ನವದೆಹಲಿ:ಭಾರತಕ್ಕೆ ದೊಡ್ಡ ರಾಜತಾಂತ್ರಿಕ ಗೆಲುವು ಸಿಕ್ಕಿದೆ. ಕತಾರ್‌ನಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದ ಭಾರತೀಯ ನೌಕಾಪಡೆಯ 8 ಮಾಜಿ ಯೋಧರನ್ನು ದೋಹಾ ಸೋಮವಾರ ಬಿಡುಗಡೆ ಮಾಡಿದೆ. ಅವರಲ್ಲಿ ಏಳು ಮಂದಿ ಮಧ್ಯಪ್ರಾಚ್ಯ ದೇಶದಲ್ಲಿ 18 ತಿಂಗಳ ಜೈಲು ವಾಸದ ನಂತರ ಈಗಾಗಲೇ ಭಾರತಕ್ಕೆ ಮರಳಿದ್ದಾರೆ. ಕೇಂದ್ರ ಸರ್ಕಾರದ ರಾಜತಾಂತ್ರಿಕ ಹಸ್ತಕ್ಷೇಪದ ನಂತರ ಮರಣದಂಡನೆಯನ್ನು ವಿಸ್ತೃತ ಜೈಲು ಶಿಕ್ಷೆಗೆ ಬದಲಾಯಿಸಲಾಗಿದೆ.
ನೌಕಾಪಡೆಯ ಯೋಧರು ತಮ್ಮ ದೇಶಕ್ಕೆ ಸುರಕ್ಷಿತವಾಗಿ ಕರೆ ತರುವಂತೆ ಯೋಧರ ಕುಟುಂಬದ ಸದಸ್ಯರು ಮನವಿ ಮಾಡಿದ್ದರು. ಜೊತೆಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯವು, ಎಲ್ಲಾ ರಾಜತಾಂತ್ರಿಕ ಪ್ರಕ್ರಿಯೆಗಳನ್ನು ಕೈಗೊಳ್ಳಲಾಗಿದೆ. ಅವರನ್ನು ಮರಳಿ ಕರೆತರಲು ಕಾನೂನು ನೆರವಿನ ವ್ಯವಸ್ಥೆ ಮಾಡಲಾಗುತ್ತಿದೆ. ಎಂಟು ನಿವೃತ್ತ ನೌಕಾ ಅಧಿಕಾರಿಗಳಲ್ಲಿ ಏಳು ಮಂದಿ ಈಗಾಗಲೇ ಭಾರತಕ್ಕೆ ಮರಳಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸೋಮವಾರ ಅಧಿಕೃತ ಹೇಳಿಕೆ ನೀಡಿದೆ.
ಕೇಂದ್ರ ಸರ್ಕಾರದಿಂದ ಅಧಿಕೃತ ಹೇಳಿಕೆ ಬಿಡುಗಡೆ:ನೌಕಾಪಡೆಯ ನಿವೃತ್ತ ಅಧಿಕಾರಿಗಳನ್ನು ಮುಕ್ತಗೊಳಿಸುವ ನಿರ್ಧಾರವನ್ನು ಸ್ವಾಗತಿಸುವ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ, "ಕತಾರ್‌ನಲ್ಲಿ ಬಂಧಿತರಾಗಿರುವ ದಹ್ರಾ ಗ್ಲೋಬಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಎಂಟು ಭಾರತೀಯ ಪ್ರಜೆಗಳ ಬಿಡುಗಡೆಯನ್ನು ಭಾರತ ಸರ್ಕಾರ ಸ್ವಾಗತಿಸುತ್ತದೆ. ಅವರಲ್ಲಿ ಎಂಟು ಮಂದಿಯಲ್ಲಿ ಏಳು ಮಂದಿ ಭಾರತಕ್ಕೆ ಮರಳಿದ್ದಾರೆ. ಈ ಪ್ರಜೆಗಳ ಬಿಡುಗಡೆ ಮತ್ತು ಮನೆಗೆ ಬರಲು ಅನುವು ಮಾಡಿಕೊಡಲು ಕತಾರ್ ರಾಜ್ಯದ ಅಮೀರ್ ಅವರ ನಿರ್ಧಾರವನ್ನು ನಾವು ಪ್ರಶಂಸಿಸುತ್ತೇವೆ" ಎಂದು ತಿಳಿಸಿದೆ.