ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿರುವ ಕನ್ನಡ ಚಿತ್ರರಂಗದ ಹಿರಿಯ ನಟ ಅನಂತನಾಗ್ ಅವರು, ಈ ಗೌರವವನ್ನು ಕರ್ನಾಟಕದ ಜನರಿಗೆ ಅರ್ಪಣೆ ಮಾಡುವುದಾಗಿ ತಿಳಿಸಿದ್ದಾರೆ.
ಈ ಬಗ್ಗೆ ಅನಂತನಾಗ್ ಅವರು ಅಭಿಪ್ರಾಯ ಹಂಚಿಕೊಂಡಿರುವ ಸಂದರ್ಶನದ ವಿಡಿಯೋವನ್ನು ಪಿಟಿಐ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿದೆ.
"ನನಗೆ ಸಿಕ್ಕ ಪದ್ಮವಿಭೂಷಣ ಪ್ರಶಸ್ತಿಯನ್ನು ಕನ್ನಡ ಸಿನಿಮಾಗಳನ್ನು ಪ್ರೀತಿಸುವ ಕನ್ನಡಿಗರಿಗೆ ಅರ್ಪಿಸುತ್ತೇನೆ. ಕನ್ನಡ ಸಿನಿಮಾರಂಗದಲ್ಲಿ 50 ವರ್ಷಗಳ ಪಯಣ ನನ್ನದು. ಅದಕ್ಕಿಂತ ಹಿಂದೆ ನಾಲ್ಕರಿಂದ ಐದು ವರ್ಷಗಳ ಕಾಲ ರಂಗಭೂಮಿಯಲ್ಲಿದ್ದೆ. ನಂತರ ನಾನು ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟೆ, ಆಗ ಆರಂಭವಾದ ಪಯಣ ಈಗಲೂ ಮುಂದುವರಿದಿದೆ" ಎಂದರು.
VIDEO | Karnataka: Here’s what actor Anant Nag said on his name being announced for the Padma Bhushan award.
— Press Trust of India (@PTI_News) January 26, 2025
“Talking about Padma Bhushan which has come to me…My journey has been for 50 years in cinema, earlier for five years I was in theaters. After I was welcomed to the… pic.twitter.com/EBev3oofT1
"ಮೂರು ವರ್ಷಗಳ ಹಿಂದೆ ಯಾವಾಗ ಪ್ರಧಾನಿ ಮೋದಿ ಇನ್ನು ಮುಂದೆ ಪದ್ಮ ಪ್ರಶಸ್ತಿಗಳನ್ನು ನೀಡುವ ಬಗ್ಗೆ ಸಾರ್ವಜನಿಕರ ಹೆಚ್ಚಿನ ಭಾಗವಹಿಸುವಿಕೆ ಇರಬೇಕು ಎಂದು ಘೋಷಿಸಿದರೋ, ಅದಕ್ಕೆ ನನ್ನ ಕನ್ನಡ ಜನರು ತುಂಬಾನೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದರು. ಕಳೆದ ಮೂರು ವರ್ಷಗಳಿಂದ ಕನ್ನಡಿಗರು ನನ್ನ ಹೆಸರನ್ನು ಪ್ರಶಸ್ತಿಗೆ ಸೂಚಿಸುತ್ತಾ ಬಂದಿದ್ದಾರೆ. ಕೊನೆಗೂ ಆ ಗೌರವ ನನ್ನ ಪಾಲಿಗೆ ಬಂದಿದೆ. ತುಂಬಾ ಸಂತಸವಾಗಿದ್ದು, ಈ ಗೌರವವನ್ನು ನಾನು ಕರ್ನಾಟಕದ ಜನರಿಗೆ, ಕನ್ನಡ ನಾಡಿನ ಚಿತ್ರರಸಿಕರಿಗೆ ಅರ್ಪಿಸುತ್ತೇನೆ" ಎಂದು ಹೇಳಿದರು.
ಗಣರಾಜ್ಯೋತ್ಸವ ಮುನ್ನಾ ದಿನ ಕೇಂದ್ರ ಸರ್ಕಾರ 2025ನೇ ಸಾಲಿನ ಪದ್ಮ ಪ್ರಶಸ್ತಿಗಳನ್ನು ಪ್ರಕಟಿಸಿತು. ಒಟ್ಟು 139 ಗಣ್ಯರಿಗೆ ಪದ್ಮ ಪ್ರಶಸ್ತಿಗಳು ಘೋಷಣೆಯಾಗಿದ್ದು, ಕರ್ನಾಟಕದ 9 ಮಂದಿಗೆ ಈ ಗೌರವ ಒಲಿದು ಬಂದಿದೆ. ಈ ಸಾಲಿನಲ್ಲಿ ಒಟ್ಟಾರೆಯಾಗಿ 7 ಪದ್ಮವಿಭೂಷಣ, 19 ಪದ್ಮಭೂಷಣ ಹಾಗೂ 113 ಗಣ್ಯರಿಗೆ ಪದ್ಮಶ್ರೀ ಪ್ರಶಸ್ತಿ ಘೋಷಣೆಯಾಗಿದೆ. ಅದರಲ್ಲಿ 1 ಪದ್ಮವಿಭೂಷಣ, 2 ಪದ್ಮಭೂಷಣ ಹಾಗೂ 6 ಪದ್ಮಶ್ರೀ ಗೌರವ ಕರ್ನಾಟಕದ ಪಾಲಾಗಿವೆ.
ಕಲೆ ವಿಭಾಗದಲ್ಲಿ ಲಕ್ಷ್ಮೀ ನಾರಾಯಣ ಸುಬ್ರಮಣ್ಯಂ ಅವರಿಗೆ ಪದ್ಮವಿಭೂಷಣ, ಸಾಹಿತ್ಯ ಮತ್ತು ಶಿಕ್ಷಣ ಹಾಗೂ ಮಾಧ್ಯಮ ಕ್ಷೇತ್ರದಲ್ಲಿ ಸೂರ್ಯ ಪ್ರಕಾಶ ಮತ್ತು ಕಲಾ ಕ್ಷೇತ್ರದಲ್ಲಿ ಅನಂತನಾಗ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ಪ್ರಕಟವಾಗಿದೆ.
ಉಳಿದಂತೆ ಕಲಾ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಿರುವ ಭೀಮವ್ವ ದೊಡ್ಡ ಬಾಳಪ್ಪ ಶಿಳ್ಳೇಕ್ಯಾತರ, ಹಾಸನ್ ರಘು, ವೆಂಕಪ್ಪ ಅಂಬಾಜಿ ಸುಗುತೇಕರ್, ರಿಕಿ ಕೇಜ್ ಅವರಿಗೆ, ವಾಣಿಜ್ಯ ಮತ್ತು ಉದ್ಯಮ ವಿಭಾಗದಲ್ಲಿ ಪ್ರಶಾಂತ್ ಪ್ರಕಾಶ್, ವೈದ್ಯಕೀಯ ಕ್ಷೇತ್ರದಲ್ಲಿ ವಿಜಯಲಕ್ಷ್ಮಿ ದೇಶಮಾನೆ ಅವರಿಗೆ ಪದ್ಮಶ್ರೀ ಪ್ರಶಸ್ತಿ ಪ್ರಕಟವಾಗಿದೆ.
ಇದನ್ನೂ ಓದಿ: ವಿಶ್ವಕ್ಕೆ ತೊಗಲುಗೊಂಬೆಯಾಟ ಪರಿಚಯಿಸಿದ 96ರ ಭೀಮವ್ವಳಿಗೆ ’ಪದ್ಮ ಶ್ರೀ’ ಗರಿ: ಗ್ರಾಮೀಣ ಕಲೆಗೆ ಪ್ರಶಸ್ತಿಯ ಹಿರಿಮೆ!