ಕರ್ನಾಟಕ

karnataka

ETV Bharat / international

ಲೆಬನಾನ್ ಮೇಲೆ ಇಸ್ರೇಲ್ ದಾಳಿ: ಹಿಜ್ಬುಲ್ಲಾದ ಮೂವರು ಸದಸ್ಯರು ಸೇರಿ ನಾಲ್ವರ ಸಾವು - Israel Hezbollah War - ISRAEL HEZBOLLAH WAR

ಲೆಬನಾನ್​ ವಿವಿಧ ಪ್ರದೇಶಗಳ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ನಾಲ್ವರು ಸಾವಿಗೀಡಾಗಿದ್ದು, ಆರು ಜನ ಗಾಯಗೊಂಡಿದ್ದಾರೆ.

ಲೆಬನಾನ್​ ಮೇಲೆ ಇಸ್ರೇಲ್ ದಾಳಿಯ ದೃಶ್ಯ
ಲೆಬನಾನ್​ ಮೇಲೆ ಇಸ್ರೇಲ್ ದಾಳಿಯ ದೃಶ್ಯ (IANS)

By ETV Bharat Karnataka Team

Published : Aug 25, 2024, 6:41 PM IST

ಬೈರುತ್: ಲೆಬನಾನ್​ನಲ್ಲಿ ಇಸ್ರೇಲಿ ಸೇನಾ ಪಡೆಗಳು ರವಿವಾರ ನಡೆಸಿದ ಬಾಂಬ್ ದಾಳಿಯಲ್ಲಿ ಮೂವರು ಹಿಜ್ಬುಲ್ಲಾ ಸದಸ್ಯರು ಹಾಗೂ ಅಮಾಲ್ ಮೂವ್​​ಮೆಂಟ್​ನ ಓರ್ವ ಸದಸ್ಯ ಮೃತಪಟ್ಟಿದ್ದು, ಇತರ ಆರು ಮಂದಿ ಗಾಯಗೊಂಡಿದ್ದಾರೆ ಎಂದು ಲೆಬನಾನ್ ಮಿಲಿಟರಿ ಮೂಲಗಳು ತಿಳಿಸಿವೆ. ಲೆಬನಾನ್​ನ ಗಡಿ ಪ್ರದೇಶದ ಅಲ್-ತಿರಿ ಎಂಬ ಗ್ರಾಮದಲ್ಲಿನ ಮನೆಯ ಮೇಲೆ ನಡೆದ ವೈಮಾನಿಕ ದಾಳಿಯಲ್ಲಿ ಇಬ್ಬರು ಹಿಜ್ಬುಲ್ಲಾ ಸದಸ್ಯರು ಸಾವನ್ನಪ್ಪಿದ್ದಾರೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಮಿಲಿಟರಿ ಮೂಲಗಳು ತಿಳಿಸಿವೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಲೆಬನಾನ್​ನ ದೇರ್ ಸೆರಿಯನ್ ಹೊರವಲಯದಲ್ಲಿ ಇಸ್ರೇಲ್ ನಡೆಸಿದ ದಾಳಿಯಲ್ಲಿ ಮತ್ತೊಬ್ಬ ಹಿಜ್ಬುಲ್ಲಾ ಸದಸ್ಯ ಸಾವನ್ನಪ್ಪಿದ್ದು, ಇತರ ಮೂವರು ಗಾಯಗೊಂಡಿದ್ದಾರೆ. ಇದಲ್ಲದೆ, ಆಗ್ನೇಯದಲ್ಲಿರುವ ಖಿಯಾಮ್ ಎಂಬ ಹಳ್ಳಿಯಲ್ಲಿ ಕಾರಿನ ಮೇಲೆ ನಡೆದ ಡ್ರೋನ್ ದಾಳಿಯಲ್ಲಿ ಅಮಾಲ್ ಮೂವ್​ಮೆಂಟ್​ನ ಸದಸ್ಯನೊಬ್ಬ ಸಾವನ್ನಪ್ಪಿದ್ದಾನೆ.

ಲೆಬನಾನ್​ನ ಟೈರ್ ನಗರದ ಮೇಲೆ ನಡೆದ ವೈಮಾನಿಕ ದಾಳಿಯಲ್ಲಿ ಸ್ಥಳಾಂತರಗೊಂಡ ಸಿರಿಯನ್ ಸೇರಿದಂತೆ ಇತರ ಮೂವರು ಗಾಯಗೊಂಡಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ.

ನೂರಾರು ಡ್ರೋನ್​ಗಳು ಮತ್ತು ರಾಕೆಟ್​ಗಳೊಂದಿಗೆ ಹಿಜ್ಬುಲ್ಲಾ ಭಾನುವಾರ ನಡೆಸಿದ ದೊಡ್ಡ ಪ್ರಮಾಣದ ದಾಳಿಗೆ ಪ್ರತಿಕ್ರಿಯೆಯಾಗಿ ಇಸ್ರೇಲ್ ಈ ದಾಳಿಗಳನ್ನು ನಡೆಸಿದೆ. ವಿವಿಧ ಸ್ಥಾನಗಳಿಂದ ಇಸ್ರೇಲ್​ನ ಪ್ರದೇಶದೊಳಗೆ ಡ್ರೋನ್​ಗಳು ಮತ್ತು ರಾಕೆಟ್​ಗಳನ್ನು ಉಡಾಯಿಸಿದ್ದು, ಅವು ಲೆಬನಾನ್-ಪ್ಯಾಲೆಸ್ಟೈನ್ ಗಡಿಯನ್ನು ದಾಟಿ ತನ್ನ ಉದ್ದೇಶಿತ ಗುರಿಗಳಿಗೆ ತಲುಪಿವೆ ಎಂದು ಹಿಜ್ಬುಲ್ಲಾ ಹೇಳಿಕೆಯಲ್ಲಿ ದೃಢಪಡಿಸಿದೆ.

ಇಸ್ರೇಲ್​ನ ಬೃಹತ್​ ದಾಳಿಯ ನಂತರ ಲೆಬನಾನ್ ಪ್ರಧಾನಿ ನಜೀಬ್ ಮಿಕಾಟಿ ತುರ್ತು ಸಭೆ ಕರೆದು ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ. ಇಸ್ರೇಲ್​ನ ಆಕ್ರಮಣವನ್ನು ನಿಲ್ಲಿಸಲು ಅಂತರರಾಷ್ಟ್ರೀಯ ಸಮುದಾಯ ಮಧ್ಯಪ್ರವೇಶಿಸಬೇಕೆಂದು ಅವರು ಈ ಸಂದರ್ಭದಲ್ಲಿ ಮನವಿ ಮಾಡಿದ್ದಾರೆ.

ಬ್ಲೂ ಲೈನ್ ಉದ್ದಕ್ಕೂ ಯುದ್ಧ ಪರಿಸ್ಥಿತಿ ಮತ್ತಷ್ಟು ಉಲ್ಬಣಗೊಳ್ಳದಂತೆ ಎರಡೂ ಕಡೆಯವರು ಕದನ ವಿರಾಮ ಘೋಷಿಸಬೇಕೆಂದು ಲೆಬನಾನ್​ನಲ್ಲಿ ನಿಯೋಜಿತವಾಗಿರುವ ವಿಶ್ವಸಂಸ್ಥೆಯ ಮಧ್ಯಂತರ ಪಡೆ (ಯುಎನ್ಐಎಲ್) ಮತ್ತು ಲೆಬನಾನ್​ಗಾಗಿ ವಿಶ್ವಸಂಸ್ಥೆಯ ವಿಶೇಷ ಸಂಯೋಜಕರ ಕಚೇರಿ (ಯುಎನ್ಎಸ್​ಸಿಒಎಲ್) ಗಳು ಜಂಟಿ ಹೇಳಿಕೆಯಲ್ಲಿ ಮನವಿ ಮಾಡಿವೆ. ಜುಲೈ 30 ರಂದು ಬೈರುತ್​ನ ದಕ್ಷಿಣ ಉಪನಗರಗಳ ಮೇಲೆ ಇಸ್ರೇಲ್ ದಾಳಿ ನಡೆಸಿದ ನಂತರ ಲೆಬನಾನ್-ಇಸ್ರೇಲ್ ಗಡಿಯಲ್ಲಿ ಉದ್ವಿಗ್ನತೆ ತೀವ್ರಗೊಂಡಿದೆ. ಇಸ್ರೇಲ್ ದಾಳಿಯಲ್ಲಿ ಹಿಜ್ಬುಲ್ಲಾದ ಹಿರಿಯ ಮಿಲಿಟರಿ ಕಮಾಂಡರ್ ಫವಾದ್ ಶುಕೂರ್ ಸೇರಿದಂತೆ ಏಳು ಹಿಜ್ಬುಲ್ಲಾ ಸದಸ್ಯರು ಸಾವನ್ನಪ್ಪಿದ್ದರು.

ಇದನ್ನೂ ಓದಿ : ಹಿಜ್ಬುಲ್ಲಾ ಉಗ್ರರಿಂದ ಸಂಭಾವ್ಯ ದಾಳಿ: ಇಸ್ರೇಲ್​ನಾದ್ಯಂತ 48 ಗಂಟೆಗಳ ತುರ್ತು ಪರಿಸ್ಥಿತಿ ಜಾರಿ - Israel Hezbollah War

ABOUT THE AUTHOR

...view details