ಜೆರುಸಲೇಮ್(ಇಸ್ರೇಲ್):ಯುದ್ಧ ವಿರಾಮ ಮತ್ತು ಒತ್ತೆಯಾಳುಗಳ ಒಪ್ಪಂದದ ಸಲುವಾಗಿ ಕೈರೋದಲ್ಲಿ ನಡೆದಿರುವ ಉನ್ನತ ಮಟ್ಟದ ಮಾತುಕತೆಯು ಅಂತಿಮ ಒಪ್ಪಂದವಿಲ್ಲದೇ ನಿನ್ನೆ ಇಸ್ರೇಲ್-ಹಮಾಸ್ ಯುದ್ಧವನ್ನು ತಾತ್ಕಾಲಿಕವಾಗಿ ಕೊನೆಗೊಳಿಸಿತು ಎಂದು ಅಮೆರಿಕದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ ಇಲ್ಲಿಗೆ ಮಾತುಕತೆ ಸಂಪೂರ್ಣವಾಗಿಲ್ಲ. ಇನ್ನು ಮುಂದಿನ ದಿನಗಳಲ್ಲಿ ಕದನವನ್ನು ನಿಲ್ಲಿಸುವುದಕ್ಕಾಗಿ ಕೆಳ ಹಂತಗಳಲ್ಲಿ ಮಾತುಕತೆಗಳು ಮುಂದುವರಿಯುತ್ತವೆ ಎಂದಿದ್ದಾರೆ.
ಮುಂದುವರಿದು ಮಾತನಾಡಿರುವ ಅಧಿಕಾರಿ, ಉಳಿದ ಭಿನ್ನಾಭಿಪ್ರಾಯಗಳನ್ನು ನಿವಾರಿಸುವ ಭರವಸೆಯಲ್ಲಿ ಅಮೆರಿಕ, ಕತಾರ್ ಮತ್ತು ಈಜಿಪ್ಟ್ನ ಮಧ್ಯವರ್ತಿಗಳನ್ನು ಭೇಟಿ ಮಾಡಲು ಕೆಳ ಹಂತದ ವರ್ಕಿಂಗ್ ಟೀಮ್ಸ್ ಕೈರೋದಲ್ಲಿಯೇ ಉಳಿಯುತ್ತದೆ. ಇನ್ನು ಕೈರೋದಲ್ಲಿ ಕಳೆದ ಗುರುವಾರದಿಂದ ಭಾನುವಾರದವರೆಗೆ ನಡೆದಿರುವ ಇತ್ತೀಚಿನ ಮಾತುಕತೆಗಳು ರಚನಾತ್ಮಕ. ಮತ್ತು ಎಲ್ಲಾ ಪಕ್ಷಗಳು ಕೊನೆಯ ಹಾಗೂ ಕಾರ್ಯಗತಗೊಳಿಸಬಹುದಾದ ಒಪ್ಪಂದಕ್ಕಾಗಿ ಕೆಲಸ ಮಾಡುತ್ತಿವೆ ಎಂದು ಹೇಳಿದ್ದಾರೆ.
ಈ ಮಾತುಕತೆಗಳಲ್ಲಿ ಸೆಂಟ್ರಲ್ ಇಂಟೆಲಿಜೆನ್ಸ್ ಏಜೆನ್ಸಿ ನಿರ್ದೇಶಕ ವಿಲಿಯಮ್ ಬರ್ನ್ಸ್ ಮತ್ತು ಇಸ್ರೇಲ್‌ನ ಮೊಸಾದ್ ಗುಪ್ತಚರ ಸಂಸ್ಥೆಯ ಮುಖ್ಯಸ್ಥ ಡೇವಿಡ್ ಬಾರ್ನಿಯಾ ಇದ್ದರು. ಈಜಿಪ್ಟ್ ಮತ್ತು ಕತಾರಿ ಮಧ್ಯವರ್ತಿಗಳಿಂದ ಹಮಾಸ್ ನಿಯೋಗಕ್ಕೆ ಮಾಹಿತಿ ನೀಡಲಾಗಿದೆ. ಆದರೆ, ನೇರವಾಗಿ ಅವರು ಮಾತುಕತೆಗಳಲ್ಲಿ ಭಾಗವಹಿಸಲಿಲ್ಲ.
ಇನ್ನು ಭಾನುವಾರ ಇಸ್ರೇಲ್ ಮತ್ತು ಲೆಬನಾನ್ನ ಉಗ್ರಗಾಮಿ ಗುಂಪು ಹಿಜ್ಬುಲ್ಲಾ ನಡೆಸಿರುವ ವೈಮಾನಿಕ ದಾಳಿಗಳ ನಂತರ ಈ ಬೆಳವಣಿಗೆ ನಡೆದಿದೆ. ನೂರಾರು ಡ್ರೋನ್ಗಳು ಮತ್ತು ರಾಕೆಟ್ಗಳೊಂದಿಗೆ ಹಿಜ್ಬುಲ್ಲಾ ಭಾನುವಾರ ನಡೆಸಿದ ದೊಡ್ಡ ಪ್ರಮಾಣದ ದಾಳಿಗೆ ಪ್ರತಿಕ್ರಿಯೆಯಾಗಿ ಇಸ್ರೇಲ್ ಕೂಡ ದಾಳಿಗಳನ್ನು ನಡೆಸಿತ್ತು. ಇದರಿಂದ ಸಾವು - ನೋವು ಉಂಟಾಗಿದೆ.
ಸೂಕ್ಷ್ಮವಾಗಿ ಗಮನಿಸುತ್ತಿರುವ ಅಮೆರಿಕ:ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರ ಸೀನ್ ಸಾವೆಟ್, "ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಇಸ್ರೇಲ್ ಮತ್ತು ಲೆಬನಾನ್‌ನಲ್ಲಿ ನಡೆಯುತ್ತಿರುವ ಯುದ್ಧದ ಘಟನೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಹಾಗೇ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ತನ್ನ ಇಸ್ರೇಲಿ ಸಹವರ್ತಿ ಯೋವ್ ಗ್ಯಾಲಂಟ್ ಅವರೊಂದಿಗೆ ಮಾತನಾಡಿದ್ದಾರೆ ಮತ್ತು ಎರಡೂ ಯುಎಸ್ ಕ್ಯಾರಿಯರ್ ಸ್ಟ್ರೈಕ್ ಗುಂಪುಗಳನ್ನು ಈ ಪ್ರದೇಶದಲ್ಲಿ ಉಳಿಯಲು ಆದೇಶಿಸಿದ್ದಾರೆ ಎಂದು ಅಮೆರಿಕಾದ ಪೆಂಟಗನ್ ಕಚೇರಿ ತಿಳಿಸಿದೆ.
ತಿಳಿದಿರುವಂತೆ ಜುಲೈ 30 ರಂದು ಬೈರುತ್ನ ದಕ್ಷಿಣ ಉಪನಗರಗಳ ಮೇಲೆ ಇಸ್ರೇಲ್ ದಾಳಿ ನಡೆಸಿದ ನಂತರ ಲೆಬನಾನ್ - ಇಸ್ರೇಲ್ ಗಡಿಯಲ್ಲಿ ಉದ್ವಿಗ್ನತೆ ತೀವ್ರಗೊಂಡಿತು. ಈ ಇಸ್ರೇಲ್ ದಾಳಿಯಲ್ಲಿ ಹಿಜ್ಬುಲ್ಲಾದ ಹಿರಿಯ ಮಿಲಿಟರಿ ಕಮಾಂಡರ್ ಫವಾದ್ ಶುಕೂರ್ ಸೇರಿದಂತೆ ಏಳು ಹಿಜ್ಬುಲ್ಲಾ ಸದಸ್ಯರು ಸಾವನ್ನಪ್ಪಿದ್ದರು.
ಇದನ್ನೂ ಓದಿ:ಲೆಬನಾನ್ ಮೇಲೆ ಇಸ್ರೇಲ್ ದಾಳಿ: ಹಿಜ್ಬುಲ್ಲಾದ ಮೂವರು ಸದಸ್ಯರು ಸೇರಿ ನಾಲ್ವರ ಸಾವು - Israel Hezbollah War