ವಿಶ್ವಸಂಸ್ಥೆ:ತನ್ನ ದೇಶದಲ್ಲಿ ನಕಲಿ ಚುನಾವಣೆಗಳನ್ನು ನಡೆಸುವ ಪಾಕಿಸ್ತಾನ, ಕಾಶ್ಮೀರದಲ್ಲಿ ಜನತೆ ಮುಕ್ತವಾಗಿ ಮತ ಚಲಾಯಿಸಿ ತಮ್ಮ ನಾಯಕರನ್ನು ಆಯ್ಕೆ ಮಾಡಿರುವುದನ್ನು ನೋಡಿ ಇಸ್ಲಾಮಾಬಾದ್ಗೆ ನಿರಾಸೆಯಾಗಿದೆ ಎಂದು ಭಾರತ ಹೇಳಿದೆ.
"ನಕಲಿ ಚುನಾವಣೆಗಳನ್ನು ನಡೆಸುವುದು, ವಿರೋಧ ಪಕ್ಷದ ನಾಯಕರನ್ನು ಬಂಧಿಸುವುದು ಮತ್ತು ರಾಜಕೀಯ ವಿರೋಧೀಗಳ ಧ್ವನಿಗಳನ್ನು ಹತ್ತಿಕ್ಕುವುದು ಪಾಕಿಸ್ತಾನಕ್ಕೆ ಅಭ್ಯಾಸವಾಗಿದೆ. ಕಾಶ್ಮೀರದಲ್ಲಿ ನಿಜವಾದ ಪ್ರಜಾಪ್ರಭುತ್ವ ಸ್ಥಾಪನೆಯಾಗಿರುವುದನ್ನು ನೋಡಿ ಪಾಕಿಸ್ತಾನ ನಿರಾಶೆಗೊಳ್ಳುವುದು ಸಹಜ" ಎಂದು ಭಾರತದ ವಿಶ್ವಸಂಸ್ಥೆ ಮಿಷನ್ನ ಸಲಹೆಗಾರ ಎಲ್ಡೋಸ್ ಮ್ಯಾಥ್ಯೂ ಪುನ್ನೂಸ್ ಸೋಮವಾರ ಹೇಳಿದ್ದಾರೆ.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ವಿಶೇಷ ರಾಜಕೀಯ ಮತ್ತು ವಸಾಹತು ವಿಮೋಚನಾ ಸಮಿತಿ ಸಭೆಯಲ್ಲಿ ಪಾಕಿಸ್ತಾನದ ಖಾಯಂ ಪ್ರತಿನಿಧಿ ಮುನೀರ್ ಅಕ್ರಮ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, "ಆ ದೇಶದ ಕಳಂಕಿತ ಪ್ರಜಾಪ್ರಭುತ್ವದ ಇತಿಹಾಸವನ್ನು ನೋಡಿದರೆ, ಪಾಕಿಸ್ತಾನವು ನಿಜವಾದ ಪ್ರಜಾಪ್ರಭುತ್ವ ಪ್ರಕ್ರಿಯೆಗಳನ್ನು ಮೋಸವೆಂದು ಪರಿಗಣಿಸುತ್ತದೆ" ಎಂದು ಹೇಳಿದರು.
"ಕಳೆದ ವಾರವಷ್ಟೇ ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣಾ ಫಲಿತಾಂಶಗಳನ್ನು ಘೋಷಿಸಲಾಗಿದೆ. ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದ ಲಕ್ಷಾಂತರ ಮತದಾರರು ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದ್ದಾರೆ ಮತ್ತು ಸಾಂವಿಧಾನಿಕ ಚೌಕಟ್ಟು ಮತ್ತು ಸಾರ್ವತ್ರಿಕ ವಯಸ್ಕ ಮತದಾನ ಪ್ರಕ್ರಿಯೆಯ ಪ್ರಕಾರ ತಮ್ಮ ನಾಯಕತ್ವವನ್ನು ಆಯ್ಕೆ ಮಾಡಿದ್ದಾರೆ. ಈ ಪ್ರಕ್ರಿಯೆಗಳು ಪಾಕಿಸ್ತಾನಕ್ಕೆ ಖಂಡಿತವಾಗಿಯೂ ಅಪರಿಚಿತ" ಎಂದು ಅವರು ಹೇಳಿದರು.