ಟೆಲ್ ಅವೀವ್: ರಫಾ ಮೇಲೆ ನೆಲದ ಆಕ್ರಮಣ ಆರಂಭಿಸಲು ಸಿದ್ಧತೆ ನಡೆಸುತ್ತಿರುವ ಇಸ್ರೇಲ್, ದಕ್ಷಿಣ ಗಾಜಾದ ಪೂರ್ವ ರಫಾ ಪ್ರದೇಶದ ನಿವಾಸಿಗಳು ಸ್ಥಳಾಂತರಗೊಳ್ಳುವಂತೆ ಸೂಚಿಸಿದೆ. ವಿಸ್ತೃತ ಮಾನವೀಯ ಸುರಕ್ಷತೆ ಪ್ರದೇಶಕ್ಕೆ ಹೋಗುವಂತೆ ಈ ನಿವಾಸಿಗಳಿಗೆ ಇಸ್ರೇಲ್ ಮಿಲಿಟರಿ ಹೇಳಿದೆ.
ಈಜಿಪ್ಟ್ ಗಡಿಯಿಂದ ಸ್ವಲ್ಪ ದೂರ ಮೆಡಿಟರೇನಿಯನ್ನಲ್ಲಿರುವ ಅಲ್-ಮಾವಾಸಿ ನಿರಾಶ್ರಿತರ ಶಿಬಿರದಲ್ಲಿನ ವಿಸ್ತೃತ ಮಾನವೀಯ ಪ್ರದೇಶಕ್ಕೆ ತೆರಳುವಂತೆ ಪೂರ್ವ ರಫಾದ ನಿವಾಸಿಗಳನ್ನು ಪ್ರೋತ್ಸಾಹಿಸುವುದಾಗಿ ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) ಸೋಮವಾರ ಹೇಳಿದೆ. "ಸರ್ಕಾರದ ಅನುಮೋದನೆಗೆ ಅನುಗುಣವಾಗಿ, ಪ್ರಸ್ತುತ ಪರಿಸ್ಥಿತಿ ನೋಡಿದರೆ ನಿರ್ದಿಷ್ಟ ಪ್ರದೇಶಗಳಲ್ಲಿನ ನಾಗರಿಕರನ್ನು ಮಾನವೀಯ ಪ್ರದೇಶಗಳಿಗೆ ಸ್ಥಳಾಂತರಿಸುವುದು ಅಗತ್ಯವಾಗಿದೆ" ಎಂದು ಐಡಿಎಫ್ ಟೆಲಿಗ್ರಾಮ್ ಪೋಸ್ಟ್ನಲ್ಲಿ ತಿಳಿಸಿದೆ.
"ರಫಾ ಸ್ಥಳಾಂತರವನ್ನು ತಾತ್ಕಾಲಿಕ ಎಂದು ಐಡಿಎಫ್ ಹೇಳಿದೆ. ಪೋಸ್ಟರ್ಗಳು, ಎಸ್ಎಂಎಸ್ ಸಂದೇಶಗಳು, ಫೋನ್ ಕರೆಗಳು ಮತ್ತು ಅರೇಬಿಕ್ ಭಾಷೆಯಲ್ಲಿ ಮಾಧ್ಯಮ ಪ್ರಸಾರಗಳ ಮೂಲಕ ನಿವಾಸಿಗಳಿಗೆ ಸ್ಥಳಾಂತರಗೊಳ್ಳುವಂತೆ ತಿಳಿಸಲಾಗುವುದು." ಎಂದು ಐಡಿಎಫ್ ಹೇಳಿದೆ. "ಹಮಾಸ್ ಸೆರೆಯಲ್ಲಿರುವ ಎಲ್ಲ ಒತ್ತೆಯಾಳುಗಳು ಇಸ್ರೇಲ್ಗೆ ಮರಳುವವರೆಗೂ ಐಡಿಎಫ್ ಗಾಜಾದ ಎಲ್ಲ ಕಡೆಗಳಲ್ಲಿ ಹಮಾಸ್ ವಿರುದ್ಧ ದಾಳಿ ನಡೆಸುವುದನ್ನು ಮುಂದುವರಿಸಲಿದೆ" ಎಂದು ಅದು ತಿಳಿಸಿದೆ.