ಬೆಳಗಾವಿ : ಈ ಅವಧಿಯಲ್ಲಿ ನಮಗೆಲ್ಲ ಒಂದು ವರ್ಷ ಜಾಸ್ತಿ ಅವಕಾಶ ಸಿಗುತ್ತದೆ. ಒನ್ ನೇಶನ್-ಒನ್ ಎಲೆಕ್ಷನ್ ಜಾರಿಗೆ ಬಂದರೆ ಆರು ವರ್ಷ ನಾವು ಶಾಸಕರಾಗಿ ಇರಬಹುದು ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಬೆಳಗಾವಿ ಜಿಲ್ಲಾ ಕ್ರೀಡಾಂಗಣದಲ್ಲಿ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ಅವಧಿ ಪೂರ್ವ ಚುನಾವಣೆ ಬರುತ್ತದೆ ಎಂಬ ಬಿಜೆಪಿ ನಾಯಕರ ಹೇಳಿಕೆಗೆ, ಕೇಂದ್ರ ಸರ್ಕಾರ ಒನ್ ನೇಶನ್-ಒನ್ ಎಲೆಕ್ಷನ್ ಜಾರಿಗೆ ತಂದರೆ ಹೆಚ್ಚುವರಿಯಾಗಿ ಒಂದು ವರ್ಷ ಶಾಸಕರಾಗಿ ಇರಬಹುದು ಎಂದರು.
ನಾವು ಬೆಂಬಲ ಕೊಡಲಿ, ಬಿಡಲಿ. ಕೇಂದ್ರದಲ್ಲಿ ಅವರಿಗೆ ಬಹುಮತ ಇದೆ. ಹಾಗಾಗಿ, ಅವರು ಮಾಡುತ್ತಾರೆ. ಅದರಿಂದ ಆರು ವರ್ಷ ನಾವು ಶಾಸಕರಾಗಿ ಇರುತ್ತೇವೆ ಎಂದು ತಿರುಗೇಟು ಕೊಟ್ಟರು.
ಮೈಕ್ರೋ ಫೈನಾನ್ಸ್ ವಿಚಾರದಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಅತೀ ಹೆಚ್ಚು ಪ್ರಕರಣಗಳು ಬೆಳಕಿಗೆ ಬಂದಿರುವ ಬಗ್ಗೆ ಪ್ರಾಥಮಿಕವಾಗಿ ನಮ್ಮ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಒಂದು ವರದಿ ನೀಡುವಂತೆ ತಿಳಿಸಿದ್ದೇವೆ. ಈ ವಾರದಲ್ಲಿ ಜಿಲ್ಲಾಧಿಕಾರಿ, ಪೊಲೀಸ್ ಆಯುಕ್ತರ ಜೊತೆಗೆ ಸಭೆ ಮಾಡುತ್ತೇವೆ. ಹೆಚ್ಚಿನ ಹಣದ ವಹಿವಾಟು ಆಗಿರುವ ಹಿನ್ನೆಲೆಯಲ್ಲಿ ಪ್ರಕರಣ ಸಿಒಡಿಗೆ ಕೊಡಬೇಕಾಗುತ್ತದೆ. ಈಗಾಗಲೇ ಐದಾರು ಪ್ರಕರಣಗಳು ದಾಖಲಾಗಿವೆ. ಪೊಲೀಸರಿಂದ ವರದಿ ಬಂದ ಬಳಿಕ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದರು.
ಮುಖ್ಯವಾಗಿ ದಡ್ಡಿ ಸೇರಿ ಮೂರು ಜನರನ್ನು ಗುರುತಿಸಲಾಗಿದೆ. ಕಾನೂನಾತ್ಮಕವಾಗಿ ಪರಿಶೀಲಿಸಬೇಕಾಗುತ್ತದೆ. ಹೆಚ್ಚು ಪ್ರಕರಣಗಳು ನಮ್ಮ ಯಮಕನಮರಡಿ ಕ್ಷೇತ್ರದಲ್ಲಿ ಆಗಿವೆ. ಅದೇ ರೀತಿ ಗೋಕಾಕ್, ಬೆಳಗಾವಿ, ಹುಕ್ಕೇರಿ, ಸವದತ್ತಿ, ಬೈಲಹೊಂಗಲ, ಖಾನಾಪುರ ತಾಲೂಕುಗಳಲ್ಲಿ ಕಂಡು ಬಂದಿವೆ. ಈ ಕುರಿತು ಸಂಬಂಧಿಸಿದವರು ಪೊಲೀಸ್ ಠಾಣೆಗೆ ದೂರು ನೀಡಿದರೆ ಕ್ರಮ ಕೈಗೊಳ್ಳಲಾಗುತ್ತದೆ. ಸಾಲಗಾರರಿಗೆ ತೊಂದರೆ ಕೊಟ್ಟರೆ ಕೇಸ್ ದಾಖಲಿಸುತ್ತೇವೆ ಎಂದು ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರು ಸೂಚನೆ ಕೊಟ್ಟಿದ್ದಾರೆ ಎಂದರು.
ನಿಯಮ ಬಾಹಿರವಾಗಿ ಸಾಲ ಕೊಟ್ಟಿರುವ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವರು, ಇದರಲ್ಲಿ ಯಾರ ಸಮಸ್ಯೆ ಇದೆ ಎಂದು ತಿಳಿದುಕೊಳ್ಳುವಂತೆ ಪೊಲೀಸರಿಗೆ ಸೂಚಿಸಿದ್ದೇವೆ. ಮಾಹಿತಿ ಸಿಕ್ಕ ತಕ್ಷಣ ನಮ್ಮ ಹಂತದಲ್ಲಿ ಮಾಡಬೇಕೋ ಅಥವಾ ಬೆಂಗಳೂರಿಗೆ ವರ್ಗಾವಣೆ ಮಾಡಬೇಕೋ ಎಂಬುದನ್ನು ಸಭೆ ಮಾಡಿ ತೀರ್ಮಾನಿಸುತ್ತೇವೆ ಎಂದು ಹೇಳಿದರು.
ಜಿಲ್ಲಾ ಕ್ರೀಡಾಂಗಣದ ಮೈದಾನ ಸಮತಟ್ಟು ಮಾಡಲು, ಕಾಂಪೌಂಡ್ ನಿರ್ಮಾಣಕ್ಕೆ ಕಳೆದ ವರ್ಷ 10 ಕೋಟಿ ರೂ. ನೀಡಿದ್ದೆವು. ಈ ಬಾರಿ ಮತ್ತೆ 10 ಕೋಟಿ ಕೊಡುತ್ತೇವೆ. ಈ ಅನುದಾನ ಬಜೆಟ್ನಲ್ಲಿ ಇಲ್ಲ. ಹಂತ ಹಂತವಾಗಿ ಕೊಡುತ್ತಲೇ ಇರುತ್ತೇವೆ. ಅದೇ ರೀತಿ ಗೋಕಾಕ್ನಲ್ಲಿ ರಾತ್ರಿ ಕ್ರಿಕೆಟ್ ಆಡಲು ಸರ್ಕಾರಿ ಮೈದಾನ ನಿರ್ಮಿಸುತ್ತಿದ್ದೇವೆ. ತಾಲೂಕು ಮಟ್ಟದಲ್ಲಿ ಇದು ಮೊದಲು. ಅದೇ ರೀತಿ ಲೋಳಸೂರು ಸೇತುವೆಗೆ 40 ಕೋಟಿ ರೂ. ನೀಡಿದ್ದೇವೆ. ಹಾಗಾಗಿ, ಎಲ್ಲೆಲ್ಲಿ ಅವಕಾಶ ಇದೆಯೋ ಅಲ್ಲೆಲ್ಲಾ ಅನುದಾನ ನೀಡುತ್ತಿದ್ದೇವೆ. ಅದೇ ರೀತಿ 100 ಕೋಟಿ ರೂ. ವಿಶೇಷ ಅನುದಾನ ಕೊಡುವ ಬಗ್ಗೆ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ ಎಂದರು.
ರಿಂಗ್ ರೋಡ್ ನಿರ್ಮಾಣಕ್ಕೆ ಯಾವುದೇ ಸಮಸ್ಯೆ ಇಲ್ಲ. ಇನ್ನೊಂದು ಬಾರಿ ಅಧಿಸೂಚನೆ ಹೊರಡಿಸುವಂತೆ ಹೈಕೋರ್ಟ್ ಹೇಳಿದೆ. 57 ಎಕರೆ ಭೂಮಿ ಸಂಬಂಧ 13 ಮಂದಿ ರೈತರು ಮಾತ್ರ ಕೋರ್ಟ್ಗೆ ಹೋಗಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸುವುದಾಗಿ ಹೇಳಿದ್ದಾರೆ ಎಂದರು.
ಬೆಲೆ ಏರಿಕೆ ಹಣ ಕಾಂಗ್ರೆಸ್ ಎಟಿಎಂ ಆಗಿ ಪರಿವರ್ತನೆ ಆಗಿದೆ ಎಂಬ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಆರೋಪಕ್ಕೆ ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳನ್ನು ಹೋಲಿಕೆ ಮಾಡಿದರೆ ಬಸ್, ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆ ಇದೆ. ಬೆಲೆ ಏರಿಕೆ ಮಾಡುವುದರಿಂದ ನಮ್ಮ ಸರ್ಕಾರದ ಖಜಾನೆಗೆ ದುಡ್ಡು ಬರುತ್ತದೆ. ಸರ್ಕಾರದ ಆರ್ಥಿಕತೆ ಸಬಲೀಕರಣಕ್ಕೆ ಅನುಕೂಲ ಆಗಲಿದೆ. ಕಳೆದ ಹತ್ತು ವರ್ಷಗಳಿಂದ ಬಸ್ ದರ ಏರಿಸಿರಲಿಲ್ಲ. ಹಾಗಾಗಿ, ಬೇರೆ ರಾಜ್ಯಗಳಿಗಿಂತ ಕಡಿಮೆ ದರ ನಿಗದಿ ಪಡಿಸಲಾಗಿದೆ ಎಂದು ಸಮರ್ಥಿಸಿಕೊಂಡರು.
ನೂತನ ಜಿಲ್ಲಾ ರಚನೆ ವಿಚಾರಕ್ಕೆ ಜನಗಣತಿ ಮುಗಿಯೋವರೆಗೆ ಹೊಸದಾಗಿ ಜಿಲ್ಲೆ, ತಾಲೂಕುಗಳ ರಚನೆ ಮಾಡುವಂತಿಲ್ಲ ಎಂಬ ಸೂಚನೆ ಬಂದಿದೆ. 2025ಕ್ಕೆ ಅದು ಮುಗಿಯುತ್ತದೆ. ಮುಂದಿನ ವರ್ಷ ನೋಡುತ್ತೇವೆ. ಮೊನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲೆ ಜಾತಿ ಗಣತಿ ವರದಿ ವಿಚಾರ ಚರ್ಚೆಗೆ ಬರಬೇಕಿತ್ತು. ಜ. 30ರಂದು ಸಂಪುಟ ಸಭೆ ಇದೆ. ಆಗ ಏನು ಮಾಡುತ್ತಾರೋ ಗೊತ್ತಿಲ್ಲ ಎಂದು ಹೇಳಿದರು.
ಬೆಳಗಾವಿ ನಗರದಲ್ಲಿ ಓವರ್ ಬ್ರಿಡ್ಜ್ ನಿರ್ಮಾಣ ಮಾಡುವುದಾಗಿ ಕೇಂದ್ರ ಸಚಿವ ನಿತೀನ್ ಗಡ್ಕರಿ ಅವರು ಘೋಷಿಸಿದ್ದರು. ಆದರೆ, ಸ್ಥಳೀಯ ಬಿಜೆಪಿ ನಾಯಕರ ವಿರೋಧದಿಂದ ಅದು ನೆನೆಗುದಿಗೆ ಬಿದ್ದಿದೆ. ನಾವು ಹಲವು ಬಾರಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಓವರ್ ಬ್ರಿಡ್ಜ್ ನಿರ್ಮಾಣ ಮಾಡುವುದಕ್ಕೆ ಕನಿಷ್ಠ 300 ಕೋಟಿ ರೂ. ಬೇಕಾಗಬಹುದು. ಹೀಗಾಗಿ ಕೇಂದ್ರ ಸರ್ಕಾರ ಸ್ಪಂದಿಸದಿದ್ದರೆ ವರ್ಷಕ್ಕೆ ನೂರು ಕೋಟಿ ರೂ. ಅನುದಾನ ಮೀಸಲಿಟ್ಟು ರಾಜ್ಯ ಸರ್ಕಾರದಿಂದಲೇ ಓವರ್ ಬ್ರಿಡ್ಜ್ ನಿರ್ಮಾಣ ಮಾಡುತ್ತೇವೆ ಎಂದರು.
ನಗರದಲ್ಲಿ ಹೊಸ ಬಡಾವಣೆ ಸರ್ಕಾರದಿಂದ ಮಾಡುವುದು ಕಷ್ಟ. ಕಾನೂನಾತ್ಮಕವಾಗಿ ಬಡಾವಣೆ ಮಾಡುವ ಖಾಸಗಿಯವರಿಗೆ ಸಹಕಾರ ಕೊಡುವುದು ಉತ್ತಮ. ಕಳೆದ 10 ವರ್ಷಗಳಿಂದ ಕಲಬುರಗಿಯಲ್ಲಿನ ಬಡಾವಣೆ ನಿರ್ಮಾಣ ಮಾಡಲು ಸಾಧ್ಯವಾಗುತ್ತಿಲ್ಲ. ಕೆಲವರು ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆ ತಂದಿದ್ದಾರೆ ಎಂದು ಬೇಸರ ಹೊರ ಹಾಕಿದರು.
ಇದನ್ನೂ ಓದಿ : ಶ್ರೀರಾಮುಲು ಕಾಂಗ್ರೆಸ್ ಸೇರುವ ಕುರಿತು ನನಗೆ ಯಾವುದೇ ಮಾಹಿತಿ ಇಲ್ಲ : ಸಚಿವ ಸತೀಶ್ ಜಾರಕಿಹೊಳಿ - MINISTER SATISH JARKIHOLI