ಕಲಬುರಗಿ: "ಬಿಜೆಪಿಯ ಯಾವ ಬಣದವರು ಪ್ರತಿಭಟನೆ ಮಾಡ್ತಿದ್ದಾರೆ ಅನ್ನೋದನ್ನು ಮೊದಲು ಹೇಳಲಿ. ಈವರೆಗೆ ಯಾವುದಾದರೂ ಒಳ್ಳೆಯ ಉದ್ದೇಶಕ್ಕೆ ಅವರು ಪ್ರತಿಭಟನೆ ಮಾಡಿದ್ದಾರಾ?" ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದರು.
ಮೈಸೂರು ನಗರದಲ್ಲಿ 144 ಸೆಕ್ಷನ್ ಜಾರಿ ಮಾಡಿರುವುದಕ್ಕೆ ಬಿಜೆಪಿ ಅಸಮಾಧಾನ ಹೊರಹಾಕುತ್ತಿರುವ ವಿಚಾರದ ಕುರಿತು ಕಲಬುರಗಿಯಲ್ಲಿಂದು ಮಾಧ್ಯಮದವರ ಪ್ರಶ್ನೆಗಳಿಗೆ ಅವರು ಉತ್ತರಿಸಿದರು.
"ಪ್ರತಾಪ್ ಸಿಂಹ ಮೇಲೆ ಯಾಕೆ ಕೇಸ್ ಆಗಿದೆ?. ಇವರು ಏನ್ ಮಾಡ್ತಾರೆ ಅಲ್ಲಿ ಹೋಗಿ?. ಬಿಜೆಪಿಯವರು ಸುಮ್ಮನೆ ನಮ್ಮ ಸರ್ಕಾರ ಪಾಪರ್ ಆಗಿದೆ, ದಿವಾಳಿ ಆಗಿದೆ ಅಂತಿದ್ದಾರೆ" ಎಂದರು.
ದಿವಾಳಿಯಾಗಿರೋದು ಬಿಜೆಪಿ: "ಕಲ್ಯಾಣ ಪಥ ರಸ್ತೆ ಯೋಜನೆಯ ಅಡಿಗಲ್ಲು ಸಮಾರಂಭಕ್ಕೆ ಮುಂದಿನ ವಾರ ವಿಜಯೇಂದ್ರ ಅವರನ್ನು ನಾನೇ ಆಹ್ವಾನಿಸುತ್ತೇನೆ. ಅದಾದ ಮೇಲೆ 5 ಸಾವಿರ ಕೋಟಿ ರೂ ವೆಚ್ಚದ ಪ್ರಗತಿ ಪಥ ಯೋಜನೆಗೆ ಚಾಲನೆ ನೀಡ್ತೇವೆ. ಅವರ ಕ್ಷೇತ್ರಕ್ಕೂ ಯೋಜನೆಯ ಹಣ ಹೋಗುತ್ತದೆ. ಅದು ಬಿಟ್ಟು ಸುಮ್ನೆ ದಿವಾಳಿ ದಿವಾಳಿ ಅಂದ್ರೆ ಹೇಗೆ?. ದಿವಾಳಿಯಾಗಿರೋದು ಬಿಜೆಪಿ. ಅವರ ನಾಯಕತ್ವದಲ್ಲಿ ಬಿಜೆಪಿ ಉದ್ದಾರ ಆಗೋಲ್ಲ. ಸಾಲ ಮಾಡಿ ತುಪ್ಪ ತಿಂದೋರು ಅವರು" ಎಂದರು.
ನಮ್ಮ ಕಂಡಕ್ಟರ್ ಮೇಲೆ ಹಲ್ಲೆ ತಪ್ಪು: "ನಮ್ಮ ಕಂಡಕ್ಟರ್ ಮೇಲೆ ಮಹಾರಾಷ್ಟ್ರದವರು ಹಲ್ಲೆ ಮಾಡಿದ್ದು ತಪ್ಪು. ಅದನ್ನು ಖಂಡಿಸುತ್ತೇನೆ. ಮಹಾರಾಷ್ಟ್ರ, ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದೆ. ಡಬಲ್ ಇಂಜಿನ್ ಸರ್ಕಾರ ಅಲ್ವಾ? ಸಮಸ್ಯೆ ಬಗೆಹರಿಸಲಿ. ನಾವು ನಮ್ಮ ನೆಲ, ಜಲ, ಗಡಿ ವಿಷಯದಲ್ಲಿ ಬದ್ದವಾಗಿದ್ದೇವೆ" ಎಂದು ಹೇಳಿದರು.
ವಿಜಯೇಂದ್ರ, ನನ್ನ ಮಧ್ಯೆ ಒಳಒಪ್ಪಂದ ಇದ್ರೆ ಬಹಿರಂಗಪಡಿಸಿ: "ಬಿಜೆಪಿಯವರು ನನ್ನ ರಾಜೀನಾಮೆಯನ್ನು ಎಷ್ಟು ಬಾರಿ ಕೇಳಿದ್ದಾರೆ?. ಕಲಬುರಗಿಯಲ್ಲಿ ನಡೆದ ಹೋರಾಟಕ್ಕೆ ವಿಜಯೇಂದ್ರ ಏಕೆ ಬರಲಿಲ್ಲ?. ನನ್ನ ಅವರ ಮಧ್ಯೆ ಯಾವ ಒಳಒಪ್ಪಂದವೂ ಇಲ್ಲ. ಇದ್ರೆ ಬಹಿರಂಗಪಡಿಸಿ. ಅವರ ಬಗ್ಗೆ ಅತೀ ಹೆಚ್ಚು ಮಾತನಾಡೋದೇ ನಾನು" ಎಂದರು.
ಹೇಸಿಗೆ ಮಾಡಿದ್ದು ಅವರ ಮನೆ ಮಕ್ಕಳು, ನಾವಲ್ಲ: ರಾಜ್ಯ ಸರ್ಕಾರದ ಬಗ್ಗೆ ಮಾತನಾಡೋಕೆ ಹೇಸಿಗೆ ಬರುತ್ತೆ ಎಂಬ ಹೆಚ್ಡಿಕೆ ಹೇಳಿಕೆಗೆ, "ಅವರಿಗೆ ಮಾತನಾಡಿ ಅಂತ ನಾವು ಹೇಳಿದ್ದೀವಾ? ಅಥವಾ ಪ್ರಬಂಧ ಬರೆದುಕೊಡಿ ಎಂದು ಕೇಳಿದ್ದೀವಾ? ಹೇಸಿಗೆ ಮಾಡಿದ್ದು ಅವರ ಮನೆ ಮಕ್ಕಳು, ನಾವಲ್ಲ" ಎಂದು ಟಾಂಗ್ ಕೊಟ್ಟರು.