ಹೈದರಾಬಾದ್: ಪ್ರತಿ ವರ್ಷ ಆಗಸ್ಟ್ 29 ರಂದು ವಿಶ್ವದಾದ್ಯಂತ ಪರಮಾಣು ಪರೀಕ್ಷೆಗಳ ವಿರುದ್ಧ ಅಂತಾರಾಷ್ಟ್ರೀಯ ದಿನವನ್ನು ಆಚರಿಸಲಾಗುತ್ತದೆ. ಪರಮಾಣು ಶಸ್ತ್ರಾಸ್ತ್ರಗಳ ಪರೀಕ್ಷಾ ಸ್ಫೋಟ ಅಥವಾ ಇತರ ಯಾವುದೇ ಪರಮಾಣು ಸ್ಫೋಟದ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವುದು ಈ ದಿನದ ಉದ್ದೇಶವಾಗಿದೆ. ಪರಮಾಣು ಶಸ್ತ್ರಾಸ್ತ್ರಗಳ ಪರೀಕ್ಷೆಯು ಸುದೀರ್ಘ ಮತ್ತು ವಿನಾಶಕಾರಿ ಇತಿಹಾಸವನ್ನು ಹೊಂದಿದೆ. 1945 ರಲ್ಲಿ ಮೊದಲ ಬಾರಿಗೆ ಅಮೆರಿಕ ಈ ಪರೀಕ್ಷೆ ನಡೆಸಿತು. ಅಂದಿನಿಂದ ಒಟ್ಟು 2,000 ಪರಮಾಣು ಪರೀಕ್ಷೆಗಳು ಜಾಗತಿಕವಾಗಿ ನಡೆದಿವೆ.
ಪರಮಾಣು ಪರೀಕ್ಷೆಯ ಆರಂಭಿಕ ದಿನಗಳು ಮಾನವ ಜೀವನ ಮತ್ತು ಪರಿಸರದ ಮೇಲೆ ಈ ಶಸ್ತ್ರಾಸ್ತ್ರಗಳ ವಿನಾಶಕಾರಿ ಪರಿಣಾಮಗಳು ನಿರ್ಲಕ್ಷಿಸಲ್ಪಟ್ಟವು. ಈ ಪರೀಕ್ಷೆಗಳಿಂದ ಪರಮಾಣು ವಿಕಿರಣವು ವಾಯುಮಂಡಲದಲ್ಲಿ ಮೈಲುಗಳವರೆಗೆ ವಿಕಿರಣವನ್ನು ಹರಡುತ್ತದೆ. ಜನರು ಮತ್ತು ಪ್ರಾಣಿಗಳಲ್ಲಿ ಕ್ಯಾನ್ಸರ್ ಮತ್ತು ಇತರ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ.
ಪರಮಾಣು ಪರೀಕ್ಷೆಯ ವಿರುದ್ಧ ಅಂತಾರಾಷ್ಟ್ರೀಯ ದಿನದ ಇತಿಹಾಸ: ಡಿಸೆಂಬರ್ 2, 2009 ರಂದು ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿ ಆಗಸ್ಟ್ 29 ಅನ್ನು ಪರಮಾಣು ಪರೀಕ್ಷೆಗಳ ವಿರುದ್ಧದ ಅಂತಾರಾಷ್ಟ್ರೀಯ ದಿನವೆಂದು ಘೋಷಿಸಿತು. ಈ ನಿರ್ಣಯವನ್ನು ಸರ್ವಾನುಮತದಿಂದ ಅಂದು ಅಂಗೀಕರಿಸಲಾಗಿತ್ತು. ಈ ದಿನವು ಪರಮಾಣು ಪರೀಕ್ಷೆಗಳ ಹಾನಿಕಾರಕ ಪರಿಣಾಮಗಳು ಮತ್ತು ಪರಮಾಣು ಶಸ್ತ್ರಾಸ್ತ್ರಗಳಿಂದ ಮುಕ್ತವಾದ ಜಗತ್ತನ್ನು ಸೃಷ್ಟಿಸಲು ಮತ್ತು ಅವುಗಳನ್ನು ನಿಲ್ಲಿಸುವ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಗುರಿ ಹೊಂದಿದೆ.
1991 ರಲ್ಲಿ ಸೆಮಿಪಲಾಟಿನ್ಸ್ಕ್ ಸೈಟ್‌ನಲ್ಲಿ ಪರಮಾಣು ಪರೀಕ್ಷೆಯ ಅಂತ್ಯವನ್ನು ಗೌರವಿಸಲು ಅನೇಕ ದೇಶಗಳು ಮತ್ತು ಸಂಸ್ಥೆಗಳ ಬೆಂಬಲದೊಂದಿಗೆ ಈ ದಿನದ ಕಲ್ಪನೆಯು ಕಜಕಿಸ್ತಾನ್‌ನಿಂದ ಬಂದಿತು. ಈ ದಿನವು ಜಾಗತಿಕ ಪರಮಾಣು ಪರೀಕ್ಷೆಗಳನ್ನು ನಿಷೇಧಿಸುವ ಅಗತ್ಯದ ಪ್ರತಿಪಾದನೆ ಮತ್ತು ಉತ್ತೇಜಿಸಲು ವಿಶ್ವಸಂಸ್ಥೆ, ಸರ್ಕಾರಗಳು ಈ ಆಚರಣೆ ಮಾಡುತ್ತಾ ಬಂದಿವೆ. ಪರಮಾಣು ಶಸ್ತ್ರಾಸ್ತ್ರಗಳ ಸಂಪೂರ್ಣ ನಿರ್ಮೂಲನೆಗಾಗಿ ಮೊದಲ ಅಂತಾರಾಷ್ಟ್ರೀಯ ದಿನವನ್ನು ಸೆಪ್ಟೆಂಬರ್ 2014 ರಲ್ಲಿ ಆಚರಿಸಲಾಯಿತು. 1996 ರ ಸಮಗ್ರ ಪರಮಾಣು ಪರೀಕ್ಷಾ ನಿಷೇಧ ಒಪ್ಪಂದವನ್ನು ಸಾಧಿಸುವುದು ಈ ದಿನದ ಆಚರಣೆಯ ಮೊದಲ ಗುರಿಯಾಗಿತ್ತು. ಆದರೆ ಈ ನಿರ್ಣಯಕ್ಕೆ ಇನ್ನೂ ಸಹಿ ಮಾಡಲು ಸಾಧ್ಯವಾಗಿಲ್ಲ.
ಪರಮಾಣು ಯುಗದ ಆರಂಭ:ಯುನೈಟೆಡ್ ಸ್ಟೇಟ್ಸ್ ಜುಲೈ 16, 1945 ರಂದು ನ್ಯೂ ಮೆಕ್ಸಿಕೋದಲ್ಲಿ "ಟ್ರಿನಿಟಿ" ಎಂಬ ಹೆಸರಿನ 20-ಕಿಲೋಟನ್ ಪರಮಾಣು ಬಾಂಬ್ ಅನ್ನು ಸ್ಫೋಟಿಸುವ ಮೂಲಕ ಪರಮಾಣು ಯುಗವನ್ನು ಪ್ರಾರಂಭಿಸಿತು. ಆಗಸ್ಟ್ 6, 1945 ರಂದು ಹಿರೋಷಿಮಾದಲ್ಲಿ "ಲಿಟಲ್ ಬಾಯ್" ಮತ್ತು ಆಗಸ್ಟ್ 9, 1945 ರಂದು ನಾಗಸಾಕಿಯ ಮೇಲೆ "ಫ್ಯಾಟ್ ಮ್ಯಾನ್" ಬಾಂಬ್‌ಗಳನ್ನು ಹಾಕುವ ಮೂಲಕ ಅಮೆರಿಕ ಈ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರೈಸಿತ್ತು.
ಈ ಬಾಂಬ್‌ಗಳು ಸುಮಾರು 2,20,000 ಜಪಾನಿಯರ ಸಾವಿಗೆ ನೇರವಾಗಿ ಕಾರಣವಾದರೆ, ಪರಮಾಣು ಬಾಂಬ್ನ ವಿಕಿರಣಗಳು ನಂತರ ಹಂತ ಹಂತವಾಗಿ ಮತ್ತೆ 2 ಲಕ್ಷ ಜನರ ಜೀವವನ್ನು ಬಲಿ ಪಡೆದವು. ವಿಶ್ವ ಸಮರ II ಮುಗಿದ ನಂತರ, ಯುನೈಟೆಡ್ ಸ್ಟೇಟ್ಸ್ ಮತ್ತು ಸೋವಿಯತ್ ಒಕ್ಕೂಟವು ಪರಮಾಣು ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸುವ ಸ್ಪರ್ಧೆಯನ್ನು ಪ್ರಾರಂಭಿಸಿದವು. ಅಮೆರಿಕ 1946 ಮತ್ತು 1949 ರ ನಡುವೆ ಇನ್ನೂ ಆರು ಬಾಂಬ್‌ಗಳನ್ನು ಪರೀಕ್ಷಿಸಿತು ಮತ್ತು ಸೋವಿಯತ್ ಒಕ್ಕೂಟವು ತನ್ನ ಮೊದಲ ಬಾಂಬ್ "ಜೋ 1" ಅನ್ನು ಆಗಸ್ಟ್ 29, 1949 ರಂದು ಪರೀಕ್ಷಿಸಿತು. ಈ ಮೂಲಕ ಉಭಯ ರಾಷ್ಟ್ರಗಳ ನಡುವೆ "ಶೀತಲ ಸಮರ" ಪರಮಾಣು ಶಸ್ತ್ರಾಸ್ತ್ರ ಸ್ಪರ್ಧೆ ಪ್ರಾರಂಭಿಸಿತು.