ಶ್ರೀನಗರ, ಜಮ್ಮು ಮತ್ತು ಕಾಶ್ಮೀರ: ಕಳೆದ ಭಾನುವಾರ ಸಂಜೆ ಬಾಲಕಿಯೊಬ್ಬಳ ಸಾವಿನೊಂದಿಗೆ ರಾಜೌರಿಯ ಬಾದಲ್ ಗ್ರಾಮದಲ್ಲಿ ನಿಗೂಢ ಕಾಯಿಲೆಯಿಂದ ಮೃತಪಟ್ಟವರ ಸಂಖ್ಯೆ 17ಕ್ಕೆ ಏರಿದೆ.
ಈ ಕುರಿತು ಜಮ್ಮು ಜಿಎಂಸಿ ಆಸ್ಪತ್ರೆ ಮುಖ್ಯಸ್ಥ ಡಾ. ಅಶುತೋಷ್ ಗುಪ್ತಾ 'ಈಟಿವಿ ಭಾರತ್' ಜೊತೆ ಮಾತನಾಡಿ, "ಮೊಹಮ್ಮದ್ ಅವರ ಆರನೇ ಮಗು ಆಸ್ಪತ್ರೆಯಲ್ಲಿ ಮೃತಪಟ್ಟಿದೆ. ಒಂದೇ ಕುಟುಂಬದ ಆರು ಮಕ್ಕಳ ಸಾವು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಗೃಹ ಇಲಾಖೆ ತಂಡವು ಜಮ್ಮುವಿಗೆ ಭೇಟಿ ನೀಡಿತ್ತು. ನಾವು ಅವರಿಗೆ ಬುಧಾಲ್ ಸಾವುಗಳ ಕುರಿತು ಮಾಹಿತಿಯನ್ನು ನೀಡಿದ್ದೇವೆ. ನಿಗೂಢ ಸಾವಿನ ಕಾರಣವನ್ನು ತಿಳಿಯಲು ತಂಡವು ಭಾನುವಾರ ಬುಧಾಲ್ ರಾಜೌರಿ ಪ್ರದೇಶಕ್ಕೆ ಭೇಟಿ ನೀಡಿತ್ತು" ಎಂದು ಮಾಹಿತಿ ನೀಡಿದರು.
ಆರು ದಿನಗಳ ಹಿಂದೆ, ಮೊಹಮ್ಮದ್ ಅಸ್ಲಂ ಅವರ ಐವರು ಮಕ್ಕಳು ನಿಗೂಢ ಕಾಯಿಲೆಯಿಂದ ಮೃತಪಟ್ಟಿದ್ದರು ಮತ್ತು ಆರನೇ ಮಗು ಜಮ್ಮುವಿನ ಎಸ್ಎಂಜಿಎಸ್ ಆಸ್ಪತ್ರೆಯಲ್ಲಿ ವೆಂಟಿಲೇಟರ್ನಲ್ಲಿ ಜೀವನ್ಮರಣದ ಹೋರಾಟ ನಡೆಸಿ ಸೋಮವಾರ ಅಸುನೀಗಿತ್ತು. ಈ ಮೂಲಕ ಮೊಹಮ್ಮದ್ ಅಸ್ಲಾಂ, ನಿಗೂಢ ಕಾಯಿಲೆಯಿಂದ ತನ್ನ ಎಲ್ಲ ಮಕ್ಕಳನ್ನು ಕಳೆದುಕೊಂಡು ಅನಾಥರಾಗಿದ್ದಾರೆ. ಅಸ್ಲಾಂ ಅವರು ಕಳೆದ ಒಂದು ವಾರದಲ್ಲಿ ನಾಲ್ವರು ಹೆಣ್ಣುಮಕ್ಕಳು, ಇಬ್ಬರು ಗಂಡು ಮಕ್ಕಳು ಮತ್ತು ಚಿಕ್ಕಪ್ಪ ಮತ್ತು ಚಿಕ್ಕಮ್ಮನನ್ನು ಕಳೆದುಕೊಂಡಿದ್ದಾರೆ.
ತಜ್ಞರ ತಂಡ ರಚನೆಗೆ ಅಮಿತ್ ಶಾ ಸೂಚನೆ: ಜಮ್ಮುವಿನ ರಾಜೌರಿ ಜಿಲ್ಲೆಯಲ್ಲಿ ಕಳೆದ ಆರು ವಾರಗಳಲ್ಲಿ 17 ಜನರು ಮೃತಪಟ್ಟಿದ್ದಾರೆ. ಈ 3 ಘಟನೆಗಳಲ್ಲಿ ಸಂಭವಿಸಿದ ಸಾವುಗಳ ಹಿಂದಿನ ಕಾರಣಗಳನ್ನು ಪತ್ತೆ ಮಾಡಲು ನಿಗೂಢ ರೋಗ ಪೀಡಿತ ಗ್ರಾಮಕ್ಕೆ ಭೇಟಿ ನೀಡಲು ಗೃಹ ಸಚಿವಾಲಯದ ನೇತೃತ್ವದ ತಂಡವನ್ನು ರಚಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರವೇ ಸೂಚನೆ ಕೊಟ್ಟಿದ್ದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಕೃಷಿ ಸಚಿವಾಲಯ, ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ ಮತ್ತು ಜಲಸಂಪನ್ಮೂಲ ಸಚಿವಾಲಯದ ತಜ್ಞರನ್ನು ಒಳಗೊಂಡ ತಂಡ ಸೋಮವಾರ ರಾಜೌರಿಗೆ ಭೇಟಿ ನೀಡಿ ಪರಿಶೀಲನೆ ಕೂಡಾ ನಡೆಸಿದೆ. ಈ ತಂಡಕ್ಕೆ ಪಶುಸಂಗೋಪನೆ, ಆಹಾರ ಸುರಕ್ಷತೆ ಮತ್ತು ವಿಧಿ ವಿಜ್ಞಾನ ಪ್ರಯೋಗಾಲಯಗಳ ತಜ್ಞರೂ ಸಹಕಾರ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪರಿಣಿತರ ತಂಡ ಸೋಮವಾರ ಜಮ್ಮುವಿನಿಂದ ರಜೌರಿ ಬುಧಾಲ್‌ಗೆ ಕೂಡಾ ಭೇಟಿ ನೀಡಿತ್ತು. ದೇಶದ ಕೆಲವು ಪ್ರತಿಷ್ಠಿತ ಸಂಸ್ಥೆಗಳ ತಜ್ಞರು ಸಾವಿಗೆ ಕಾರಣವಾದ ಅಂಶಗಳನ್ನು ಪತ್ತೆ ಮಾಡಲು ಬೇಕಾದ ಅಗತ್ಯ ವ್ಯವಸ್ಥೆ ಮಾಡಲಾಗಿದೆ.
ಎಸ್ಐಟಿ ರಚನೆ: ಸಾವುಗಳ ಬಗ್ಗೆ ತನಿಖೆ ನಡೆಸಲು ಜಮ್ಮು ಮತ್ತು ಕಾಶ್ಮೀರ ಪೊಲೀಸರು ವಿಶೇಷ ತನಿಖಾ ತಂಡವನ್ನು (ಎಸ್ಐಟಿ) ರಚಿಸಿದ್ದಾರೆ. ಎಸ್‌ಐಟಿ ತಂಡ ಫೋರೆನ್ಸಿಕ್ ಮೆಡಿಸಿನ್ ಮತ್ತು ಟಾಕ್ಸಿಕಾಲಜಿ ವಿಭಾಗ, ಮೈಕ್ರೋಬಯಾಲಜಿ ವಿಭಾಗ ಮತ್ತು ಪೀಡಿಯಾಟ್ರಿಕ್ಸ್ ವಿಭಾಗದ ತಜ್ಞರನ್ನು ಒಳಗೊಂಡಿದೆ. ಪೊಲೀಸರು ಎಲ್ಲಾ ಆಯಾಮದಿಂದ ಸಾವುಗಳ ಕಾರಣವನ್ನು ತಿಳಿಯಲು ತನಿಖೆ ಕೈಗೊಂಡಿದ್ದಾರೆ.
ಮೇಣದಬತ್ತಿ ಮೆರವಣಿಗೆ ನಡೆಸಿದ ವಿದ್ಯಾರ್ಥಿ ಸಂಘಟನೆ: 2024 ರ ಡಿಸೆಂಬರ್ 7 ರಿಂದ ಇಲ್ಲಿಯವರೆಗೂ ನಿಗೂಢ ಕಾರಣಗಳಿಂದಾಗಿ ಮೃತಪಟ್ಟ 17 ಜನರ ಕುಟುಂಬಸ್ಥರಿಗೆ ನ್ಯಾಯ ದೊರಕಿಸಿಕೊಡಬೇಕು ಎಂಬ ಆಗ್ರಹಿಸಿ ವಿದ್ಯಾರ್ಥಿ ಸಂಘದ ಮುಖಂಡರು ಸೋಮವಾರ ಸಂಜೆ ಜಮ್ಮು ವಿಶ್ವವಿದ್ಯಾಲಯದಲ್ಲಿ ಮೇಣದಬತ್ತಿ ಮೆರವಣಿಗೆ ನಡೆಸಿದ್ದರು.
ವಿಶ್ವವಿದ್ಯಾನಿಲಯದ ಮುಖ್ಯ ದ್ವಾರದಿಂದ ಆರಂಭವಾದ ಮೆರವಣಿಗೆಯು ಜಮ್ಮು ವಿಶ್ವವಿದ್ಯಾಲಯದ ಮುಖ್ಯ ಕ್ಯಾಂಪಸ್‌ನಲ್ಲಿ ಮೌನಾಚರಣೆ ಮೂಲಕ ಮುಕ್ತಾಯಗೊಂಡಿತ್ತು. ಮೃತರಿಗೆ ಮತ್ತು ಅವರ ಕುಟುಂಬಗಳಿಗೆ ನ್ಯಾಯ ದೊರಕಿಸಿಕೊಡಬೇಕು ಮತ್ತು ನಿಗೂಢ ಸಾವಿನ ಬಗ್ಗೆ ತಕ್ಷಣ ತನಿಖೆ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಟ್ರೈನ್ ಚೈನ್ ಎಳೆದು ಇಳಿದ ಪ್ರಯಾಣಿಕರ ಮೇಲೆ ಹರಿದ ರೈಲು: 10ಕ್ಕೂ ಹೆಚ್ಚು ಮಂದಿ ಸಾವು