ಹುಬ್ಬಳ್ಳಿ: "ಮಾನವ ಕಲ್ಯಾಣಕ್ಕೆ ಮಹಾವೀರ, ಪಾರ್ಶ್ವನಾಥರ ವಿಚಾರಗಳು ಮಾರ್ಗದರ್ಶಿಯಾಗಿವೆ. ಅಹಿಂಸಾ ತತ್ವ, ಸೇವಾ ತ್ಯಾಗ ವಿಶ್ವಕ್ಕೆ ಮಾದರಿಯಾಗಿದ್ದು, ಮನುಷ್ಯ ಜೀವನಕ್ಕೆ ಮಹಾವೀರರು ಆದರ್ಶಪ್ರಾಯವಾಗಿದ್ದಾರೆ" ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಹೇಳಿದರು.
ಹುಬ್ಬಳ್ಳಿಯ ವರೂರಿನ ನವಗ್ರಹ ತೀರ್ಥಂಕರ ಮಹಾಮಸ್ತಕಾಭಿಷೇಕಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, "ಜೈನ ಸಂತ, ಆಚಾರ್ಯ ಮುನಿಗಳು ಮಹಾವೀರರ ವಿಚಾರಗಳನ್ನು ಜನತೆಗೆ ಮುಟ್ಟಿಸುತ್ತಿದ್ದಾರೆ. ಜೀವನದಲ್ಲಿ ಪ್ರತಿಕೂಲ ಪರಿಸ್ಥಿತಿ ಬಂದಾಗ ಸಂತರ ಬಳಿ ಹೋಗಲು ಪಾರ್ಶ್ವನಾಥರು ಹೇಳಿದ್ದರು. ಅಹಿಂಸಾ ತತ್ವದಲ್ಲಿ ದಿವ್ಯ ದೃಷ್ಟಿ ಇದೆ. ಪಾರ್ಶ್ವನಾಥರ ಭಗವಾನರ ವಿಚಾರಗಳು ಸತ್ಯಕ್ಕೆ ಹತ್ತಿರವಾಗಿವೆ. ಮಾನವನ ವಿಕಾಸಕ್ಕೆ ದಾರಿದೀಪಗಳಾಗಿವೆ. ಶಾಂತಿ ಅಂದರೆ ಭಾರತ ನೆನಪಾಗುತ್ತದೆ. ಭಾರತ ಆಧ್ಯಾತ್ಮ ಕೇಂದ್ರವಾಗಿ ಮಾರ್ಪಟ್ಟಿದೆ. ಸುಮೇರು ಪರ್ವತ ಭಾರತ ಮತ್ತು ವಿಶ್ವಕ್ಕೆ ಆಧ್ಯಾತ್ಮಿಕ ಸಂದೇಶ ಕೊಡಲಿದೆ" ಎಂದರು.
ಹೆಲಿಕಾಪ್ಟರ್ ಮೂಲಕ ಪುಷ್ಪ ವೃಷ್ಟಿ : ಮಹಾಮಸ್ತಕಾಭಿಷೇಕ ಹಿನ್ನೆಲೆ ವರೂರಿನ ನವಗ್ರಹ ತೀರ್ಥಂಕರರಿಗೆ ಹೆಲಿಕಾಪ್ಟರ್ ಮೂಲಕ ಪುಷ್ಪ ವೃಷ್ಟಿ ಮಾಡಲಾಯಿತು. ಛಬ್ಬಿ ಬಳಿ ಹೆಲಿಪ್ಯಾಡ್ ನಿರ್ಮಾಣ ಮಾಡಿದ್ದು, ಬೆಲ್ 407 ಹೆಲಿಕಾಪ್ಟರ್ ಮೂಲಕ ಒಂದು ಪ್ರಯಾಣದಲ್ಲಿ ಆರು ಜನ ಭಕ್ತರು ಪಾರ್ಶ್ವನಾಥರಿಗೆ ಹಾಗೂ ಪಾವನ ಕ್ಷೇತ್ರ ಸುಮೇರು ಪರ್ವತಕ್ಕೆ ಪುಷ್ಪ ಸಮರ್ಪಣೆ ಮಾಡಿದರು.
ಪಾರ್ಶ್ವನಾಥರಿಗೆ 15 ಸಾವಿರ ಲೀಟರ್ ಕ್ಷೀರಾಭಿಷೇಕ : ನವಗ್ರಹ ತೀರ್ಥ ಕ್ಷೇತ್ರದಲ್ಲಿ ನಡೆಯುತ್ತಿರುವ ಮಹಾಮಸ್ತಕಾಭಿಷೇಕ ಮೆರಗು ಕ್ಷಣದಿಂದ ಕ್ಷಣಕ್ಕೆ ಹೆಚ್ಚುತ್ತಿದೆ. 15,000 ಲೀಟರ್ ಹಾಲಿನಲ್ಲಿ ಪಾರ್ಶ್ವನಾಥ ತೀರ್ಥಂಕರರಿಗೆ ಕ್ಷೀರಾಭಿಷೇಕ ಮಾಡಲಾಯಿತು. ರಾಜ್ಯ, ಅಂತಾರಾಜ್ಯ, ದೇಶ, ವಿದೇಶಗಳಿಂದ ಭಕ್ತರು ಅವಿಸ್ಮರಣೀಯ ಕ್ಷಣವನ್ನು ಕಣ್ಣು ತುಂಬಿಕೊಂಡರು.
ಇದನ್ನೂ ಓದಿ: ವರೂರಿನ 9 ತೀರ್ಥಂಕರರಿಗೆ ಮಹಾಮಸ್ತಕಾಭಿಷೇಕ ಪ್ರಾರಂಭ: ಸಾವಿರಾರು ಭಕ್ತರು ಭಾಗಿ