ಜಮ್ಮು/ಶ್ರೀನಗರ: ಕಾಶ್ಮೀರಕ್ಕೆ ಸಂಚರಿಸಲಿರುವ ಬಹುನಿರೀಕ್ಷಿತ ಮೊದಲ ರೈಲನ್ನು ಪ್ರಧಾನಿ ನರೇಂದ್ರ ಮೋದಿ ಫೆಬ್ರವರಿ ಮೊದಲ ಅಥವಾ ಎರಡನೇ ವಾರದಲ್ಲಿ ಉದ್ಘಾಟಿಸಲಿದ್ದಾರೆ ಎಂದು ಭಾರತೀಯ ರೈಲ್ವೆ ಮೂಲಗಳು ಗುರುವಾರ ಈಟಿವಿ ಭಾರತಕ್ಕೆ ತಿಳಿಸಿದೆ.
ಪ್ರಧಾನಿ ಕಚೇರಿಯಿಂದ ರೈಲ್ವೆ ಇಲಾಖೆಗೆ ದೃಢೀಕರಣದ ಅಗತ್ಯ ಇರುವುದರಿಂದ ಉದ್ಘಾಟನೆಗೆ ಅಂತಿಮ ದಿನಾಂಕವನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ ಎಂದು ಅವರು ತಿಳಿಸಿದರು. ಪ್ರಧಾನಿ ಮೋದಿ ಕತ್ರಾದಿಂದ ರೈಲಿಗೆ ಹಸಿರು ನಿಶಾನೆ ತೋರಲಿದ್ದಾರೆ ಎಂದು ಮೂಲಗಳು ದೃಢಪಡಿಸಿವೆ.
ಸೇತುವೆ ಉದ್ಘಾಟನೆ ಬಳಿಕ ಮೋದಿ ಭಾಷಣ: ಉದ್ಘಾಟನಾ ದಿನದಂದು ಪ್ರಧಾನಿ ಜಮ್ಮು ವಿಮಾನ ನಿಲ್ದಾಣದಲ್ಲಿ ಇಳಿದು, ವಿಶ್ವದ ಅತೀ ಎತ್ತರದ ರೈಲ್ವೆ ಸೇತುವೆಯಾದ ಚಿನಾಬ್ ಸೇತುವೆಗೆ ಹೆಲಿಕಾಫ್ಟರ್ ಮೂಲಕ ತೆರಳಲಿದ್ದಾರೆ. ನಂತರ ಅಲ್ಲಿಂದ ಕತ್ರಾ ರೈಲು ನಿಲ್ದಾಣಕ್ಕೆ ವಿಮಾನದ ಮೂಲಕ ತೆರಳಲಿದ್ದಾರೆ. ಅಲ್ಲಿ ಕಾಶ್ಮೀರಕ್ಕೆ ವಂದೇ ಭಾರತ್ ರೈಲಿಗೆ ಹಸಿರು ನಿಶಾನೆ ತೋರಲಿದ್ದಾರೆ. ಪ್ರಧಾನಿ ಮೋದಿ ರೈಲಿಗೆ ಹಸಿರು ನಿಶಾನೆ ತೋರಿದ ಬಳಿಕ ಕತ್ರಾದ ಕ್ರೀಡಾಂಗಣ ಹಾಗೂ ಜಮ್ಮುವಿನ ಮೌಲಾನಾ ಆಜಾದ್ ಕ್ರೀಡಾಂಗಣದಲ್ಲಿ ರ‍್ಯಾಲಿ ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕತ್ರಾ ಮತ್ತು ಶ್ರೀನಗರ ನಡುವಿನ ರೈಲು ಸೇವೆಯ ಔಪಚಾರಿಕ ಉದ್ಘಾಟನೆ ನಂತರ, ಜನವರಿ 24 ಮತ್ತು 25 ರಂದು ವಂದೇ ಭಾರತ್ ರೈಲಿನ ಪ್ರಾಯೋಗಿಕ ಸಂಚಾರ ನಡೆಯಲಿದೆ.
ಕಾಶ್ಮೀರಕ್ಕೆ ಬಹುನಿರೀಕ್ಷಿತ ನೇರ ರೈಲು ಸೇವೆ ಎಲ್ಲ ಅಡೆತಡೆಗಳನ್ನು ದಾಟಿದ್ದು, ಉತ್ತರ ರೈಲ್ವೆಯ ರೈಲ್ವೆ ಸುರಕ್ಷತಾ ಆಯುಕ್ತ (CRS) ದಿನೇಶ್ ಚಂದ್ ದೇಶ್ವಾಲ್ ಅವರು ಗಂಟೆಗೆ ಗರಿಷ್ಠ 85 ಕಿ.ಮೀ. ವೇಗದಲ್ಲಿ ರೈಲು ಓಡಿಸಲು ಹಸಿರು ನಿಶಾನೆ ತೋರಿಸಿದ್ದಾರೆ. ರೈಲ್ವೆ ಸುರಕ್ಷತಾ ಆಯುಕ್ತ ಮೇಲ್ವಿಚಾರಣೆ ಮಾಡಿದ ರೈಲಿನ ಅಂತಿಮ ಪ್ರಾಯೋಗಿಕ ಓಟದ ಸಮಯದಲ್ಲಿ ರೈಲು ಗಂಟೆಗೆ 110 ಕಿ.ಮೀ. ವೇಗದಲ್ಲಿ ಚಲಿಸಿತ್ತು. ಕಾಶ್ಮೀರಕ್ಕೆ ನೇರ ರೈಲು ಸೇವೆಯಿಂದ ಜಮ್ಮು ಮತ್ತು ಕಾಶ್ಮೀರಕ್ಕೆ ಹೆಚ್ಚು ಪ್ರಯೋಜನವಾಗಲಿದೆ. ಜೊತೆಗೆ ಕಾಶ್ಮೀರ ಕಣಿವೆಯ ವ್ಯಾಪಾರ ಮತ್ತು ಪ್ರವಾಸೋದ್ಯಮವೂ ಹೆಚ್ಚಾಗಲಿದೆ. ಜಮ್ಮು - ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಮೂಲಕ ಕಣಿವೆಗೆ ಸಾಗಿಸಲಾಗುತ್ತಿರುವ ಸರಕು ಮತ್ತು ಇಂಧನವನ್ನು ಸರಕು ರೈಲುಗಳಲ್ಲಿ ಸಾಗಿಸಲಾಗುವುದು ಮತ್ತು ಸರಕುಗಳ ಬೆಲೆ ಸಹ ಕಡಿಮೆಯಾಗಲಿದೆ.
ಜಮ್ಮು ಕಾಶ್ಮೀರ ರೈಲು ಇತಿಹಾಸ: 1890 ಸ್ವಾತಂತ್ರ್ಯ ಪೂರ್ವದಲ್ಲಿ ಜಮ್ಮು ಹಾಗೂ ಸಿಯಾಲ್ಕೋಟ್(ಈಗ ಪಾಕಿಸ್ತಾನದಲ್ಲಿದೆ) ನಡುವೆ ರೈಲು ಸೇವೆಯನ್ನು ಪ್ರಾರಂಭಿಸಲಾಯಿತು. 1965ರ ಭಾರತ ಪಾಕಿಸ್ತಾನ ನಡುವಿನ ಯುದ್ಧದ ನಂತರವೇ ಪಂಜಾಬ್ನಿಂದ ಜಮ್ಮುವಿಗೆ ನೇರ ರೈಲು ತರುವ ಕೆಲಸ ಪ್ರಾರಂಭವಾಗಿತ್ತು. 1972ರಲ್ಲಿ ಮೊದಲ ರೈಲು ಶ್ರೀನಗರ ಎಕ್ಸ್ಪ್ರೆಸ್ (ಈಗ ಝೀಲಂ ಎಕ್ಸ್ಪ್ರೆಸ್) ಜಮ್ಮುವಿಗೆ ತಲುಪಿತ್ತು. ಅದರ ನಂತರದಲ್ಲಿ ಇತರ ರೈಲುಗಳು ಕೂಡ ಜಮ್ಮುವಿಗೆ ಬಂದವು.
1981ರಲ್ಲಿ ಜಮ್ಮುವಿನಿಂದ ಉಧಮ್‌ಪುರಕ್ಕೆ ರೈಲು ಯೋಜನೆಯನ್ನು ಕೈಗೆತ್ತಿಕೊಳ್ಳಲಾಯಿತು. 1983ರ ಏಪ್ರಿಲ್ 14ರಂದು ಅಂದಿನ ಪ್ರಧಾನಿ ಇಂದಿರಾ ಗಾಂಧಿ ಯೋಜನೆ ಅಡಿಪಾಯ ಹಾಕಿದರು. ಹಲವಾರು ಗಡುವುಗಳ ನಂತರ, 2005ರ ಏಪ್ರಿಲ್ 13 ರಂದು, ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಅವರು ಉಧಮ್‌ಪುರ ರೈಲು ಸೇವೆ ಉದ್ಘಾಟಿಸಿದರು.
2009 ಅಕ್ಟೋಬರ್ನಲ್ಲಿ, ಕಾಶ್ಮೀರದಲ್ಲಿ ವಿವಿಧ ವಿಭಾಗಗಳ ಸ್ಥಳೀಯ ರೈಲು ಸೇವೆಯನ್ನು ಪ್ರಾರಂಭಿಸಲಾಯಿತು. 2014ರ ಜುಲೈ 4ರಂದು, ಮಾತಾ ವೈಷ್ಣೋದೇವಿ ದೇವಾಲಯದ ಮೂಲ ಶಿಬಿರವಾದ ಕತ್ರಾಗೆ ನೇರ ರೈಲು ಸೇವೆ ಸಹ ಪ್ರಾರಂಭಿಸಲಾಯಿತು. ಅದನ್ನೂ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು.