ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ(ಮುಡಾ) ಕಾನೂನು ಬಾಹಿರವಾಗಿ ಬದಲಿ ನಿವೇಶನ ಪಡೆದ ಆರೋಪದಲ್ಲಿ ಮುಖ್ಯಮಂತ್ರಿಗಳು ಹಾಗೂ ಮತ್ತವರ ಕುಟುಂಬಸ್ಥರ ವಿರುದ್ಧದ ಪ್ರಕರಣವನ್ನು ಕೇಂದ್ರ ತನಿಖಾ ದಳ(ಸಿಬಿಐ)ಕ್ಕೆ ವಹಿಸಬೇಕು ಎಂದು ಕೋರಿದ್ದ ಅರ್ಜಿಗೆ ಸಿದ್ದರಾಮಯ್ಯ, ಮತ್ತವರ ಪತ್ನಿ ಮತ್ತು ಬಾವಮೈದುನ ಅವರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ.
ಹಗರಣವನ್ನು ಸಿಬಿಐಗೆ ವಹಿಸಬೇಕು ಎಂದು ಕೋರಿ ಪ್ರಕರಣದ ದೂರುದಾರ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ವಿಚಾರಣೆ ನಡೆಸಿತು. ಪ್ರಕರಣದಲ್ಲಿ ಪ್ರತಿವಾದಿಗಳಾಗಿರುವ ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ ಮತ್ತು ಬಾವಮೈದುನ ಹಾಗೂ ಜಮೀನಿನ ಮೂಲ ಮಾಲೀಕ ದೇವರಾಜು ಪರ ವಕೀಲರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ವಿಚಾರಣೆ ವೇಳೆ ಜಮೀನು ಮೂಲ ಮಾಲೀಕರಾದ ದೇವರಾಜು ಪರ ವಾದ ಮಂಡಿಸಿದ ಸುಪ್ರೀಂಕೋರ್ಟ್‌ನ ಹಿರಿಯ ವಕೀಲ ದುಶ್ಯಂತ್ ದವೆ, ನಮ್ಮ ಕಕ್ಷಿದಾರರಿಗೂ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ಅರ್ಜಿದಾರರ ವಾದ ಈ ಪ್ರಕರಣಕ್ಕೆ ಅನ್ವಯವಾಗುವುದಿಲ್ಲ. ಪ್ರಕರಣವನ್ನು ಸಿಬಿಐಗೆ ವಹಿಸುವಂತಹ ಯಾವುದೇ ಆರೋಪಗಳು ಇಲ್ಲ. ನ್ಯಾಯಪೀಠಕ್ಕೆ ಅಧಿಕಾರವಿದ್ದು, ಸಿಬಿಐ ತನಿಖೆಗೆ ನೀಡಬೇಕು ಎಂದು ಕೋರುತ್ತಿದ್ದಾರೆ. ಇದೊಂದು ಕಾನೂನು ಪ್ರಕ್ರಿಯೆ ದುರ್ಬಳಕೆಯಾಗಿದೆ ಎಂದು ತಿಳಿಸಿದರು.
ಆರೋಪಿಯೊಂದಿಗೆ ನಮಗೆ ಯಾವುದೇ ಸಂಬಂಧವಿಲ್ಲ: ಹತ್ತು ವರ್ಷಗಳ ಹಿಂದಿನ ಪ್ರಕರಣವನ್ನು 2024ರಲ್ಲಿ ಅಂದರೆ 15 ವರ್ಷಗಳ ಬಳಿಕ ನ್ಯಾಯಾಲಯದ ಮುಂದೆ ಬಂದಿದ್ದಾರೆ. ಪ್ರಕರಣದ ಮೊದಲ(ಸಿದ್ದರಾಮಯ್ಯ) ಆರೋಪಿಯೊಂದಿಗೆ ನಮಗೆ ಯಾವುದೇ ಸಂಬಂಧವಿಲ್ಲ. ಅರ್ಜಿದಾರರು ಲೋಕಾಯುಕ್ತ ತನಿಖೆ ಕೋರಿದ್ದರು. ಇದೀಗ ಇದೊಂದು ದೊಡ್ಡ ಭ್ರಷ್ಟಾಚಾರ ಪ್ರಕರಣವಾಗಿದ್ದು, ಸಿಬಿಐಗೆ ವರ್ಗಾವಣೆ ಮಾಡಬೇಕು ಎಂದು ಕೋರಿದ್ದಾರೆ. ಅರ್ಜಿದಾರರ ನಡುವಳಿಕೆ ಕುರಿತಂತೆ ನಮಗೆ ಸಂಶಯ ಇದೆ. ಅರ್ಜಿದಾರರು ಹಾಲಿ ಮುಖ್ಯಮಂತ್ರಿಗಳನ್ನು ಮುಜುಗರಕ್ಕೀಡು ಮಾಡಲಿದ್ದಾರೆ. ಹೀಗಾಗಿ ಅವರ ಮನವಿಯನ್ನು ಅಂಗೀಕರಿಸಬಾರದು ಎಂದು ಕೋರಿದರು.
ಶಿಕ್ಷೆಗೆ ಗುರಿಪಡಿಸಬೇಕು ಎಂಬುದಾಗಿ ಪಣ ತೊಟ್ಟಂತೆ ಕಾಣುತ್ತಿದೆ: ಪ್ರಕರಣ ಸಂಬಂಧ ವಿಚಾರಣಾ ನ್ಯಾಯಾಲಯದ ಆದೇಶದಂತೆ ಲೋಕಾಯುಕ್ತ ಪೊಲೀಸರು ಎಫ್‌ಐಆರ್ ದಾಖಲಿಸಿ ತನಿಖೆ ಪ್ರಾರಂಭಿಸಿದ್ದಾರೆ. ಅದೇ ದಿನ ಪ್ರಕರಣ ಸಿಬಿಐ ತನಿಖೆಗೆ ವಹಿಸಬೇಕು ಎಂದು ಕೋರಿದ್ದು, ಈ ಅಂಶ ಹೈಕೋರ್ಟ್‌ನ ವೆಬ್ಸೈಟ್ನಲ್ಲಿ ದೃಢಪಡಿಸಿದೆ. ಈ ಪ್ರಕರಣದಲ್ಲಿ ಲೋಕಾಯುಕ್ತ ತನಿಖೆ ಮಾಡಬಾರದು ಎಂದು ಅರ್ಜಿದಾರರ ವಾದವಾಗಿದೆ. ಈ ಪ್ರಕ್ರಿಯೆ ಏನಾದರೂ ಮಾಡಿ ಪ್ರಕರಣದಲ್ಲಿನ ಪ್ರತಿವಾದಿಗಳನ್ನು ಶಿಕ್ಷೆಗೆ ಗುರಿಪಡಿಸಬೇಕು ಎಂಬುದಾಗಿ ಪಣ ತೊಟ್ಟಂತೆ ಕಾಣುತ್ತಿದೆ. ಇದು ದೌರ್ಜನ್ಯದ ನಡೆಯಾಗಿದೆ. ಪ್ರಕರಣದಲ್ಲಿ ನಮ್ಮ ಕಕ್ಷಿದಾರರು ನಿರಪರಾಧಿಯಾಗಿದ್ದಾರೆ. ಅವರ ವಿರುದ್ಧ ತನಿಖೆ ನಡೆಸುತ್ತಿರುವುದು ಸಂವಿಧಾನ 21ರ ಪರಿಚ್ಚೇದದ ಉಲ್ಲಂಘನೆಯಾಗಿದೆ. ಪ್ರಕರಣವನ್ನು ಸಿಬಿಐಗೆ ವಹಿಸಿದರೆ ಮತ್ತಷ್ಟು ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಪೀಠಕ್ಕೆ ವಿವರಿಸಿದರು.
ಸರ್ಕಾರದ ಪರ ವಾದ ಮಂಡಿಸಿ ಕಪಿಲ್ ಸಿಬಲ್: ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ ಸುಪ್ರೀಂಕೋರ್ಟ್‌ನ ಹಿರಿಯ ವಕೀಲ ಕಪಿಲ್ ಸಿಬಲ್, ಅರ್ಜಿದಾರರು ಪ್ರಕರಣದಲ್ಲಿ ಮುಖ್ಯಮಂತ್ರಿ ಆರೋಪಿಯಾಗಿದ್ದಾರೆ. ಆದ್ದರಿಂದ ಸಿಬಿಐ ತನಿಖೆಗೆ ವಹಿಸಬೇಕು ಎಂದು ಕೋರುತ್ತಿದ್ದರೆ. ಲೋಕಾಯುಕ್ತ ಸಂಸ್ಥೆ ಮುಖ್ಯಮಂತ್ರಿಗಳನ್ನು ವಿಚಾರಣೆ ನಡೆಸಬಹುದಾಗಿದೆ. ಅಲ್ಲದೇ, ಶಿಕ್ಷೆಯನ್ನೂ ವಿಧಿಸಿದೆ. ಆದರೆ, ಲೋಕಾಯುಕ್ತ ಕಾಯಿದೆಯಲ್ಲಿ ಮುಖ್ಯಮಂತ್ರಿಗಳ ವಿರುದ್ಧ ತನಿಖೆ ಮಾಡುವುದಕ್ಕೆ ಅವಕಾಶವಿದ್ದು, ಈ ಕಾಯಿದೆಯನ್ನೇ ಅಸಾಂವಿಧಾನಿಕ ಎಂಬುದಾಗಿ ಘೋಷಣೆ ಮಾಡಬೇಕು ಎಂದು ಪೀಠಕ್ಕೆ ಮನವಿ ಮಾಡಿದರು.
ಸಿಬಿಐ ಕೇಂದ್ರ ಸರ್ಕಾರದ ಅಧೀನದಲ್ಲಿದೆ ಎಂದು ಹೇಳಬೇಕಾಗುತ್ತದೆ: ಈ ಪ್ರಕರಣದಲ್ಲಿ ಸಿಬಿಐಗೆ ವಹಿಸಬೇಕಾದಂತಹ ಯಾವುದೇ ಅಗತ್ಯ ಅಂಶಗಳಿಲ್ಲ. ಲೋಕಾಯುಕ್ತ ತನಿಖಾ ವರದಿಯನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಒಪ್ಪಬಹುದು, ಇಲ್ಲವೇ ತಿರಸ್ಕರಿಸಬಹುದು. ಹೆಚ್ಚಿನ ತನಿಖೆ ನಡೆಸಲು ನಿರ್ದೇಶನ ನೀಡಬಹುದಾಗಿದೆ. ಲೋಕಾಯುಕ್ತ ಸಂಸ್ಥೆ ರಾಜ್ಯ ಸರ್ಕಾರದ ಅಧೀನದಲ್ಲಿದ್ದು ಕಳಂಕದಿಂದ ಕೂಡಿದೆ ಎಂದಾದರೆ, ಸಿಬಿಐ ಕೇಂದ್ರ ಸರ್ಕಾರದ ಅಧೀನದಲ್ಲಿದೆ ಎಂದು ಹೇಳಬೇಕಾಗುತ್ತದೆ. ಹೀಗಿರುವಾಗ ನ್ಯಾಯಾಕ್ಕಾಗಿ ಎಲ್ಲಿಗೆ ಹೋಗಬೇಕು ಎಂಬ ಪ್ರಶ್ನೆ ಎದುರಾಗಲಿದೆ ಎಂದು ಅವರು ಪೀಠಕ್ಕೆ ತಿಳಿಸಿದರು.
ಸಿದ್ದರಾಮಯ್ಯ ಪರ ಅಭೀಷೇಕ ಮನು ಸಿಂಘ್ವಿ: ಸಿದ್ದರಾಮಯ್ಯ ಪರವಾಗಿ ವಾದ ಮಂಡಿಸಿದ ಸುಪ್ರೀಂಕೋರ್ಟ್‌ನ ಹಿರಿಯ ವಕೀಲ ಡಾ.ಅಭಿಷೇಕ ಮನು ಸಿಂಘ್ವಿ, ಅರ್ಜಿದಾರರ ಪರ ವಕೀಲರು ಪ್ರಕರಣವನ್ನು ಯಾವ ತನಿಖಾ ಸಂಸ್ಥೆ ತನಿಖೆ ನಡೆಸಬೇಕು ಎಂಬುದನ್ನು ನಿರ್ಧರಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದರೆ. ಆದರೆ, ದೂರುದಾರರು ಇಂತಹ ತನಿಖಾ ಸಂಸ್ಥೆಯೇ ತನಿಖೆ ನಡೆಸಬಹುದು ಎಂದು ಕೇಳಬಹುದೇ ಎಂದು ಪ್ರಶ್ನಿಸಿದರು.
ಅರ್ಜಿದಾರ ಸ್ನೇಹಮಯಿ ಕೃಷ್ಣ ದೂರು ನೀಡಿದ್ದು, ಪ್ರಕರಣ ಸಂಬಂಧ ಲೋಕಾಯುಕ್ತ ಇಲ್ಲವೇ ಸಿಬಿಐ ತನಿಖೆ ನಡೆಸಬೇಕು ಎಂಬುದೇ ಗೊಂದಲದಲ್ಲಿದ್ದಾರೆ. ಯಾವುದಾದರೂ ಸರಿ ಎಂದು ಹೇಳುವಂತಿದೆ. ಯಾವುದೇ ಪ್ರಕರಣ ಅಸಾಧಾರಣ ಸಂದರ್ಭಗಳಿದ್ದಲ್ಲಿ ಮಾತ್ರ ಸಿಬಿಐಗೆ ವರ್ಗಾವಣೆ ಮಾಡಬಹುದು. ಆದರೆ, ಈ ಪ್ರಕರಣದಲ್ಲಿ ಅಂತಹ ಸಂದರ್ಭ ಎದುರಾಗಿಲ್ಲ. ಅರ್ಜಿದಾರರು ಕೋರಿದ್ದಾರೆ ಎಂಬ ಕಾರಣದಿಂದ ಮನವಿ ಅಂಗೀಕರಿಸಬಾರದು. ಮುಖ್ಯಮಂತ್ರಿಗಳು ಭಾಗಿಯಾಗಿದ್ದಾರೆ ಎಂಬ ಕಾರಣ ನೀಡಿ ಸ್ವಯಂಪ್ರೇರಿತವಾಗಿ ಸಿಬಿಐಗೆ ವಹಿಸಬೇಕು ಎಂಬ ನಿಯಮ ಇಲ್ಲ. ಇಂತಹ ವಾದವನ್ನು ಪೀಠ ತಿರಸ್ಕರಿಸಬೇಕು ಎಂದು ಪೀಠಕ್ಕೆ ಮನವಿ ಮಾಡಿದರು.
ಪ್ರಧಾನಿಗಳ ಅಧೀನದಲ್ಲಿ ಸಿಬಿಐ: ಸಿದ್ದರಾಮಯ್ಯ ಪತ್ನಿ ಪಾರ್ವತಿ ಪರ ವಾದ ಮಂಡಿಸಿದ ಹಿರಿಯ ವಕೀಲರ ರವಿವರ್ಮ ಕುಮಾರ್, ಕೇಂದ್ರ ತನಿಖಾ ದಳ(ಸಿಬಿಐ) ಪ್ರಧಾನಮಂತ್ರಿಗಳ ಅಧಿಕಾರದ ಅಧೀನದಲ್ಲಿ ಕಾರ್ಯನಿರ್ವಹಣೆ ಮಾಡಲಿದೆ. ಪ್ರಧಾನಮಂತ್ರಿ ಕಾಂಗ್ರೆಸ್ ಮುಕ್ತ ಭಾರತ ಮಾಡುವುದು ನನ್ನ ಉದ್ದೇಶ ಎಂಬುದಾಗಿ ಘೋಷಣೆ ಮಾಡಿದ್ದಾರೆ. ರಾಜಕೀಯ ಉದ್ದೇಶದಿಂದ ಲೋಕಾಯುಕ್ತ ತನಿಖೆಯಿಂದ ತಪ್ಪಿಸಿ ಸಿಬಿಐಗೆ ವಹಿಸಲು ಶ್ರಮಿಸಲಾಗುತ್ತಿದೆ.ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಪ್ರಕರಣವನ್ನು ಗಮನಿಸಿದರೆ ಸಿಬಿಐ ಸ್ವಾತಂತ್ರ್ಯ ಸಂಸ್ಥೆಯಾಗಿ ಉಳಿದಿಲ್ಲ ಎಂದು ವಿವರಿಸಿದರು.
ಅಲ್ಲದೆ, ನಮ್ಮ ಕಕ್ಷಿದಾರರು ಪ್ರಕರಣದಲ್ಲಿ ಎಲ್ಲಿಯೂ ಭಾಗಿಯಾಗಿಲ್ಲ. ಆದರೂ, ಅವರನ್ನು ಪ್ರಕರಣದಲ್ಲಿ ಅನಗತ್ಯವಾಗಿ ಸೇರಿಸಲಾಗಿದೆ. ಹೀಗಾಗಿ ನನ್ನ ಕಕ್ಷಿದಾರರ ವಿರುದ್ಧದ ಆರೋಪಗಳನ್ನು ಹಿಂಪಡೆಯಬೇಕು. ಸಿಬಿಐ ತನಿಖೆ ವಹಿಸುವುದಕ್ಕೆ ಸಾಧ್ಯವಿಲ್ಲ ಎಂಬುದಾಗಿ ನ್ಯಾಯಾಲಯ ಆದೇಶಿಸಬೇಕು. ಜತೆಗೆ, ಅರ್ಜಿಯನ್ನು ವಜಾಗೊಳಿಸಬೇಕು ಎಂದು ಪೀಠಕ್ಕೆ ಮನವಿ ಮಾಡಿದರು.
ಸಿಎಂ ಸಿದ್ದರಾಮಯ್ಯನವರ ಬಾವಮೈದುನ ಮಲ್ಲಿಕಾರ್ಜುನ ಸ್ವಾಮಿ ಪರ ವಾದ ಮಂಡಿಸಿದ ಹಿರಿಯ ವಕೀಲ ಆದಿತ್ಯ ಸೋಂಧಿ, ಅರ್ಜಿದಾರರು, ಸರ್ಕಾರದಲ್ಲಿ ಪ್ರಮುಖ ವ್ಯಕ್ತಿ ಆರೋಪಿಯಾಗಿರುವುದರಿಂದ ಲೋಕಾಯುಕ್ತ ಪೊಲೀಸರಿಂದ ನಿಷ್ಪಕ್ಷಪಾತದ ತನಿಖೆ ಸಾಧ್ಯವಿಲ್ಲ ಎಂಬುದಾಗಿ ಕಾಲ್ಪನಿಕವಾಗಿ ತಿಳಿಸುತ್ತಿದ್ದಾರೆ. ಅದೇ ತೀರ್ಮಾನಕ್ಕೆ ಬರುವಂತೆ ನ್ಯಾಯಪೀಠಕ್ಕೆ ತಿಳಿಸಲಾಗುತ್ತಿದೆ. ಆದರೆ, ಪ್ರಕರಣ ಸಂಬಂಧ ಲೋಕಾಯುಕ್ತ ಪೊಲೀಸರು ಎಫ್‌ಐಆರ್ ದಾಖಲಿಸಿದ ದಿನವೇ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಹಿಂದೆ ಲೋಕಾಯುಕ್ತ ತನಿಖೆಗೆ ಕೋರಿದ್ದ ಅರ್ಜಿದಾರು, ಇದೀಗ ಸಿಬಿಐ ಕೋರುತ್ತಿದ್ದಾರೆ. ಅಲ್ಲದೆ, ಜಾರಿ ನಿರ್ದೇಶನಾಲಯವನ್ನು ಪ್ರತಿವಾದಿಯನ್ನಾಗಿಸುವಂತೆ ಅರ್ಜಿದಾರರು ಕೊರಿದ್ದಾರೆ. ಇದು ಕಾನೂನು ಪ್ರಕ್ರಿಯೆಯ ದುರ್ಬಳಕೆಯಲ್ಲದೇ ಮತ್ತೇನು ಎಂದು ಪ್ರಶ್ನಿಸಿದರು.
ಅಲ್ಲದೆ, ವಿವಾದಿತ ಜಮೀನನ್ನು ನಮ್ಮ ಕಕ್ಷಿದಾರರು 2004ರಲ್ಲಿ ಖರೀದಿಸಿದ್ದು, ನೋಂದಣಿ ಮಾಡಿಕೊಳ್ಳಲಾಗಿದೆ. ವಾಣಿಜ್ಯ ಬಳಕೆಗೆ ಪರಿವರ್ತನೆ ಮಾಡಲಾಗಿದೆ. ಇದಾದ ಆರು ವರ್ಷಗಳ ಬಳಿಕ ತನ್ನ ಸಹೋದರಿ ಪಾರ್ವತಿ ಅವರಿಗೆ ಧಾನವಾಗಿ ನೀಡಿದ್ದಾರೆ. ಆ ಜಮೀನು ಡಿನೋಟಿಫಿಕೇಷನ್ನಿಂದ ಸಹೋದರಿಗೆ ಉಡುಗೊರೆಯಾಗಿ ನೀಡುವ ಪ್ರಕ್ರಿಯೆ 12 ವರ್ಷಗಳ ಕಾಲದ್ದಾಗಿದೆ. ಜಮೀನು ಖರೀದಿ ಮಾಡಿ 25 ವರ್ಷಗಳೇ ಕಳೆದಿದೆ. ಘಟನೆ ನಡೆದ ಬಳಿಕ ಆರೋಪ ಮಾಡುವುದಕ್ಕೆ ಸಮೀಪದ ಕಾಲಾವಧಿ ಇರಬೇಕಾಗುತ್ತದೆ. ಇದೀಗ ಅನಗತ್ಯವಾಗಿ ನಮ್ಮ ಕಕ್ಷಿದಾರರ ವಿರುದ್ಧ ಪಿತೂರಿ ಮಾಡಲಾಗುತ್ತಿದೆ. ಹೀಗಾಗಿ ಅರ್ಜಿಯನ್ನು ವಜಾಗೊಳಿಸಬೇಕು ಎಂದು ಪೀಠಕ್ಕೆ ಮನವಿ ಮಾಡಿದರು. ವಾದ ಆಲಿಸಿದ ಪೀಠ ಆದೇಶವನ್ನು ಕಾಯ್ದಿರಿಸಿತು.
ಇದನ್ನೂ ಓದಿ: ಪಾರ್ವತಿ ಸಿದ್ದರಾಮಯ್ಯ, ಬೈರತಿ ಸುರೇಶ್‌ಗೆ ಇ.ಡಿ ಜಾರಿಗೊಳಿಸಿದ್ದ ಸಮನ್ಸ್‌ಗೆ ಹೈಕೋರ್ಟ್ ತಡೆ
ಇದನ್ನೂ ಓದಿ: ಮುಡಾ ಪ್ರಕರಣ: ಹೈಕೋರ್ಟ್ನಲ್ಲಿ ಸ್ನೇಹಮಯಿ ಕೃಷ್ಣ ಪರ ವಕೀಲರ ವಾದದ ವಿವರ ಹೀಗಿದೆ!