ಟೆಲ್ ಅವೀವ್ : ಇದೇ ವಾರ ಯಾವುದೇ ಕ್ಷಣದಲ್ಲಿ ಇರಾನ್ ಹಿಜ್ಬುಲ್ಲಾದೊಂದಿಗೆ ಸೇರಿ ತನ್ನ ಮೇಲೆ ದಾಳಿ ನಡೆಸುವ ಸಾಧ್ಯತೆಗಳಿವೆ ಎಂದು ಇಸ್ರೇಲ್ ಹೇಳಿದೆ. ಹೊಸ ಗುಪ್ತಚರ ಮಾಹಿತಿಗಳ ಆಧಾರದ ಮೇಲೆ ಇಸ್ರೇಲ್ ಇದೇ ವಾರ ಇರಾನ್ನಿಂದ ದಾಳಿ ನಡೆಯುವುದಾಗಿ ನಿರೀಕ್ಷಿಸಿದ್ದು, ಸಂಭಾವ್ಯ ದಾಳಿಯನ್ನು ಎದುರಿಸಲು ಎಲ್ಲ ರೀತಿಯಿಂದ ಸಿದ್ಧತೆ ಮಾಡಿಕೊಂಡಿದೆ.
ಇರಾನ್ನ ಸಂಭಾವ್ಯ ದಾಳಿಯ ಕುರಿತಾಗಿ ಇಸ್ರೇಲ್ ಸಚಿವ ಯೋವ್ ಗ್ಯಾಲಂಟ್ ಅವರು ಭಾನುವಾರ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಅವರೊಂದಿಗೆ ವಿವರವಾದ ಚರ್ಚೆ ನಡೆಸಿದರು ಎಂದು ಇಸ್ರೇಲ್ ರಕ್ಷಣಾ ಸಚಿವಾಲಯದ ಮೂಲಗಳು ಐಎಎನ್ಎಸ್ಗೆ ತಿಳಿಸಿವೆ.
ಏತನ್ಮಧ್ಯೆ ಇಸ್ರೇಲ್ನ ರಕ್ಷಣೆಗಾಗಿ ಅಮೆರಿಕವು ತನ್ನ ಹಲವಾರು ಮಿಲಿಟರಿ ಸಾಧನಗಳನ್ನು ಮಧ್ಯಪ್ರಾಚ್ಯಕ್ಕೆ ಕಳುಹಿಸುತ್ತಿದೆ. ಅಮೆರಿಕದ ಗೈಡೆಡ್ ಕ್ಷಿಪಣಿ ಜಲಾಂತರ್ಗಾಮಿ ನೌಕೆ ಯುಎಸ್ಎಸ್ ಜಾರ್ಜಿಯಾವನ್ನು ಮಧ್ಯಪ್ರಾಚ್ಯಕ್ಕೆ ಸ್ಥಳಾಂತರಿಸಲು ಯುಎಸ್ ರಕ್ಷಣಾ ಕಾರ್ಯದರ್ಶಿ ಆದೇಶಿಸಿದ್ದಾರೆ ಎಂದು ಪೆಂಟಗನ್ ಪತ್ರಿಕಾ ಕಾರ್ಯದರ್ಶಿ ಮೇಜರ್ ಜನರಲ್ ಪ್ಯಾಟ್ ರೈಡರ್ ಹೇಳಿದ್ದಾರೆ. ವಿಮಾನವಾಹಕ ನೌಕೆ ಅಬ್ರಹಾಂ ಲಿಂಕನ್ ಅನ್ನು ಮಧ್ಯಪ್ರಾಚ್ಯಕ್ಕೆ ಕಳುಹಿಸಿ ನಿಯೋಜಿಸುವಂತೆ ಯುಎಸ್ ರಕ್ಷಣಾ ಕಾರ್ಯದರ್ಶಿ ಆದೇಶಿಸಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಅಬ್ರಹಾಂ ಲಿಂಕನ್ ನೌಕೆಯಲ್ಲಿ ಎಫ್-35 ಫೈಟರ್ ಜೆಟ್ ಹಾಗೂ ಎಫ್/ಎ-18 ಯುದ್ಧ ವಿಮಾನಗಳಿವೆ.
ಪ್ಯಾರಿಸ್ ಒಲಿಂಪಿಕ್ಸ್ ಮುಕ್ತಾಯವಾಗುವವರೆಗೂ ದಾಳಿ ಆರಂಭಿಸದಂತೆ ಫ್ರಾನ್ಸ್ ಇರಾನ್ ಮೇಲೆ ಒತ್ತಡ ಹೇರಿದ್ದರಿಂದ ದಾಳಿಯು ವಿಳಂಬವಾಗಿದೆ ಎಂದು ಈ ಪ್ರದೇಶದ ಮಾಧ್ಯಮಗಳು ವರದಿ ಮಾಡಿವೆ. ಸದ್ಯ ಭಾನುವಾರ ಒಲಿಂಪಿಕ್ಸ್ ಮುಕ್ತಾಯವಾಗಿದೆ.
ಜುಲೈ 31 ರಂದು ಟೆಹ್ರಾನ್ನಲ್ಲಿ ಹಮಾಸ್ ರಾಜಕೀಯ ಮುಖ್ಯಸ್ಥ ಇಸ್ಮಾಯಿಲ್ ಹನಿಯೆಹ್ ಅವರನ್ನು ಹತ್ಯೆಗೈದ ನಂತರ ಇಸ್ರೇಲ್ ಮೇಲೆ ತ್ವರಿತವಾಗಿ ದಾಳಿ ಆರಂಭಿಸುವಂತೆ ದೇಶದ ಸೇನೆ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್ಜಿಸಿ) ಇರಾನ್ ಸರ್ಕಾರದ ಮೇಲೆ ತೀವ್ರ ಒತ್ತಡ ಹೇರುತ್ತಿದೆ. ಇರಾನ್ನ ನೂತನ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಲು ಹನಿಯೆಹ್ ಟೆಹ್ರಾನ್ಗೆ ಆಗಮಿಸಿದ ಸಂದರ್ಭದಲ್ಲಿ ಅವರನ್ನು ಬಾಂಬ್ ದಾಳಿಯ ಮೂಲಕ ಕೊಲ್ಲಲಾಯಿತು. ಇಸ್ಮಾಯಿಲ್ ಹನಿಯೆಹ್ ಹತ್ಯೆಗೆ ಕೆಲವೇ ಗಂಟೆಗಳ ಮೊದಲು ಹಿಜ್ಬುಲ್ಲಾ ಮಿಲಿಟರಿ ಮುಖ್ಯಸ್ಥ ಫುವಾದ್ ಶುಕ್ರ್ ಅವರನ್ನು ಹತ್ಯೆ ಮಾಡಲಾಗಿತ್ತು.
"ಐಡಿಎಫ್ ಮತ್ತು ರಕ್ಷಣಾ ವ್ಯವಸ್ಥೆಯು ನಮ್ಮ ಶತ್ರುಗಳು ಮತ್ತು ಮಧ್ಯಪ್ರಾಚ್ಯದಲ್ಲಿನ ಬೆಳವಣಿಗೆಗಳನ್ನು ಮೇಲ್ವಿಚಾರಣೆ ಮಾಡುತ್ತಿದೆ. ಇರಾನ್ ಮತ್ತು ಹಿಜ್ಬುಲ್ಲಾ ಕಡೆಯಿಂದ ಬರಬಹುದಾದ ದಾಳಿಗಳ ಮೇಲೆ ಗಮನವಿಡಲಾಗಿದ್ದು ಪರಿಸ್ಥಿತಿಯನ್ನು ನಿರಂತರವಾಗಿ ಪರಿಶೀಲಿಸಲಾಗುತ್ತಿದೆ." ಎಂದು ಇಸ್ರೇಲ್ ರಕ್ಷಣಾ ಪಡೆಗಳ (ಐಡಿಎಫ್) ವಕ್ತಾರ ರಿಯರ್ ಅಡ್ಮಿರಲ್ ಡೇನಿಯಲ್ ಹಗರಿ ಭಾನುವಾರ ಸಂಜೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ : ಸುಡಾನ್ನಲ್ಲಿ ಮುಂದುವರಿದ ಸಂಘರ್ಷ: 28 ಸಾವು, 46 ಜನರಿಗೆ ಗಾಯ - Sudan Conflict