ಸ್ಯಾನ್ ಫ್ರಾನ್ಸಿಸ್ಕೋ : ಬಳಕೆದಾರರ ಅನುಮತಿಯಿಲ್ಲದೆ ಕ್ರೋಮ್ ಬ್ರೌಸರ್ ಮೂಲಕ ಅವರಿಗೆ ಸಂಬಂಧಿಸಿದ ಡೇಟಾ ಸಂಗ್ರಹಣೆ ಮಾಡಿದ ಆರೋಪದಲ್ಲಿ ಟೆಕ್ ದೈತ್ಯ ಗೂಗಲ್ ಅಮೆರಿಕದಲ್ಲಿ ಕ್ಲಾಸ್-ಆಕ್ಷನ್ ಮೊಕದ್ದಮೆಯನ್ನು ಎದುರಿಸಲಿದೆ ಎಂದು ಇಲ್ಲಿನ ನ್ಯಾಯಾಲಯವೊಂದು ತೀರ್ಪು ನೀಡಿದೆ. ಗೂಗಲ್ ವಿರುದ್ಧದ ಪ್ರಕರಣವನ್ನು ಈ ಹಿಂದೆ ವಜಾಗೊಳಿಸಿದ ಡಿಸೆಂಬರ್ 2022 ರ ನ್ಯಾಯಾಲಯದ ತೀರ್ಪನ್ನು ಕ್ಯಾಲಿಫೋರ್ನಿಯಾ ರಾಜ್ಯದ ಫೆಡರಲ್ ಮೇಲ್ಮನವಿ ನ್ಯಾಯಾಲಯವು ರದ್ದುಗೊಳಿಸಿ ಮೇಲಿನಂತೆ ಆದೇಶ ನೀಡಿದೆ.
ಕ್ರೋಮ್ ಸಿಂಕ್ ಅನ್ನು ಸಕ್ರಿಯಗೊಳಿಸಲಾಗಿದೆಯೇ ಎಂಬುದನ್ನು ಪರಿಗಣಿಸದೆ ಗೂಗಲ್ ಕ್ರೋಮ್ ಬಳಕೆದಾರರ ಡೇಟಾ ಸಂಗ್ರಹಿಸಿದೆ ಎಂದು ಆರೋಪಿಸಿ 2020 ರಲ್ಲಿ ಮೊಕದ್ದಮೆ ದಾಖಲಿಸಲಾಗಿತ್ತು.
"ವಿವಿಧ ರಾಜ್ಯ ಮತ್ತು ಫೆಡರಲ್ ಕಾನೂನುಗಳನ್ನು ಉಲ್ಲಂಘಿಸಿ ಕಂಪನಿಯು ಬಳಕೆದಾರರ ಡೇಟಾವನ್ನು ರಹಸ್ಯವಾಗಿ ಸಂಗ್ರಹಿಸಿದೆ ಎಂದು ಆರೋಪಿಸಿ ದಾಖಲಾಗಿದ್ದ ಪ್ರಕರಣದಲ್ಲಿ ಗೂಗಲ್ ಎಲ್ಎಲ್ ಸಿ ಪರವಾಗಿ ಜಿಲ್ಲಾ ನ್ಯಾಯಾಲಯ ನೀಡಿದ ಸಾರಾಂಶ ತೀರ್ಪನ್ನು ಬದಲಿಸಿದ ಫೆಡರಲ್ ಮೇಲ್ಮನವಿ ನ್ಯಾಯಾಲಯ, ಮುಂದಿನ ವಿಚಾರಣೆಗಾಗಿ ರಿಮಾಂಡ್ ಮಾಡಲಾಗಿದೆ" ಎಂದು ತನ್ನ ತೀರ್ಪಿನಲ್ಲಿ ತಿಳಿಸಿದೆ.
ಕ್ರೋಮ್ ಉದ್ದೇಶಪೂರ್ವಕವಾಗಿ ಮತ್ತು ಕಾನೂನುಬಾಹಿರವಾಗಿ ಗೂಗಲ್ ಬ್ರೌಸಿಂಗ್ ಹಿಸ್ಟರಿ, ಐಪಿ ವಿಳಾಸಗಳು, ನಿರಂತರ ಕುಕೀ ಐಡೆಂಟಿಫೈಯರ್ಗಳು ಮತ್ತು ಅನನ್ಯ ಬ್ರೌಸರ್ ಐಡೆಂಟಿಫೈಯರ್ಗಳನ್ನು ತಮ್ಮ ಅನುಮತಿಯಿಲ್ಲದೆ ಸಂಗ್ರಹಿಸಿಕೊಂಡಿದೆ ಎಂದು ಅರ್ಜಿದಾರರು ಹೇಳಿದ್ದಾರೆ.