿಎಲ್ಐ ಯೋಜನೆ ವಿಸ್ತರಣೆ: ಫೆಬ್ರವರಿ 1ರಂದು ಮಂಡಿಸಲಾಗುವ ಬಜೆಟ್‌ನಲ್ಲಿ ಪ್ರೊಡಕ್ಷನ್ - ಲಿಂಕ್ಡ್ ಇನ್ಸೆಂಟಿವ್ ಅಂದರೆ ಪಿಎಲ್ಐ ಯೋಜನೆಯನ್ನು ವಿಸ್ತರಿಸುವ ಸಾಧ್ಯತೆಯಿದೆ. ಇದರಲ್ಲಿ ನಿರ್ದಿಷ್ಟವಾಗಿ ವಿದ್ಯುತ್ ವಾಹನ (ಇವಿ) ಯುನಿಟ್ಗಳು ಮತ್ತು ಬ್ಯಾಟರಿಗಳ ತಯಾರಿಕೆಯ ಯೋಜನೆಯ ವಿಸ್ತರಣೆಯೂ ಸೇರಿದೆ. ಇದು ಭಾರತವನ್ನು ಜಾಗತಿಕ ಇವಿ ಉತ್ಪಾದನಾ ಕೇಂದ್ರವನ್ನಾಗಿ ಮಾಡಲು ಮತ್ತು ಹಸಿರು ಚಲನಶೀಲತೆ ಪರಿಹಾರಗಳನ್ನು ವೇಗಗೊಳಿಸಲು ಸಹಾಯ ಮಾಡುತ್ತದೆ.
ಈ ವಾಹನಗಳ ಮೇಲಿನ ಜಿಎಸ್‌ಟಿ ದರ ಕಡಿತ: ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ವಾಹನಗಳ ಮೇಲಿನ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ದರವನ್ನು ಶೇ 28 ರಿಂದ ಶೇ 18ಕ್ಕೆ ಇಳಿಸಬೇಕು ಎಂದು ಆಟೋಮೊಬೈಲ್ ಉದ್ಯಮವು ಒತ್ತಾಯಿಸುತ್ತಿದೆ. ಈ ಕ್ರಮವು ಪರಿಸರ ಸ್ನೇಹಿ ವಾಹನಗಳ ಅಳವಡಿಕೆ ಉತ್ತೇಜಿಸುತ್ತದೆ ಮತ್ತು ಇದು ಸರ್ಕಾರದ ಹಸಿರು ಮತ್ತು ಸುಸ್ಥಿರ ಭವಿಷ್ಯದ ದೃಷ್ಟಿಕೋನಕ್ಕೆ ಅನುಗುಣವಾಗಿದೆ.
ವಾಹನ ಸ್ಕ್ರ್ಯಾಪಿಂಗ್‌ಗೆ ಪ್ರೋತ್ಸಾಹ ಧನ: ಹಳೆಯ ವಾಹನಗಳನ್ನು ಸ್ಕ್ರ್ಯಾಪ್ ಮಾಡುವುದನ್ನು ಉತ್ತೇಜಿಸಲು ಬಜೆಟ್‌ನಲ್ಲಿ ಹೊಸ ಯೋಜನೆಗಳು ಮತ್ತು ಸ್ಪಷ್ಟ ನೀತಿಗಳನ್ನು ಘೋಷಿಸಬಹುದು. ಇದು ಹೊಸ ವಾಹನಗಳ ಬೇಡಿಕೆಯನ್ನು ಹೆಚ್ಚಿಸುವುದಲ್ಲದೇ ಪರಿಸರ ಮಾಲಿನ್ಯವನ್ನು ಕಡಿಮೆ ಮಾಡುತ್ತದೆ.
ಹೈಡ್ರೋಜನ್ ಇಂಧನ ಸಂಶೋಧನೆಗೆ ಪ್ರೋತ್ಸಾಹ ಧನ: ಹೈಡ್ರೋಜನ್ ಇಂಧನ ಮತ್ತು ಉನ್ನತ ಚಲನಶೀಲತೆಯ ಸಂಶೋಧನೆಗೆ ವಿಶೇಷ ಪ್ರೋತ್ಸಾಹ ನೀಡುವ ನಿರೀಕ್ಷೆಯಿದೆ. ಇದರೊಂದಿಗೆ ದೇಶಾದ್ಯಂತ ಬಲವಾದ ಚಾರ್ಜಿಂಗ್ ಮೂಲ ಸೌಕರ್ಯವನ್ನು ಅಭಿವೃದ್ಧಿಪಡಿಸಲು ನೀತಿಗಳನ್ನು ತರಬಹುದು. ಇದರಿಂದಾಗಿ ವಿದ್ಯುತ್ ಚಾಲಿತ ವಾಹನಗಳನ್ನು ಅಳವಡಿಸಿಕೊಳ್ಳುವ ಪ್ರಕ್ರಿಯೆಯನ್ನು ಮತ್ತಷ್ಟು ವೇಗಗೊಳಿಸಬಹುದು. ಈಗ ಕೇಂದ್ರ ಸರ್ಕಾರ ಈ ಬಾರಿ ಬಜೆಟ್‌ನಲ್ಲಿ ಆಟೋ ಕ್ಷೇತ್ರದ ನಿರೀಕ್ಷೆಗಳನ್ನು ಪೂರೈಸುತ್ತವೆಯೇ ಅಥವಾ ಇಲ್ಲವೇ ಎಂಬುದನ್ನು ಕಾದು ನೋಡಬೇಕಾಗಿದೆ.
ಓದಿ: ಟೆಲಿಕಾಂ ಕಂಪನಿಗಳಿಗೆ ಚಾಟಿ ಬೀಸಿದ ಟ್ರಾಯ್: ರಿಚಾರ್ಜ್ ಪ್ಲಾನ್ಗಳ ಬೆಲೆಯಲ್ಲಿ ಭಾರಿ ಬದಲಾವಣೆ, 210 ರೂ. ಕಡಿತ!