ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಕಾಣಿಸಿಕೊಂಡಿರುವ ಬಣಗಳ ಬಡಿದಾಟವನ್ನು ನಿವಾರಿಸಲು ಹೈಕಮಾಂಡ್ ಮಧ್ಯಪ್ರವೇಶ ಮಾಡಿದೆ. ವಾರದೊಳಗೆ ಪಕ್ಷದಲ್ಲಿನ ಸಮಸ್ಯೆಗಳು, ನಾಯಕರ ನಡುವಿನ ಅಸಮಾಧಾನ ಸೇರಿದಂತೆ ಸಣ್ಣ ಪುಟ್ಟ ತೊಂದರೆಗಳನ್ನು ನಿವಾರಣೆ ಮಾಡಲಿದೆ ಎಂದು ಬಿಜೆಪಿ ಉಪಾಧ್ಯಕ್ಷರಾದ ಮಾಜಿ ಸಚಿವ ಮುರುಗೇಶ ನಿರಾಣಿ ತಿಳಿಸಿದರು.
ಬಿಜೆಪಿಯಲ್ಲಿನ ಕಹಿ ಬೆಳವಣಿಗೆಗಳ ಬಗ್ಗೆ ಮಾಧ್ಯಮಗೋಷ್ಟಿಯಲ್ಲಿ ಕೇಳಲಾದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿ ಮಾತನಾಡಿದ ನಿರಾಣಿ, ಪಕ್ಷದಲ್ಲಿ ನಾಯಕರ ನಡುವೆ ಸಣ್ಣ ಪುಟ್ಟ ವೈಮನಸ್ಸುಗಳು ಇರುವುದು ನಿಜವೆಂದು ಒಪ್ಪಿಕೊಂಡರು. ಬಿಜೆಪಿ ಮುಖಂಡರಗಳ ನಡುವಿನ ಅಸಮಾಧಾನವನ್ನು ಬಗೆಹರಿಸುವ ಶಕ್ತಿ ಪಕ್ಷದ ಹೈಕಮಾಂಡ್ಗೆ ಇದೆ ಎಂದು ಹೇಳಿದರು.
ಹಿರಿಯ ಮುಖಂಡರಾದ ಶ್ರೀರಾಮುಲು ಮತ್ತು ಜನಾರ್ದನ ರೆಡ್ಡಿ ನಡುವಿನ ಅಸಮಾಧಾನದ ಬಗ್ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಈಗಾಗಲೇ ಶ್ರೀರಾಮುಲು ಅವರ ಜೊತೆಗೆ ಮಾತನಾಡಿದ್ದಾರೆ. ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ. ಶ್ರೀರಾಮುಲು ಅವರನ್ನು ಹೈಕಮಾಂಡ್ ಈಗಾಗಲೇ ಸಮಾಧಾನ ಪಡಿಸಿದ್ದು, ಅವರು ಪಕ್ಷ ಬಿಡುವುದಿಲ್ಲ ಬಿಜೆಪಿಯಲ್ಲಿಯೇ ಇರುತ್ತಾರೆ ಎಂದು ಮಾಜಿ ಸಚಿವ ಮುರುಗೇಶ ನಿರಾಣಿಯವರು ವಿಶ್ವಾಸ ವ್ಯಕ್ತಪಡಿಸಿದರು.
ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಅವರ ನಡುವಿನ ಭಿನ್ನಾಭಿಪ್ರಾಯದ ಜೊತೆಗೆ ಬಿಜೆಪಿ ಹೈಕಮಾಂಡ್ ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಮತ್ತು ಹಿರಿಯ ಮುಖಂಡ ಬಸನಗೌಡ ಯತ್ನಾಳ್ ನಡುವಿನ ವೈಮನಸ್ಸನ್ನು ಸಹ ನಿವಾರಿಸಲಿದೆ ಎಂದು ನಿರಾಣಿಯವರು ತಿಳಿಸಿದರು.
ಯತ್ನಾಳ್ ಉಚ್ಛಾಟನೆ ಸಲ್ಲದು: ಬಿಜೆಪಿಯಲ್ಲಿ ರಾಜ್ಯ ನಾಯಕತ್ವ ವಿರುದ್ಧ ಭಿನ್ನಮತೀಯ ಚಟುವಟಿಕೆಯಲ್ಲಿ ತೊಡಗಿರುವ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಬಿಜೆಪಿಯಿಂದ ಉಚ್ಛಾಟನೆ ಮಾಡಬೇಕೆನ್ನುವ ವಿಜಯೇಂದ್ರ ಬೆಂಬಲಿಗರ ಬೇಡಿಕೆ ಬಗ್ಗೆ ಪ್ರತಿಕ್ರಿಯಿಸಿದ ನಿರಾಣಿಯವರು, ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಬಾರದು ಎನ್ನುವುದು ತಮ್ಮ ವೈಯಕ್ತಿಕ ಅಭಿಪ್ರಾಯವಾಗಿದೆ ಎಂದು ಹೇಳಿದರು.
ಯತ್ನಾಳ್ ಅವರು ಹಿರಿಯ ಮುಖಂಡರಿದ್ದಾರೆ. ಲೋಕಸಭೆ ಸದಸ್ಯರಾಗಿ, ಶಾಸಕರಾಗಿ, ವಿಧಾನ ಪರಿಷತ್ ಸದಸ್ಯರಾಗಿ ಸೇವೆ ಸಲ್ಲಿಸಿದ ಅನುಭವವಿದೆ. ಯತ್ನಾಳ್ ಮಾತ್ರವಲ್ಲ, ಯಾವ ಸಾಮಾನ್ಯ ಕಾರ್ಯಕರ್ತರನ್ನೂ ಬಿಜೆಪಿಯಿಂದ ಉಚ್ಛಾಟನೆ ಮಾಡಬಾರದೆನ್ನುವುದು ನನ್ನ ಅಭಿಪ್ರಾಯ ಎಂದರು.
ದಾವೋಸ್ ಆರ್ಥಿಕ ಶೃಂಗ ಸಭೆಯಲ್ಲಿ ಪಾಲ್ಗೊಳ್ಳದಿದ್ದರೆ ಹಿನ್ನೆಡೆ : ದಾವೋಸ್ನಲ್ಲಿ ನಡೆಯುವ ವಿಶ್ವ ಆರ್ಥಿಕ ಶೃಂಗ ಸಭೆಯಲ್ಲಿ ಕರ್ನಾಟಕ ಸರ್ಕಾರ ಪಾಲ್ಗೊಳ್ಳದಿದ್ದರೆ ಕೈಗಾರಿಕಾ ಕ್ಷೇತ್ರದಲ್ಲಿ ರಾಜ್ಯಕ್ಕೆ ಬಂಡವಾಳ ಹೂಡಿಕೆಯಲ್ಲಿ ಹಿನ್ನೆಡೆಯಾಗಲಿದೆ ಎಂದು ಮುರುಗೇಶ ನಿರಾಣಿ ತಿಳಿಸಿದರು. ಕೈಗಾರಿಕಾ ಸಚಿವ ಎಂ. ಬಿ. ಪಾಟೀಲರು ದಾವೋಸ್ ಶೃಂಗ ಸಭೆಯಲ್ಲಿ ಪಾಲ್ಗೊಳ್ಳುವುದಿಲ್ಲವೆಂದು ತಿಳಿಸಿದ್ದಾರೆ. ಈ ನಿಲುವು ಸರಿಯಲ್ಲವೆಂದು ನಿರಾಣಿ ಅಭಿಪ್ರಾಯಪಟ್ಟರು.
ಕೈಗಾರಿಕಾ ಸಚಿವನಾಗಿ 10 ವರ್ಷ ಸೇವೆ ಸಲ್ಲಿಸಿದ ಅನುಭವದಿಂದ ದಾವೋಸ್ ಆರ್ಥಿಕ ಶೃಂಗ ಸಭೆಯಲ್ಲಿ ಕರ್ನಾಟಕ ರಾಜ್ಯ ಭಾಗವಹಿಸಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೈಗಾರಿಕಾ ಸಚಿವರಿಗೆ ತಿಳಿಹೇಳಿ ದಾವೋಸ್ ಶೃಂಗ ಸಭೆಗೆ ಸರ್ಕಾರದ ಪ್ರತಿನಿಧಿಗಳನ್ನು ಕಳಿಸಬೇಕು. ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಇರುವ ಅವಕಾಶಗಳನ್ನು ದಾವೂಸ್ನಲ್ಲಿ ಪ್ರಚುರ ಪಡಿಸಬೇಕೆಂದು ಮಾಜಿ ಕೈಗಾರಿಕಾ ಸಚಿವ ನಿರಾಣಿ ಆಗ್ರಹಿಸಿದರು.
ಇದನ್ನೂ ಓದಿ: ಹೆಲಿಕಾಪ್ಟರ್, ವಿಮಾನದ ಇಂಧನದಲ್ಲೂ ಕಬ್ಬಿನ ಉಪ ಉತ್ಪನ್ನ ''ಎಥೆನಾಲ್'' ಮಿಶ್ರಣ : ನಿರಾಣಿ
ಇದನ್ನೂ ಓದಿ: ಪ್ರತಿ ಜಿಲ್ಲೆಯಲ್ಲಿ 200 ಆಸನಗಳ ಮಿನಿ ಚಿತ್ರಮಂದಿರ ಸ್ಥಾಪನೆ : ಸಿಎಂ ಘೋಷಣೆ