ನವದೆಹಲಿ: 18 ಭಾರತೀಯರು ರಷ್ಯಾದ ಸಶಸ್ತ್ರ ಪಡೆಗಳಲ್ಲಿ ಉಳಿದುಕೊಂಡಿದ್ದು, ಅವರಲ್ಲಿ 16 ಮಂದಿ ನಾಪತ್ತೆಯಾಗಿದ್ದಾರೆದಂದು ರಷ್ಯಾ ತಿಳಿಸಿದೆ ಎಂದು ಕೇಂದ್ರ ಸರ್ಕಾರ ಗುರುವಾರ ಸಂಸತ್ತಿಗೆ ಮಾಹಿತಿ ನೀಡಿದೆ.
ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್ ರಾಜ್ಯಸಭೆಯಲ್ಲಿ ಕೇಳಿದ ಪ್ರಶ್ನೆಗೆ ಲಿಖಿತ ಪ್ರತಿಕ್ರಿಯೆಯಲ್ಲಿ ಮಾಹಿತಿ ನೀಡಿದ್ದಾರೆ. 18 ಭಾರತೀಯ ಸೈನಿಕರಲ್ಲಿ ಒಂಬತ್ತು ಜನ ಉತ್ತರ ಪ್ರದೇಶದವರು, ತಲಾ ಇಬ್ಬರು ಪಂಜಾಬ್ ಮತ್ತು ಹರಿಯಾಣದವರು ಮತ್ತು ತಲಾ ಒಬ್ಬರು ಚಂಡೀಗಢ, ಮಹಾರಾಷ್ಟ್ರ, ಕೇರಳ ಮತ್ತು ಬಿಹಾರ, ಜಮ್ಮು ಮತ್ತು ಕಾಶ್ಮೀರದಿಂದ ಬಂದವರು ಎಂದು ತಿಳಿಸಿದ್ದಾರೆ.
ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಸಿಂಗ್, ರಷ್ಯಾದ ಸಶಸ್ತ್ರ ಪಡೆಗಳಲ್ಲಿ 12 ಭಾರತೀಯರು, ಪ್ರಸ್ತುತ ನಡೆಯುತ್ತಿರುವ ಸಂಘರ್ಷದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ ಎಂದು ಹೇಳಿದರು.
ನಮ್ಮ ರಾಯಭಾರಿ ಕಚೇರಿಗಳು ಮತ್ತು ಪೋಸ್ಟ್‌ಗಳು ವಿದೇಶಗಳಲ್ಲಿರುವ ಎಲ್ಲಾ ಭಾರತೀಯ ಪ್ರಜೆಗಳ ಸುರಕ್ಷತೆ, ಭದ್ರತೆ ಮತ್ತು ಯೋಗಕ್ಷೇಮಕ್ಕೆ ಹೆಚ್ಚಿನ ಆದ್ಯತೆ ನೀಡುತ್ತವೆ. ಮತ್ತು ಸಹಾಯಕ್ಕಾಗಿ ಯಾವುದೇ ಕರೆ ಬಂದಾಗ ಸೂಕ್ತ ಕ್ರಮವನ್ನು ತೆಗೆದುಕೊಳ್ಳುತ್ತವೆ ಎಂಬ ಭರವಸೆ ನೀಡಿದರು.
ಈ ವೇಳೆ, ರಷ್ಯಾದಲ್ಲಿ ಇನ್ನೂ ಸಿಕ್ಕಿ ಹಾಕಿಕೊಂಡಿರುವ ಮತ್ತು ಅವರ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಭಾರತೀಯ ಯುವಕರ ಸಂಖ್ಯೆ ಮತ್ತು ಅವರನ್ನು ಭಾರತಕ್ಕೆ ಕರೆತರಲು MEA ಮತ್ತು ರಷ್ಯಾದ ಭಾರತೀಯ ರಾಯಭಾರ ಕಚೇರಿ ಕೈಗೊಂಡ ಕ್ರಮಗಳ ವಿವರಗಳಿಗಾಗಿ ಸರ್ಕಾರವನ್ನು ಕೇಳಲಾಯಿತು.
ರಷ್ಯಾದ ಅಧಿಕಾರಿಗಳಿಗೆ ವಿನಂತಿ: ಲಭ್ಯವಿರುವ ಮಾಹಿತಿಯ ಪ್ರಕಾರ, 18 ಭಾರತೀಯ ಪ್ರಜೆಗಳು ರಷ್ಯಾದ ಸಶಸ್ತ್ರ ಪಡೆಗಳಲ್ಲಿ ಉಳಿದಿದ್ದಾರೆ. ಅವರಲ್ಲಿ 16 ವ್ಯಕ್ತಿಗಳು ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ. ರಷ್ಯಾದ ಸಶಸ್ತ್ರ ಪಡೆಗಳಲ್ಲಿ ಉಳಿದಿರುವ ಭಾರತೀಯರ ಬಗ್ಗೆ ಮಾಹಿತಿ ಒದಗಿಸಲು ಮತ್ತು ಅವರ ಸುರಕ್ಷತೆ, ಯೋಗಕ್ಷೇಮ ಮತ್ತು ಆರಂಭಿಕ ಬಿಡುಗಡೆಯನ್ನು ಖಚಿತಪಡಿಸಿಕೊಳ್ಳಲು ರಷ್ಯಾದ ಅಧಿಕಾರಿಗಳಿಗೆ ವಿನಂತಿಸಲಾಗಿದೆ ಎಂದು ಕೀರ್ತಿ ವರ್ಧನ್ ಸಿಂಗ್ ತಿಳಿಸಿದರು.
ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ಮಾಸ್ಕೋದಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಈ ವಿಷಯಗಳ ಕುರಿತು ವಿವಿಧ ಹಂತಗಳಲ್ಲಿ ಸಂಬಂಧಿತ ರಷ್ಯಾದ ಅಧಿಕಾರಿಗಳೊಂದಿಗೆ ತೊಡಗಿಸಿಕೊಂಡಿದೆ. ರಷ್ಯಾದ ಸಶಸ್ತ್ರ ಪಡೆಗಳಲ್ಲಿ ತಮ್ಮ ಸೇವೆಯನ್ನು ಸ್ಥಗಿತಗೊಳಿಸಿದ ನಂತರ, ರಷ್ಯಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿಗಳು ಈ ಹಿಂದೆ ಭಾರತೀಯ ಪ್ರಜೆಗಳಿಗೆ ಭಾರತಕ್ಕೆ ಮರಳಲು ಪ್ರಯಾಣ ದಾಖಲೆಗಳನ್ನು ಸುಗಮಗೊಳಿಸುವುದು ಮತ್ತು ಅಗತ್ಯ ಇರುವಲ್ಲೆಲ್ಲಾ ವಿಮಾನ ಟಿಕೆಟ್‌ಗಳನ್ನು ಒದಗಿಸುವುದು ಸೇರಿದಂತೆ ಎಲ್ಲಾ ಅಗತ್ಯಗಳನ್ನು ನೀಡಿದೆ ಎಂದು ಕೇಂದ್ರ ಸಚಿವರು ಸಮರ್ಥಿಸಿಕೊಂಡರು.
ರಷ್ಯಾದ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸುವುದನ್ನು ನಿಲ್ಲಿಸಿರುವ 97 ಭಾರತೀಯ ಪ್ರಜೆಗಳನ್ನು ಯಾವ ರಾಜ್ಯದಿಂದ ಬಂದವರು ಎಂಬುದರ ವಿವರಗಳನ್ನು ಸಹ ಅವರು ಹಂಚಿಕೊಂಡರು.
ಇದನ್ನೂ ಓದಿ: ಅಕ್ರಮವಾಗಿ ಅಮೆರಿಕದಲ್ಲಿದ್ದ ಭಾರತೀಯರ ಗಡಿಪಾರು: ಮಧ್ಯಾಹ್ನ ಅಮೃತಸರಕ್ಕೆ ಮರಳಲಿರುವ 205 ಮಂದಿ