ಕೊಲಂಬೊ: ಶ್ರೀಲಂಕಾದ ಅಂಡರ್-19 ಕ್ರಿಕೆಟ್ ತಂಡದ ಮಾಜಿ ನಾಯಕಿ ಧಮ್ಮಿಕಾ ನಿರೋಶನಾ ಅವರನ್ನು ಮಂಗಳವಾರ ರಾತ್ರಿ ಗುಂಡಿಕ್ಕಿ ಕೊಲ್ಲಲಾಗಿದೆ. 2002ರಲ್ಲಿ ಶ್ರೀಲಂಕಾ ಅಂಡರ್-19 ತಂಡವನ್ನು ಮುನ್ನಡೆಸಿದ್ದ ವೇಗದ ಬೌಲರ್ ನಿರೋಶನಾ ಅವರನ್ನು ಅಂಬಲಂಗೋಡದಲ್ಲಿರುವ ಅವರ ನಿವಾಸದ ಬಳಿ ಅಪರಿಚಿತ ವ್ಯಕ್ತಿಯೊಬ್ಬ ಗುಂಡಿಕ್ಕಿ ಕೊಂದಿದ್ದಾನೆ.
ಭೂಗತ ಗ್ಯಾಂಗ್ಗಳ ಮಧ್ಯದ ವೈಷಮ್ಯದ ಕಾರಣದಿಂದ ಈ ಹತ್ಯೆ ನಡೆದಿರಬಹುದು ಎಂದು ಶ್ರೀಲಂಕಾ ಪೊಲೀಸರು ಶಂಕಿಸಿದ್ದಾರೆ. 41 ವರ್ಷದ ಮಾಜಿ ಕ್ರಿಕೆಟಿಗ ಧಮ್ಮಿಕಾ ನಿರೋಶನಾರ ಮೇಲೆ 12 ಬೋರ್ ಬಂದೂಕಿನಿಂದ ಗುಂಡು ಹಾರಿಸಲಾಗಿದೆ. ಆರೋಪಿ ಹಂತಕ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸ್ ಮಾಧ್ಯಮ ವಕ್ತಾರ ನಿಹಾಲ್ ತಲ್ದುವಾ ತಿಳಿಸಿದ್ದಾರೆ.
"ಗ್ಯಾಂಗ್ ವೈಷಮ್ಯದ ಪರಿಣಾಮವಾಗಿ ನಡೆದ ಗುಂಡಿನ ದಾಳಿಯಲ್ಲಿ ಭಾಗಿಯಾಗಿರುವ ಶಂಕಿತನನ್ನು ಬಂಧಿಸಲು ತನಿಖೆ ನಡೆಯುತ್ತಿದೆ" ಎಂದು ಪೊಲೀಸರು ತಿಳಿಸಿದ್ದಾರೆ. ಈ ಹಿಂದೆ ಅಂಬಲಂಗೋಡ ಪ್ರದೇಶದಲ್ಲಿ ಇವರ ಆಪ್ತ ಸ್ನೇಹಿತ ದಾಸುನ್ ಮನವಾಡು ಎಂಬುವರು ಕೂಡ ಹತ್ಯೆಗೀಡಾಗಿದ್ದರು. ಹೀಗಾಗಿ ತನಗೂ ಅಪಾಯವಿದೆ ಎಂದರಿತ ನಿರೋಶನಾ ದೇಶದಿಂದ ಪಲಾಯನ ಮಾಡಿದ್ದರು. ಮೂರು ತಿಂಗಳ ಹಿಂದೆಯಷ್ಟೇ ಮರಳಿ ಶ್ರೀಲಂಕಾಗೆ ಬಂದಿದ್ದರು.
ನಿರೋಶನ್ ಹತ್ಯೆ ಮತ್ತು ಪ್ರಥಮ ದರ್ಜೆ ಕ್ರಿಕೆಟಿಗ ಮತ್ತು ದಕ್ಷಿಣ ವಲಯದ ಮಾಜಿ ಕ್ರಿಕೆಟ್ ಆಡಳಿತಾಧಿಕಾರಿ ಎಚ್. ಪ್ರೇಮಸಿರಿ ಅವರ ಹತ್ಯೆಯ ಮಧ್ಯೆ ಏನಾದರೂ ಸಂಬಂಧವಿದೆಯೇ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಆಗಸ್ಟ್ 12, 2016 ರಂದು ಗಾಲೆ ಜಿಲ್ಲಾ ಕ್ರಿಕೆಟ್ ಅಸೋಸಿಯೇಷನ್ನ ಮಾಜಿ ಅಧ್ಯಕ್ಷ ಪ್ರೇಮಸಿರಿ ಅವರನ್ನು ಅವರ ನಿವಾಸದ ಬಳಿ ಅಪರಿಚಿತ ಬಂದೂಕುಧಾರಿಯೊಬ್ಬ ಗುಂಡಿಕ್ಕಿ ಕೊಂದು ಹಾಕಿದ್ದ. ಪ್ರೇಮಸಿರಿ ಅವರ ಹತ್ಯೆಯು ಗಾಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯಗಳ ಅಂತಾರಾಷ್ಟ್ರೀಯ ಮ್ಯಾಚ್ ಫಿಕ್ಸಿಂಗ್ ದಂಧೆಗೆ ಸಂಬಂಧಿಸಿದೆ ಎಂದು ಶಂಕಿಸಲಾಗಿದೆ. ಗಾಲೆ ಇದು ಭೂಗತ ಚಟುವಟಿಕೆಗಳು ಮತ್ತು ಕ್ರಿಕೆಟ್ಗೆ ಸಂಬಂಧಿಸಿದ ಗ್ಯಾಂಗ್ ಹತ್ಯೆಗಳಿಗೆ ಕುಖ್ಯಾತವಾಗಿದೆ.
ನಿರೋಶನಾ 2000ನೇ ಇಸವಿಯಲ್ಲಿ ಸಿಂಗಾಪುರ ವಿರುದ್ಧ ಶ್ರೀಲಂಕಾ ಅಂಡರ್ - 19 ತಂಡಕ್ಕೆ ಪದಾರ್ಪಣೆ ಮಾಡಿದ್ದರು. ವೇಗದ ಬೌಲರ್ ಆಗಿದ್ದ ನಿರೋಶನಾ ಪ್ರಥಮ ದರ್ಜೆ, ಲಿಸ್ಟ್ ಎ ಮತ್ತು ಅಂಡರ್ -19 ಕ್ರಿಕೆಟ್ನಲ್ಲಿ 30 ಕ್ಕಿಂತ ಕಡಿಮೆ ಬೌಲಿಂಗ್ ಸರಾಸರಿ ಹೊಂದಿದ್ದಾರೆ. ಅವರು ಎಂದಿಗೂ ಹಿರಿಯರ ತಂಡದಲ್ಲಿ ಸ್ಥಾನ ಪಡೆಯದಿದ್ದರೂ, ಏಂಜೆಲೊ ಮ್ಯಾಥ್ಯೂಸ್, ಉಪುಲ್ ತರಂಗ ಮತ್ತು ಫರ್ವೀಜ್ ಮಹರೂಫ್ ಸೇರಿದಂತೆ ಹಲವಾರು ಭವಿಷ್ಯದ ಕ್ರಿಕೆಟರುಗಳೊಂದಿಗೆ ಅಂಡರ್ -19 ಮಟ್ಟದಲ್ಲಿ ಆಡಿದ್ದರು.
ಇದನ್ನೂ ಓದಿ : ಒಮಾನ್ ಕರಾವಳಿಯಲ್ಲಿ ಮುಳುಗಿದ ತೈಲ ಹಡಗು: 13 ಭಾರತೀಯರು ಸೇರಿ 16 ಸಿಬ್ಬಂದಿ ನಾಪತ್ತೆ - Oil Ship Capsize