ಮಾಲೆ: ತಾವು ಎಂದಿಗೂ 'ಇಂಡಿಯಾ ಔಟ್' ಅಜೆಂಡಾವನ್ನು ಅನುಸರಿಸಿಲ್ಲ ಎಂದು ಮಾಲ್ಡೀವ್ಸ್ ಅಧ್ಯಕ್ಷ ಮುಹಮ್ಮದ್ ಮುಯಿಝು ಹೇಳಿದ್ದಾರೆ. ಆದರೆ ತನ್ನ ನೆಲದಲ್ಲಿ ವಿದೇಶಿ ಸೇನೆಯ ಉಪಸ್ಥಿತಿಯು ಗಂಭೀರ ಸಮಸ್ಯೆಯಾಗಿತ್ತು ಎಂದು ಅವರು ಪ್ರತಿಪಾದಿಸಿದ್ದಾರೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 79 ನೇ ಅಧಿವೇಶನದಲ್ಲಿ ಭಾಗವಹಿಸಲು ಯುಎಸ್ನಲ್ಲಿರುವ ಮುಯಿಝು, ಗುರುವಾರ ಪ್ರಿನ್ಸ್ ಟನ್ ವಿಶ್ವವಿದ್ಯಾಲಯದ ಡೀನ್ಸ್ ಲೀಡರ್ ಶಿಪ್ ಸರಣಿಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುವಾಗ ಈ ಹೇಳಿಕೆ ನೀಡಿದ್ದಾರೆ.
"ನಾವು ಯಾವುದೇ ಸಮಯದಲ್ಲಿಯೂ ಯಾವುದೇ ಒಂದು ದೇಶದ ವಿರುದ್ಧವಾಗಿಲ್ಲ. ಅದು ಇಂಡಿಯಾ ಔಟ್ ಆಗಿರಲಿಲ್ಲ. ನಮ್ಮ ನೆಲದಲ್ಲಿ ವಿದೇಶಿ ಮಿಲಿಟರಿಯ ಉಪಸ್ಥಿತಿಯು ಗಂಭೀರ ಸಮಸ್ಯೆಯಾಗಿತ್ತು. ತಮ್ಮ ದೇಶದಲ್ಲಿ ಒಬ್ಬನೇ ಒಬ್ಬ ವಿದೇಶಿ ಸೈನಿಕ ಇರುವುದನ್ನು ಮಾಲ್ಡೀವ್ಸ್ ಜನತೆ ಸಹಿಸುವುದಿಲ್ಲ" ಎಂದು ಅವರು ಹೇಳಿದರು.
ಚೀನಾ ಪರ ಒಲವುಗಳಿಗೆ ಹೆಸರುವಾಸಿಯಾದ ಮುಯಿಝು ಕಳೆದ ವರ್ಷ ನವೆಂಬರ್ನಲ್ಲಿ ಮಾಲ್ಡೀವ್ಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಭಾರತ ಮತ್ತು ಮಾಲ್ಡೀವ್ಸ್ ನಡುವಿನ ಸಂಬಂಧಗಳು ತೀವ್ರ ಬಿಗಡಾಯಿಸಿದೆ. ದೇಶವು ಉಡುಗೊರೆಯಾಗಿ ನೀಡಿದ ಮೂರು ವಾಯುಯಾನ ವೇದಿಕೆಗಳನ್ನು ನಿರ್ವಹಿಸುತ್ತಿರುವ ಸುಮಾರು 90 ಭಾರತೀಯ ಮಿಲಿಟರಿ ಸಿಬ್ಬಂದಿಯನ್ನು ಹಿಂತೆಗೆದುಕೊಳ್ಳುವಂತೆ ಮುಯಿಝು ಭಾರತಕ್ಕೆ ಒತ್ತಾಯಿಸಿದ್ದರು. ನಂತರ ಭಾರತವು ಮೇ 10 ರೊಳಗೆ ತನ್ನ ಮಿಲಿಟರಿ ಸಿಬ್ಬಂದಿಯನ್ನು ಹಿಂತೆಗೆದುಕೊಂಡಿತು ಮತ್ತು ಅವರ ಬದಲಿಗೆ ಡಾರ್ನಿಯರ್ ವಿಮಾನ ಮತ್ತು ಎರಡು ಹೆಲಿಕಾಪ್ಟರ್ಗಳನ್ನು ನಿರ್ವಹಿಸಲು ನಾಗರಿಕ ಸಿಬ್ಬಂದಿಯನ್ನು ನೇಮಿಸಿತು.
ಸಾಮಾಜಿಕ ಮಾಧ್ಯಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಅವಮಾನಿಸಿದ್ದಕ್ಕಾಗಿ ಉಪ ಮಂತ್ರಿಗಳ ವಿರುದ್ಧ ಕ್ರಮ ಕೈಗೊಂಡಿದ್ದೇನೆ ಎಂದು ಮುಯಿಝು ಇದೇ ಸಂದರ್ಭದಲ್ಲಿ ಒತ್ತಿ ಹೇಳಿದರು.