ದುಬೈ: ಇಸ್ರೇಲ್ ಆಕ್ರಮಿತ ಪಶ್ಚಿಮ ದಂಡೆಯ ರಮಲ್ಲಾದಲ್ಲಿರುವ ತನ್ನ ಕಚೇರಿಯ ಮೇಲೆ ಇಸ್ರೇಲಿ ಪಡೆಗಳು ದಾಳಿ ನಡೆಸಿದ್ದು, 45 ದಿನಗಳ ಕಾಲ ಕಚೇರಿಯನ್ನು ಮುಚ್ಚುವಂತೆ ಆದೇಶ ಹೊರಡಿಸಿವೆ ಎಂದು ಕತಾರ್ ಮೂಲದ ಟಿವಿ ವಾಹಿನಿ ಅಲ್ ಜಜೀರಾ ಇಂದು ತಿಳಿಸಿದೆ.
"ಭಾರಿ ಶಸ್ತ್ರಸಜ್ಜಿತ ಮತ್ತು ಮುಖವಾಡ ಧರಿಸಿದ ಇಸ್ರೇಲಿ ಸೈನಿಕರು ಕಟ್ಟಡವನ್ನು ಪ್ರವೇಶಿಸಿ ಕಚೇರಿ ಮುಚ್ಚುವ ಆದೇಶವನ್ನು ನೆಟ್ವರ್ಕ್ನ ವೆಸ್ಟ್ ಬ್ಯಾಂಕ್ ಬ್ಯೂರೋ ಮುಖ್ಯಸ್ಥ ವಾಲಿದ್ ಅಲ್-ಒಮರಿ ಅವರಿಗೆ ಭಾನುವಾರ ಮುಂಜಾನೆ ನೀಡಿದರು. ಈ ನಿರ್ಧಾರಕ್ಕೆ ಅವರು ಯಾವುದೇ ಕಾರಣವನ್ನು ನೀಡಿಲ್ಲ" ಎಂದು ಅಲ್ ಜಜೀರಾ ವರದಿ ಮಾಡಿದೆ.
"ಅಲ್ ಜಜೀರಾ ಕಚೇರಿಯನ್ನು 45 ದಿನಗಳ ಕಾಲ ಮುಚ್ಚುವಂತೆ ನ್ಯಾಯಾಲಯ ಆದೇಶ ನೀಡಿದೆ" ಎಂದು ಇಸ್ರೇಲಿ ಸೈನಿಕರೊಬ್ಬರು ಪತ್ರಕರ್ತ ವಾಲಿದ್ ಅಲ್-ಒಮರಿ ಅವರಿಗೆ ತಿಳಿಸಿದ್ದಾರೆ ಎಂದು ಸಂಭಾಷಣೆಯನ್ನು ಉಲ್ಲೇಖಿಸಿ ಅಲ್ ಜಜೀರಾ ವರದಿ ಮಾಡಿದೆ.
"ತಕ್ಷಣವೇ ನಿಮ್ಮ ಎಲ್ಲಾ ಕ್ಯಾಮೆರಾಗಳನ್ನು ತೆಗೆದುಕೊಂಡು ಕಚೇರಿಯಿಂದ ಹೊರಹೋಗುವಂತೆ ನಾನು ನಿಮಗೆ ತಿಳಿಸುತ್ತಿದ್ದೇನೆ" ಎಂದು ಇಸ್ರೇಲ್ ಸೈನಿಕ ಅರೇಬಿಕ್ ಭಾಷೆಯಲ್ಲಿ ತಿಳಿಸಿದ ಎಂದು ವಾಹಿನಿ ಹೇಳಿಕೊಂಡಿದೆ.
ರಾಷ್ಟ್ರೀಯ ಭದ್ರತೆಗೆ ಅಪಾಯ ಉಂಟು ಮಾಡುತ್ತಿದೆ ಎಂದು ಆರೋಪಿಸಿ ಅಲ್ ಜಜೀರಾ ವಾಹಿನಿಯು ದೇಶದೊಳಗೆ ಕಾರ್ಯನಿರ್ವಹಿಸದಂತೆ ಇಸ್ರೇಲ್ ಸರ್ಕಾರ ಮೇ ತಿಂಗಳಲ್ಲಿ ಆದೇಶ ಹೊರಡಿಸಿತ್ತು. ಅದಾಗಿ ಕೆಲ ತಿಂಗಳ ನಂತರ ಈಗ ರಮಲ್ಲಾದಲ್ಲಿನ ಅಲ್ ಜಜೀರಾ ವಾಹಿನಿಯ ಕಚೇರಿಯನ್ನು ಕೂಡ ಮುಚ್ಚಿಸಲಾಗಿದೆ. ಮೇ ತಿಂಗಳಲ್ಲಿ ಇಸ್ರೇಲಿ ಅಧಿಕಾರಿಗಳು ಅಲ್ ಜಜೀರಾ ತನ್ನ ಕಚೇರಿಯಾಗಿ ಬಳಸುತ್ತಿದ್ದ ಜೆರುಸಲೇಂ ಹೋಟೆಲ್ ಕೋಣೆಯ ಮೇಲೆ ದಾಳಿ ನಡೆಸಿದ್ದರು.
ಅಲ್ ಜಜೀರಾ ಈ ನಿಷೇಧವನ್ನು ಖಂಡಿಸಿದ್ದು, ಇದು ಮಾನವ ಹಕ್ಕುಗಳು ಮತ್ತು ಮಾಹಿತಿ ಪ್ರಸಾರದ ಮೂಲಭೂತ ಹಕ್ಕನ್ನು ಉಲ್ಲಂಘಿಸುವ ಕ್ರಿಮಿನಲ್ ಕೃತ್ಯವಾಗಿದೆ ಎಂದು ಹೇಳಿದೆ.
ಕಳೆದ ತಿಂಗಳು ಗಾಜಾದಲ್ಲಿ ನಡೆಸಲಾದ ವೈಮಾನಿಕ ದಾಳಿಯಲ್ಲಿ ಅಲ್ ಜಜೀರಾ ಪತ್ರಕರ್ತ ಇಸ್ಮಾಯಿಲ್ ಅಲ್-ಘೌಲ್ ಅವರನ್ನು ಹತ್ಯೆ ಮಾಡಿರುವುದಾಗಿ ಇಸ್ರೇಲ್ ಹೇಳಿತ್ತು.
ಅಲ್-ಘೌಲ್ ಅಕ್ಟೋಬರ್ 7 ರ ದಾಳಿಯಲ್ಲಿ ಭಾಗವಹಿಸಿದ ಪ್ರಮುಖ ನುಖ್ಬಾ ಘಟಕದ ಸದಸ್ಯನಾಗಿದ್ದು, ಹೇಗೆ ದಾಳಿ ನಡೆಸಬೇಕೆಂಬುದರ ಬಗ್ಗೆ ಹಮಾಸ್ ಕಾರ್ಯಕರ್ತರಿಗೆ ಮಾರ್ಗದರ್ಶನ ನೀಡಿದ್ದ ಎಂದು ಇಸ್ರೇಲ್ ಮಿಲಿಟರಿ ತಿಳಿಸಿದೆ. ಇಸ್ರೇಲಿ ಪಡೆಗಳ ಮೇಲಿನ ದಾಳಿಗಳನ್ನು ರೆಕಾರ್ಡ್ ಮಾಡಿ, ಅದನ್ನು ಪ್ರಚಾರ ಮಾಡುವಲ್ಲಿ ಆತ ಭಾಗಿಯಾಗಿದ್ದ ಎಂದು ಅದು ಹೇಳಿದೆ.
ಇದನ್ನೂ ಓದಿ : ಶ್ರೀಲಂಕಾ ಅಧ್ಯಕ್ಷರಾಗುವತ್ತ ದಿಸ್ಸಾನಾಯಕೆ ದಾಪುಗಾಲು: ಅಜೇಯ ಮುನ್ನಡೆ ಸಾಧಿಸಿದ ಎಡಪಂಥೀಯ ನಾಯಕ - Sri Lanka Presidential Election