ಟೆಹ್ರಾನ್: ಇರಾನ್ ಸರ್ಕಾರದ ವಕ್ತಾರರಾಗಿ ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರನ್ನು ನೇಮಿಸಲಾಗಿದೆ. ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಮಸೂದ್ ಪೆಜೆಷ್ಕಿಯಾನ್ ಸರಕಾರದ ವಕ್ತಾರರಾಗಿ ಫತೇಮೆಹ್ ಮೊಹಜೆರಾನಿ ಅವರನ್ನು ನೇಮಕ ಮಾಡಲಾಗಿದೆ. ಬುಧವಾರ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಅಧ್ಯಕ್ಷ ಪೆಜೆಶ್ಕಿಯಾನ್ ಈ ನೇಮಕ ಮಾಡಿದ್ದಾರೆ ಎಂದು ಇರಾನಿನ ಮಾಧ್ಯಮಗಳು ವರದಿ ಮಾಡಿವೆ.
54 ವರ್ಷದ ಮೊಹಜೆರಾನಿ ಎಡಿನ್ ಬರ್ಗ್ ವಿಶ್ವವಿದ್ಯಾಲಯದಿಂದ ಡಾಕ್ಟರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ಆಗಿದ್ದು ಪದವಿಧರೆಯಾಗಿದ್ದು, ಈ ಹಿಂದಿನ 11ನೇ ಸರ್ಕಾರದಲ್ಲಿ ಶರಿಯಾತಿಯ ತಾಂತ್ರಿಕ ಮತ್ತು ವೃತ್ತಿಪರ ತರಬೇತಿ ವಿಶ್ವವಿದ್ಯಾಲಯದ (ಮಹಿಳೆಯರಿಗಾಗಿ) ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ. 2017 ರಲ್ಲಿ ಆಗಿನ ಶಿಕ್ಷಣ ಸಚಿವ ಸಯ್ಯದ್ ಮೊಹಮ್ಮದ್ ಬಟ್ ಹೈ ಅವರು ಮೊಹಜೆರಾನಿ ಅವರನ್ನು ಸೆಂಟರ್ ಫಾರ್ ಬ್ರಿಲಿಯಂಟ್ ಟ್ಯಾಲೆಂಟ್ಸ್ ಮುಖ್ಯಸ್ಥರನ್ನಾಗಿ ನೇಮಿಸಿದ್ದರು. ಮೊಹಜೆರಾನಿ ಶಿಕ್ಷಣ ಸಚಿವಾಲಯದಲ್ಲಿ ಇನ್ನೂ ಹಲವಾರು ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ಮೊಹಜೆರಾನಿ ಮಾತ್ರವಲ್ಲದೆ ದೇಶದ ಕೆಲ ಪ್ರಮುಖ ಹುದ್ದೆಗಳಿಗೆ ಕೂಡ ಮಹಿಳೆಯರನ್ನು ನೇಮಿಸಲಾಗಿದೆ. ಅಧ್ಯಕ್ಷ ಪೆಜೆಷ್ಕಿಯಾನ್ ಕಳೆದ ವಾರ ಶಿನಾ ಅನ್ಸಾರಿ ಅವರನ್ನು ಇರಾನ್ನ ಉಪಾಧ್ಯಕ್ಷರಾಗಿ ಮತ್ತು ಪರಿಸರ ವಿಭಾಗದ ಮುಖ್ಯಸ್ಥರನ್ನಾಗಿ ನೇಮಿಸಿದ್ದರು. ಶಿನಾ ಅನ್ಸಾರಿ ಪರಿಸರ ಸೇವೆ ಮತ್ತು ತ್ಯಾಜ್ಯ ನಿರ್ವಹಣೆ, ಆರ್ ಸಿಆರ್ಎ, ಸುಸ್ಥಿರ ಅಭಿವೃದ್ಧಿ ಮತ್ತು ಪರಿಸರ ಅನುಸರಣೆಯಲ್ಲಿ ಅನುಭವಿ ಪರಿಸರ ತಜ್ಞೆಯಾಗಿದ್ದಾರೆ.