ನವದೆಹಲಿ:ಅಭಿವೃದ್ಧಿ ಹೊಂದಿದ ಒಇಸಿಡಿ (Organisation for Economic Co-operation and Development) ಒಕ್ಕೂಟದ ದೇಶಗಳಲ್ಲಿ ಆರ್ಥಿಕ ಕುಸಿತದ ಸಾಧ್ಯತೆ ಇರುವುದರಿಂದ 2024 ರಲ್ಲಿ ಜಾಗತಿಕವಾಗಿ ಕಚ್ಚಾ ತೈಲದ ಬೇಡಿಕೆ ಕಡಿಮೆಯಾಗುವ ನಿರೀಕ್ಷೆ ಇದೆ ಎಂದು ಅಂತಾರಾಷ್ಟ್ರೀಯ ಇಂಧನ ಸಂಸ್ಥೆ (ಐಇಎ) ಅಂದಾಜು ಮಾಡಿದೆ. ಹಾಗೆಯೇ ವರ್ಷದ ತೈಲ ಬೇಡಿಕೆಯ ಅಂದಾಜನ್ನು ದಿನಕ್ಕೆ 14 ಲಕ್ಷ ಬ್ಯಾರೆಲ್ಗಳಿಂದ (ಬಿಪಿಡಿ) 11 ಲಕ್ಷ ಬಿಪಿಡಿಗೆ ಐಇಎ ಇಳಿಸಿದೆ.
ಔದ್ಯೋಗಿಕ ಚಟುವಟಿಕೆಗಳಲ್ಲಿನ ನಿಧಾನಗತಿ ಮತ್ತು ಕಡಿಮೆ ತೀವ್ರತೆಯ ಚಳಿಗಾಲದ ಕಾರಣಗಳಿಂದ 2024ರಲ್ಲಿ ತೈಲ ಬಳಕೆ ಕಡಿಮೆಯಾಗಲಿದೆ ಎಂದು ಐಇಎ ತನ್ನ ಮಾಸಿಕ ತೈಲ ವರದಿಯಲ್ಲಿ ತಿಳಿಸಿದೆ. ಅಲ್ಲದೆ ಡೀಸೆಲ್ ಚಾಲಿತ ಕಾರುಗಳ ಸಂಖ್ಯೆ ಕಡಿಮೆಯಾಗುತ್ತಿರುವುದು ಕೂಡ ತೈಲ ಬೇಡಿಕೆ ಕಡಿಮೆಯಾಗಲು ಕಾರಣವಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಆದಾಗ್ಯೂ, ಪೆಟ್ರೋಲಿಯಂ ರಫ್ತು ಮಾಡುವ ದೇಶಗಳ ಸಂಘಟನೆಯಾಗಿರುವ ಒಪೆಕ್ 2024 ರಲ್ಲಿ ವಿಶ್ವ ತೈಲ ಬೇಡಿಕೆ ದಿನಕ್ಕೆ 2.25 ಮಿಲಿಯನ್ ಬ್ಯಾರೆಲ್ಗೆ (ಬಿಪಿಡಿ) ಹೆಚ್ಚಾಗಲಿದೆ ಎಂದು ನಿರೀಕ್ಷೆ ಮಾಡಿದೆ. ಬೇಡಿಕೆ ಹೆಚ್ಚಾದಲ್ಲಿ ಬೆಲೆಯೂ ಹೆಚ್ಚಾಗುವ ನಿರೀಕ್ಷೆ ಒಪೆಕ್ನದ್ದಾಗಿದೆ. 2025 ರಲ್ಲಿ ತೈಲ ಬೇಡಿಕೆ 1.2 ಮಿಲಿಯನ್ ಬಿಪಿಡಿ ಆಗಿರಲಿದೆ ಎಂದು ಐಇಎ ಅಂದಾಜಿಸಿದೆ. ಇದು 2024 ರ ಅಂದಾಜಿಗಿಂತ ಸ್ವಲ್ಪ ಹೆಚ್ಚಾಗಿದೆ.