ಟೆಲ್ ಅವೀವ್ : ರಂಜಾನ್ ಸಮಯದಲ್ಲಿ ಗಾಜಾದಲ್ಲಿನ ಯುದ್ಧ ಬಿಕ್ಕಟ್ಟನ್ನು ಮತ್ತಷ್ಟು ಜಟಿಲಗೊಳಿಸಲು ಹಮಾಸ್ ಪ್ರಯತ್ನಿಸುತ್ತಿರುವುದರಿಂದ ಅಮೆರಿಕ, ಕತಾರ್ ಮತ್ತು ಈಜಿಪ್ಟ್ ದೇಶಗಳ ಮಧ್ಯಸ್ಥಿಕೆಯಲ್ಲಿ ನಡೆಯುತ್ತಿರುವ ಕದನ ವಿರಾಮ ಮಾತುಕತೆಗಳಲ್ಲಿ ಯಾವುದೇ ಪ್ರಗತಿಯಾಗುತ್ತಿಲ್ಲ ಎಂದು ಇಸ್ರೇಲ್ ಗೂಢಚಾರ ಸಂಸ್ಥೆ ಮೊಸ್ಸಾದ್ ಆರೋಪಿಸಿದೆ.
ಮೊಸ್ಸಾದ್ ಮುಖ್ಯಸ್ಥ ಡೇವಿಡ್ ಬಾರ್ನಿಯಾ ಇತ್ತೀಚೆಗೆ ಜೋರ್ಡಾನ್ನ ಅಮ್ಮಾನ್ನಲ್ಲಿ ಕೇಂದ್ರ ಗುಪ್ತಚರ ಸಂಸ್ಥೆ (ಸಿಐಎ) ಮುಖ್ಯಸ್ಥ ವಿಲಿಯಂ ಬರ್ನ್ಸ್ ಅವರನ್ನು ಭೇಟಿಯಾಗಿದ್ದರು ಎಂದು ಇಸ್ರೇಲ್ ಪ್ರಧಾನಿ ಕಚೇರಿ ಶನಿವಾರ ತಡರಾತ್ರಿ ಹೇಳಿಕೆಯಲ್ಲಿ ತಿಳಿಸಿದೆ. ಗಾಜಾ ಪಟ್ಟಿಯಲ್ಲಿ ಹಮಾಸ್ ಮತ್ತಷ್ಟು ಉದ್ವಿಗ್ನತೆಯನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದೆ ಮತ್ತು ಆ ಮೂಲಕ ಅಲ್ಲಿನ ಪ್ಯಾಲೆಸ್ಟೈನಿಯರ ಜೀವನವನ್ನು ಇನ್ನಷ್ಟು ದುರ್ಭರಗೊಳಿಸಲು ಅದು ಯತ್ನಿಸುತ್ತಿದೆ ಎಂಬ ಬಗ್ಗೆ ಮೊಸ್ಸಾದ್ ಮುಖ್ಯಸ್ಥರು ಸಿಐಎ ಮುಖ್ಯಸ್ಥರಿಗೆ ಮಾಹಿತಿ ನೀಡಿದ್ದಾರೆ ಎಂದು ಇಸ್ರೇಲ್ ಪ್ರಧಾನಿ ಕಚೇರಿ ಹೇಳಿದೆ.
ಆದಾಗ್ಯೂ ಉದ್ವಿಗ್ನತೆ ಹೆಚ್ಚಾಗದಂತೆ ತಡೆಗಟ್ಟಲು ಎಲ್ಲಾ ಪ್ರಯತ್ನ ಮಾಡಲಾಗುತ್ತಿದೆ ಮತ್ತು ಕದನ ವಿರಾಮ ಒಪ್ಪಂದ ಮೂಡಿಸಲು ಮಧ್ಯವರ್ತಿಗಳು ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.