ಮೈಸೂರು: ಚೊಚ್ಚಲ ಖೋಖೋ ವಿಶ್ವಕಪ್ ಗೆದ್ದ ಚಾಂಪಿಯನ್ಸ್, ಭಾರತೀಯ ತಂಡಗಳ ಅಮೋಘ ಸಾಧನೆ ಇತಿಹಾಸದ ಪುಟಗಳಲ್ಲಿ ಶಾಶ್ವತವಾಗಿ ಉಳಿಯಲಿದೆ. ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕಿನ ಕುರುಬೂರು ಗ್ರಾಮದ ಯುವತಿ ಚೈತ್ರ.ಬಿ ಅವರು ವಿಶ್ವವಿಜೇತ ಮಹಿಳಾ ಖೋಖೋ ತಂಡದ ಭಾಗವಾಗಿರುವುದು ನಾಡಿಗೆ ಹೆಮ್ಮೆಯ ಸಂಗತಿ. ಭಾರತೀಯರ ಪಾಲಿಗೆ ಇದೊಂದು ಐತಿಹಾಸಿ ಘಟನೆಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ.ಮಹದೇವಪ್ಪ ಸಂತಸ ವ್ಯಕ್ತಪಡಿಸಿದರು.
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಜಿಲ್ಲಾಡಳಿತ ವತಿಯಿಂದ, ಬನ್ನಿ ಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಗಣರಾಜ್ಯೋತ್ಸವ ಆಚರಣೆ ಜರುಗಿತು. ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ.ಮಹದೇವಪ್ಪ ರಾಷ್ಟ ಧ್ವಜಾರೋಹಣ ನೆರವೇರಿಸಿ, ಗಾಂಧಿ ಮತ್ತು ಅಂಬೇಡ್ಕರ್ ಭಾವಚಿತ್ರಗಳಿಗೆ ಪುಪ್ಪಾರ್ಚನೆ ಸಲ್ಲಿಸಿದ ನಂತರ ಮಾತನಾಡಿದರು.
"ಹೃದಯ ಜ್ಯೋತಿ" ಹೊಸ ಯೋಜನೆ: "2024-25ನೇ ಸಾಲಿನಲ್ಲಿ ಹೊಸದಾಗಿ 23 ಡಯಾಲಿಸಿಸ್ ಯಂತ್ರಗಳು ಕಾರ್ಯ ನಿರ್ವಹಿಸುತ್ತಿದ್ದು, ರೋಗಿಗಳ ಪಟ್ಟಿ 95ರಿಂದ ಶೂನ್ಯಕ್ಕೆ ತಲುಪಿದೆ. "ಹೃದಯ ಜ್ಯೋತಿ" ಎಂಬ ಹೊಸ ಯೋಜನೆಯನ್ನು ಡಾ.ಪುನೀತ್ ರಾಜ್ಕುಮಾರ್ ಹೆಸರಿನಡಿ "ಡಾ.ಪುನೀತ್ ರಾಜಕುಮಾರ್ ಹೃದಯ ಜ್ಯೋತಿ" ಎಂದು ಆರಂಭಿಸಿದ್ದು, 75,720 ಇಸಿಜಿ ಪರೀಕ್ಷೆ ಮಾಡಿಲಾಗಿದೆ. ಈ ಯೋಜನೆಯಡಿಯಲ್ಲಿ 692 ಜೀವ ರಕ್ಷಣೆ ಮಾಡಲಾಗಿದೆ" ಎಂದು ತಿಳಿಸಿದರು.
ಬನ್ನಿ ಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಇಂದು 76ನೇ ಗಣರಾಜೋತ್ಸವ ನಡೆಯಿತು. ಅಶ್ವಾರೋಹಿ ದಳ, ಅಗ್ನಿಶಾಮಕ ದಳ, ಸಶಸ್ತ್ರ ಮೀಸಲು ಪಡೆ, ಗೃಹರಕ್ಷಕ ದಳ, ಎನ್ಸಿಸಿ ನೌಕಾದಳ ಸೇರಿದಂತೆ ಹಲವು ತುಕಡಿ ಭಾಗಿಯಾಗಿ ಮುಖ್ಯ ಅತಿಥಿಗಳಿಗೆ ಗೌರವ ಧ್ವಜವಂದನೆ ನೀಡದವು.

ಕಾರ್ಯಕ್ರಮದಲ್ಲಿ ಎಂಎಲ್ಸಿ ಡಾ.ತಿಮ್ಮಯ್ಯ, ಜಿಲ್ಲಾಧಿಕಾರಿ ಲಕ್ಷ್ಮೀಕಾಂತ್ ರೆಡ್ಡಿ, ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್, ಎಸ್ಪಿ ವಿಷ್ಣುವರ್ಧನ್, ಜಿ.ಪಂ ಸಿಇಒ ಗಾಯತ್ರಿ ಸೇರಿದಂತೆ ಜಿಲ್ಲಾಡಳಿತದ ಸಿಬ್ಬಂದಿ ಭಾಗಿಯಾಗಿದ್ದರು.

ಇದನ್ನೂ ಓದಿ: ಪಂಚ ಗ್ಯಾರಂಟಿ ಮಧ್ಯೆಯೂ ಆರ್ಥಿಕ ಪ್ರಗತಿ: ರಾಜ್ಯ ಸರ್ಕಾರದ ಸಾಧನೆ ಶ್ಲಾಘಿಸಿದ ರಾಜ್ಯಪಾಲ ಗೆಹ್ಲೋಟ್