ಬಳ್ಳಾರಿ: ಶಾಸಕ ಜನಾರ್ದನ ರೆಡ್ಡಿ ಹಾಗೂ ಮಾಜಿ ಸಚಿವ ಬಿ.ಶ್ರೀರಾಮುಲು ನಡುವೆ ಅಸಮಾಧಾನ ಬಹಿರಂಗಗೊಂಡ ಬೆನ್ನಲ್ಲೇ, ಬಿಜೆಪಿ ಹೈಕಮಾಂಡ್ ಮಧ್ಯ ಪ್ರವೇಶಿಸಿದೆ. ಶ್ರೀರಾಮುಲು ಅವರಿಗೆ ಬಿಜೆಪಿ ರಾಷ್ಷ್ರಾಧ್ಯಕ್ಷ ಜೆ.ಪಿ.ನಡ್ಡಾ ಕರೆ ಮಾಡಿ ಸಮಾಧಾನಪಡಿಸಿದ್ದಾರೆ. ಅಲ್ಲದೇ, ದೆಹಲಿಗೆ ಬರುವಂತೆ ಸೂಚಿಸಿದ್ದಾರೆ.
ತಮ್ಮ ಮೇಲೆ ಶಾಸಕ ಜನಾರ್ದನ ರೆಡ್ಡಿ ಮಾಡಿರುವ ಆರೋಪಗಳ ಬಗ್ಗೆ ಸ್ಪಷ್ಟನೆ ನೀಡಲು ಬಿ.ಶ್ರೀರಾಮುಲು ಬಳ್ಳಾರಿಯಲ್ಲಿ ಸುದ್ದಿಗೋಷ್ಠಿ ನಡೆಸುತ್ತಿರುವ ಸಂದರ್ಭದಲ್ಲೇ ನಡ್ಡಾ ಅವರಿಂದ ಫೋನ್ ಕರೆ ಬಂದಿತ್ತು. ಈ ವೇಳೆ ಮಾತನಾಡಿದ ಶ್ರೀರಾಮುಲು ಬಳಿ ನಡ್ಡಾ ಅವರು ನಿನ್ನೆ ಬೆಂಗಳೂರು ಕೋರ್ ಕಮಿಟಿ ಸಭೆಯಲ್ಲಿ ನಡೆದ ಘಟನೆಯ ಬಗ್ಗೆ ಮಾಹಿತಿ ಪಡೆದರು. ರಾಮುಲು ಅವರ ಜೊತೆ ಕೆಲಕಾಲ ಮಾತನಾಡಿದರು.
ಇದನ್ನೂ ಓದಿ: ಶ್ರೀರಾಮುಲು ವಿರುದ್ಧ ಛಾಡಿ ಹೇಳಿಲ್ಲ, ಅವರು ಶತ್ರುಗಳ ಜೊತೆ ಕೈ ಜೋಡಿಸಿರುವುದು ವಿಪರ್ಯಾಸ: ಜನಾರ್ದನ ರೆಡ್ಡಿ
ಈ ವೇಳೆ ತಮ್ಮ ಮಾತಿನಂತೆ ನಡೆದುಕೊಳ್ಳಲು ಒಪ್ಪಿದ ರಾಮುಲು ಅವರಿಗೆ ದೆಹಲಿಗೆ ಬನ್ನಿ, ಕೂತು ಮಾತಾಡೋಣ ಎಂದು ನಡ್ಡಾ ತಿಳಿಸಿದರು. ಇದೇ ವೇಳೆ ಕೋರ್ ಕಮಿಟಿ ಸಭೆಯಲ್ಲಿನ ವಿದ್ಯಮಾನದ ಬಗ್ಗೆ ಶ್ರೀರಾಮುಲು ವಿವರಣೆ ನೀಡಿದರು. ಈ ವೇಳೆ ನಡ್ಡಾ ಅವರ ಮಾತಿಗೆ ಒಪ್ಪಿಗೆ ಸೂಚಿಸಿದ ಶ್ರೀರಾಮುಲು ನಡೆದ ಎಲ್ಲ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡುವುದಾಗಿ ತಿಳಿಸಿದರು.
ನಡ್ಡಾ ಅವರೊಂದಿಗಿನ ಮಾತುಕತೆ ಬಳಿಕ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಶ್ರೀರಾಮುಲು, ''ದೆಹಲಿಗೆ ಯಾವಾಗ ಬರುತ್ತೀರಿ ಅಂತ ಕೇಳಿದರು. ಮುಂದಿನ ವಾರ ಬರುವುದಾಗಿ ಹೇಳಿದ್ದೇನೆ'' ಎಂದರು.
ಇದನ್ನೂ ಓದಿ: ನಾನು ಯಾರದೋ ಒಬ್ಬರ ಆಶೀರ್ವಾದದಿಂದ ಬೆಳೆದಿಲ್ಲ, ನಮ್ಮದೂ ರಾಜಕೀಯ ಕುಟುಂಬ: ಜನಾರ್ದನ ರೆಡ್ಡಿ ಹೇಳಿಕೆ ಸರಿಯಲ್ಲ: ಶ್ರೀರಾಮುಲು